ಎಲ್ಲಾ ಋತು, ಭೂಪ್ರದೇಶಗಳಿಗೆ ತಕ್ಕಂತೆ 'ಪಾದರಕ್ಷೆ' ತಯಾರಿಸುವ ವಿಜಯಪುರದ ಚರ್ಮ ಕುಶಲಕರ್ಮಿಗಳು!

ವಿಜಯಪುರ ನಗರದ ಪುರಾತನ ಶಹಪುರ ದರ್ವಾಜಾ ಪ್ರದೇಶದ ಬಳಿಯಿರುವ ತಮ್ಮ ಚಿಕ್ಕ ಅಂಗಡಿಯಲ್ಲಿ ಕುಳಿತಿರುವ ಬಸವರಾಜ ಸಪ್ತಾಳಕರ್, ಅತ್ಯಂತ ಸೂಕ್ಷ್ಮವಾಗಿ ಸಾಂಪ್ರದಾಯಿಕ ಚರ್ಮದ ಚಪ್ಪಲಿ ತಯಾರಿಸುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ಕೈಯಿಂದಲೇ  ಮಾಡಲಾಗುತ್ತದೆ.
'ಪಾದರಕ್ಷೆ' ತಯಾರಿಸುವ ಕೆಲಸದಲ್ಲಿ ತೊಡಗಿರುವ ಸಪ್ತಾಳಕರ್ ಕುಟುಂಬ
'ಪಾದರಕ್ಷೆ' ತಯಾರಿಸುವ ಕೆಲಸದಲ್ಲಿ ತೊಡಗಿರುವ ಸಪ್ತಾಳಕರ್ ಕುಟುಂಬ

ವಿಜಯಪುರ: ವಿಜಯಪುರ ನಗರದ ಪುರಾತನ ಶಹಪುರ ದರ್ವಾಜಾ ಪ್ರದೇಶದ ಬಳಿಯಿರುವ ತಮ್ಮ ಚಿಕ್ಕ ಅಂಗಡಿಯಲ್ಲಿ ಕುಳಿತಿರುವ ಬಸವರಾಜ ಸಪ್ತಾಳಕರ್, ಅತ್ಯಂತ ಸೂಕ್ಷ್ಮವಾಗಿ ಸಾಂಪ್ರದಾಯಿಕ ಚರ್ಮದ ಚಪ್ಪಲಿ ತಯಾರಿಸುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ಕೈಯಿಂದಲೇ ಮಾಡಲಾಗುತ್ತದೆ. ತಯಾರಿಕೆ ಪ್ರಕ್ರಿಯೆಯ ಪ್ರತಿಯೊಂದು ಹಂತಕ್ಕೂ ಅಗಾಧವಾದ ಕೌಶಲ್ಯದ ಅಗತ್ಯವಿರುತ್ತದೆ ಮತ್ತು ಅದಕ್ಕೆ ಪರಿಪೂರ್ಣ ಆಕಾರ ಮತ್ತು ಗಾತ್ರವನ್ನು ನೀಡಲು ಸಪ್ತಾಳಕರ್, ಪ್ರತಿಯೊಂದು ಜಟಿಲ ಅಂಶವನ್ನು ಗಮನಿಸುತ್ತಾರೆ.  

"ಜೋಡಿ ಚಪ್ಪಲಿಗಳು ಒಂದೇ ರೀತಿ ಕಾಣಬೇಕು, ಉತ್ತಮ ವಿನ್ಯಾಸ ಸೇರಿದಂತೆ ಯಾವುದರಲ್ಲೂ ಯಾವುದೇ ವ್ಯತ್ಯಾಸ ಕಾಣಬಾರದು. ಆಗ ಮಾತ್ರ ಗ್ರಾಹಕರು ಸಂತೃಪ್ತರಾಗಿ, ಹಣ ಪಾವತಿಸುತ್ತಾರೆ ಎಂದು ಹೇಳಿ ಚರ್ಮದ ಪಟ್ಟಿಗಳನ್ನು ಕತ್ತರಿಸುವುದರಲ್ಲಿ ಅವರು ಮಗ್ನರಾಗಿದ್ದರು. 52 ವರ್ಷ ವಯಸ್ಸಿನ  ಸಪ್ತಾಳಕರ್, ಚಮ್ಮಾರ ಕುಟುಂಬದ ನಾಲ್ಕನೇ ತಲೆಮಾರಿನ ಕುಶಲಕರ್ಮಿ ಮತ್ತು ಕೈಯಿಂದ ಮಾಡಿದ ಚರ್ಮದ ಚಪ್ಪಲಿ ತಯಾರಿಸುವ ಕೆಲಸವನ್ನು ಆನುವಂಶಿಕವಾಗಿ  ಮಾಡಿಕೊಂಡು ಬಂದಿದ್ದಾರೆ. ತಮ್ಮ ನೈಪುಣ್ಯತೆ ಮತ್ತು ಪರಿಪೂರ್ಣತೆ ಬಗ್ಗೆ ಹೆಮ್ಮೆಪಡುತ್ತಾರೆ. ಆದರೆ ಜಿಲ್ಲೆಯಲ್ಲಿ ಈ ಕೆಲಸ ಮಾಡುತ್ತಿರುವವರಲ್ಲಿ ಕೇವಲ ಆರು ಅಥವಾ ಏಳು ಕುಶಲಕರ್ಮಿಗಳು ಮಾತ್ರ ಉಳಿದಿದ್ದಾರೆ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.

ಪಾದರಕ್ಷೆಗಳನ್ನು ಶುದ್ಧ ಚರ್ಮದಿಂದ ತಯಾರಿಸಲಾಗಿದ್ದು, ಸಾಂಪ್ರದಾಯಿಕ ವಿನ್ಯಾಸಗಳನ್ನು ಬಳಸಲಾಗುತ್ತದೆ ಎಂದು ಅವರು ಹೇಳಿದರು. ಚಪ್ಪಲಿಗಳಿಗೆ  ರೈತರು ಮತ್ತು ಕುರುಬರು ಹೆಚ್ಚಾಗಿ ಆದ್ಯತೆ ನೀಡುತ್ತಾರೆ ಏಕೆಂದರೆ ಅವುಗಳು ಒರಟುತನದಿಂದ ಕೂಡಿದ್ದು, ಧೀರ್ಘಕಾಲ ಬಾಳಿಕೆ ಬರುತ್ತವೆ. ಗ್ರಾಹಕರು ಭಾರವಾದ ಮತ್ತು ಬಲವಾದ ಚಪ್ಪಲಿಗಳನ್ನು ಬಯಸಿದರೆ  ಪ್ರತಿ ಚಪ್ಪಲಿ ಸುಮಾರು 1 ಕೆಜಿ ಬರುತ್ತದೆ. ಆದಾಗ್ಯೂ, ಪುರುಷರು ಮತ್ತು ಮಹಿಳೆಯರಿಗೆ ಹಗುರವಾದ ವಿನ್ಯಾಸ ಸಹ ತಯಾರಿಸಲಾಗುತ್ತದೆ. ಭಾರವಾದ ಚಪ್ಪಲಿಗಳನ್ನು ಚರ್ಮದ ದಪ್ಪ ಅಡಿಭಾಗ ಮತ್ತು ಉಗುರುಗಳಿಂದ ತಯಾರಿಸಲಾಗುತ್ತದೆ. ಪ್ರಮುಖವಾಗಿ ರೈತರು ಮತ್ತು ಕುರುಬರಿಗೆ ಒರಟಾದ ಭೂಪ್ರದೇಶದಲ್ಲಿ ಹೋಗಲು  ಅವು ಬೇಕಾಗುತ್ತವೆ. ಆಡುಮಾತಿನಲ್ಲಿ ‘ಕೇರ’ ಅಥವಾ ‘ಮೆಟ್ಟು’ ಎಂದು ಕರೆಯಲ್ಪಡುವ ಈ ರೈತ ಸ್ನೇಹಿ ಚಪ್ಪಲಿಗಳು ಈಗ ಫ್ಯಾಷನ್ ಪ್ರಜ್ಞೆಯ ಯುವಕರನ್ನು ಆಕರ್ಷಿಸುತ್ತಿವೆ.

ಈ ಕುರಿತು ಮಾತನಾಡಿದ ಬಸವರಾಜ್, ಈ ಸಾಂಪ್ರದಾಯಿಕ ಚಪ್ಪಲಿಗಳಲ್ಲಿ ಹೆಚ್ಚು ಆಕರ್ಷಕ ಹಾಗೂ ವಿಶಿಷ್ಟವಾಗಿ ಕಾಣುತ್ತಿರುವುದನ್ನು ಯುವಕರು ಕಂಡುಕೊಂಡಿದ್ದಾರೆ. ಕಾರಣ ಏನೂ ಅಂತಾ ತಿಳಿದಿಲ್ಲ, ಆದರೆ ಯುವಕರು ಈ ಚಪ್ಪಲಿಗಳ ಬಗ್ಗೆ ಆಕರ್ಷಿತರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ನಡೆಯುವಾಗ ಉಂಟಾಗುವ ವಿಚಿತ್ರವಾದ ಶಬ್ದವು ಸಾರ್ವಜನಿಕರ ಗಮನವನ್ನು ಸೆಳೆಯುತ್ತದೆ ಎಂದರು. ಬಹುಶಃ ಹುಡುಗರು ಸಾರ್ವಜನಿಕರ ಗಮನ ಸೆಳೆಯಲು ಬಯಸುತ್ತಾರೆ ಎಂದು ಗ್ರಾಹಕ ಸಮರ್ಥ್ ಗುತ್ತೇದಾರ್ ನಗುತ್ತಾ ಹೇಳಿದರು. ಸಾಫ್ಟ್‌ವೇರ್ ಇಂಜಿನಿಯರ್ ಬೆಂಗಳೂರಿನಿಂದ ಸಾಂಪ್ರದಾಯಿಕ ಚಪ್ಪಲಿ ಆರ್ಡರ್ ಮಾಡಲು ಬಂದಿದ್ದರು. ರಾಯಲ್ ಎನ್‌ಫೀಲ್ಡ್‌ನಂತಹ ಭಾರವಾದ ಮೋಟಾರ್‌ಸೈಕಲ್‌ಗಳಿಗೆ ಆದ್ಯತೆ ನೀಡುವ ಸವಾರರು ಕಠಿಣವಾಗಿ ಕಾಣುವ ಚಪ್ಪಲಿ ಇಷ್ಟಪಡುತ್ತಾರೆ ಎಂದು ಅವರು ಹೇಳಿದರು.

<strong>ವಿವಿಧ ವಿನ್ಯಾಸದ ಚಪ್ಪಲಿಗಳು</strong>
ವಿವಿಧ ವಿನ್ಯಾಸದ ಚಪ್ಪಲಿಗಳು

ಬೇಡಿಕೆ ಹೆಚ್ಚುತ್ತಿರುವ ಕಾರಣ ಸದಾ ಕೈ ತುಂಬ ಕೆಲಸವಿರುತ್ತದೆ. ಆದರೆ ಕಾರ್ಮಿಕರ ಕೊರತೆಯಿಂದ  ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಬಸವರಾಜ್ ಅವರ ಕಿರಿಯ ಸಹೋದರ ಚನ್ನಪ್ಪ ಸಪ್ತಾಳಕರ್ ಹೇಳಿದರು.ಇದು ಹೆಚ್ಚು ನುರಿತ ಮತ್ತು ಕಾರ್ಮಿಕ-ತೀವ್ರವಾದ ಕೆಲಸವಾಗಿದ್ದು, ಅಗಾಧವಾದ ತಾಳ್ಮೆ ಅಗತ್ಯವಿರುತ್ತದೆ. ಇಂದಿನ ಪೀಳಿಗೆಯಲ್ಲಿ ಇದು ಕಂಡುಬರುವುದಿಲ್ಲ, ಕಾರ್ಮಿಕರಿಗೆ ತ್ವರಿತ ಕೆಲಸ ಮತ್ತು ಶೀಘ್ರ ಹಣ ಬೇಕು' ಎಂದು ಚನ್ನಪ್ಪ ಹೇಳಿದರು.

ಸುಮಾರು ಮೂರು ದಶಕಗಳ ಹಿಂದೆ ವಿಜಯಪುರ ಜಿಲ್ಲೆಯಲ್ಲಿ 6 ಸಾವಿರಕ್ಕೂ ಹೆಚ್ಚು ಕುಟುಂಬಗಳು ಚಪ್ಪಲಿಗಳನ್ನು ತಯಾರಿಸುತ್ತಿದ್ದವು, ಆದರೆ ಈಗ ಈ  ಸಂಖ್ಯೆ ಕೆಲವರಿಗೆ ಮಾತ್ರ ಸಿಮೀತವಾಗಿದೆ.  ಒಂದು ಜೋಡಿ ಭಾರವಾದ ಚಪ್ಪಲಿ ತಯಾರಿಸಲು ಕನಿಷ್ಠ ಆರು ದಿನಗಳು ಬೇಕಾಗುತ್ತವೆ, ಆದರೆ ಹಗುರವಾದವುಗಳು ಸುಮಾರು ಎರಡು ದಿನಗಳನ್ನು ತೆಗೆದುಕೊಳ್ಳುತ್ತವೆ ಎಂದು ಅವರು ಹೇಳಿದರು. ಬೆಳಗಾವಿ, ಬಾಗಲಕೋಟೆಯ ಚರ್ಮೋದ್ಯಮಗಳು ತಮ್ಮ ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡುತ್ತಿದ್ದರೂ ಗೋಹತ್ಯೆ ನಿಷೇಧ ಜಾರಿಯಾದ ಬಳಿಕ ಸ್ವಲ್ಪ ಕಷ್ಟವಾಗುತ್ತಿದೆ. ನೆಲದ ಮೇಲೆ ನಿರಂತರವಾಗಿ ಕುಳಿತುಕೊಳ್ಳುವುದರಿಂದ ಅವರ ಆರೋಗ್ಯದ ಮೇಲೂ ಪರಿಣಾಮ ಬೀರಲಿದ್ದು,  ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಬೇಕಾಗುತ್ತದೆ ಎಂದು ಬಸವರಾಜ್ ತಿಳಿಸಿದರು.

ಈ ಮಧ್ಯೆ, ಬಸವರಾಜ್ ಅವರ ಮಗ 20 ವರ್ಷ ವಯಸ್ಸಿನ ಶಂಕರ್ ಕೂಡ ಐಟಿಐ ಮುಗಿಸಿದ ನಂತರ ಇದೇ ಕೆಲಸವನ್ನು ಮಾಡುತ್ತಿದ್ದಾರೆ. ಶಂಕರ್  ಕೆಲಸದಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದರು, ಆದಾಗ್ಯೂ, ಅವರು ಅದನ್ನು ದೀರ್ಘಕಾಲದವರೆಗೆ ಮುಂದುವರಿಸುತ್ತಾರೆಯೇ ಎಂದು ಖಚಿತವಾಗಿಲ್ಲ ಎಂದು ಅವರು ಒಪ್ಪಿಕೊಂಡರು. “ನನ್ನ ತಂದೆ ನನ್ನನ್ನು ಕಲಿಯಲು ಒತ್ತಾಯಿಸಲಿಲ್ಲ ಆದರೆ ಖಂಡಿತವಾಗಿಯೂ ನನಗೆ ಕೌಶಲ್ಯಗಳನ್ನು ಕಲಿಸಿದರು. ನನಗೆ ಉತ್ತಮ ಕೆಲಸ ಸಿಗದಿದ್ದರೆ, ನನ್ನ ಜೀವನೋಪಾಯಕ್ಕೆ ಕನಿಷ್ಠ ಈ ಕೌಶಲ್ಯವಿದೆ ಎಂದು ಶಂಕರ್ ಹೇಳಿದರು.

ಶೈಲಿಗಳು ಮತ್ತು ಹೆಸರುಗಳು: ಯಾವುದೇ ನಿರ್ದಿಷ್ಟ ಬ್ರ್ಯಾಂಡ್ ಇಲ್ಲದಿದ್ದರೂ, ಚಪ್ಪಲಿಗಳು ಕೆಲವು ವಿಶಿಷ್ಟ ಹೆಸರುಗಳೊಂದಿಗೆ 20 ಶೈಲಿಗಳಲ್ಲಿ ಬರುತ್ತವೆ. ಅವುಗಳಲ್ಲಿ ಜನಪ್ರಿಯವೆಂದರೆ ಮಗದ, ಸಿಲ್ಬಾರ್, ಮನೆವಾಡಿ, ಗಡ್ಡಿಮೆಟ್ಟು, ಹೆಣಕಿ, ಕೋಕಣಿಮಟ್ ಮತ್ತು ಸಂಪತ್ತಿಗೆ ಸವಾಲ್. ಕೆಲವು ಹೆಸರುಗಳ ಅರ್ಥಗಳು ತಯಾರಕರಿಗೆ ತಿಳಿದಿಲ್ಲ, ಆದಾಗ್ಯೂ, ಜನಪ್ರಿಯ ಚಲನಚಿತ್ರದಲ್ಲಿ ಇದೇ ರೀತಿಯ ಪಾದರಕ್ಷೆಗಳನ್ನು ಧರಿಸಿದ್ದ ದಿವಂಗತ ಕನ್ನಡ ಸೂಪರ್‌ಸ್ಟಾರ್ ರಾಜ್‌ಕುಮಾರ್ ನಟಿಸಿದ ಚಿತ್ರದ ನಂತರ ಸಂಪತ್ತಿಗೆ ಸವಾಲ್ ಎಂದು ಹೆಸರಿಸಲಾಗಿದೆ ಎಂದು ಅವರು ಹೇಳಿದರು.

ಸ್ಥಳೀಯ ಬ್ರ್ಯಾಂಡ್‌ಗೆ ಕಾರ್ಮಿಕರ ಕೊರತೆ: ಡಾ.ಬಾಬು ಜಗಜೀವನ್ ರಾಮ್ ಲೆದರ್ ಇಂಡಸ್ಟ್ರೀಸ್ ಕಾರ್ಪೊರೇಷನ್ ವ್ಯವಸ್ಥಾಪಕ ಎನ್.ಚಂದ್ರಶೇಖರ್ ಮಾತನಾಡಿ, ಸ್ಥಳೀಯ ಬ್ರಾಂಡ್ ಅನ್ನು ಜನಪ್ರಿಯಗೊಳಿಸಲು ನಿಗಮವು ಪ್ರಯತ್ನಗಳನ್ನು ಮಾಡುತ್ತಿದೆ, ಆದರೆ, ನುರಿತ ಕಾರ್ಮಿಕರ ಕೊರತೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ ಎಂದರು.

ನಿಗಮವು ಕೆಲವು ಜಿಲ್ಲೆಗಳಲ್ಲಿ ತನ್ನದೇ ಆದ ಅಂಗಡಿಗಳನ್ನು ಹೊಂದಿದ್ದು, ಹೆಚ್ಚಿನ ಮಳಿಗೆಗಳನ್ನು ತೆರೆಯಲು ಪ್ರಯತ್ನಿಸುತ್ತಿದೆ.ಈ ಸಾಂಪ್ರದಾಯಿಕ ಉದ್ಯೋಗ ಪ್ರೋತ್ಸಾಹಿಸಲು ತರಬೇತಿ ನೀಡಲು, ಹಣಕಾಸಿನ ನೆರವು ನೀಡಲು ಮತ್ತು ಅಂಗಡಿಗಳನ್ನು ತೆರೆಯಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ, ಆದರೆ ಆಸಕ್ತ ಕೆಲಸಗಾರರ ಕೊರತೆಯಲ್ಲಿ ನಾವು ಕಷ್ಟವನ್ನು ಎದುರಿಸುತ್ತಿದ್ದೇವೆ. ಈ ಸಾಂಪ್ರದಾಯಿಕ ಕಾರ್ಮಿಕರು ಕಡಿಮೆ ವೆಚ್ಚದಲ್ಲಿ ವಿವಿಧ ವಿನ್ಯಾಸಗಳನ್ನು ಹೊಂದಿರುವುದರಿಂದ ಯಂತ್ರದಿಂದ ತಯಾರಿಸಿದ ಚರ್ಮದ ಪಾದರಕ್ಷೆ ತಯಾರಕರೊಂದಿಗೆ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com