ಭಾರತ ರತ್ನಕ್ಕೆ ಭಾಜನರಾದ ಜನನಾಯಕ ಕರ್ಪೂರಿ ಠಾಕೂರ್ ಸರಳತೆ ಬಗ್ಗೆ ನಿಮಗೆಷ್ಟು ಗೊತ್ತು?

ಸ್ವಾತಂತ್ರ್ಯ ಹೋರಾಟ ಮತ್ತು ಸಮಾಜವಾದಿ ಆಂದೋಲನಕ್ಕೆ ಅನನ್ಯ ಕೊಡುಗೆ ನೀಡಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ ದಿ. ಕರ್ಪೂರಿ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ.
ಕರ್ಪೂರಿ ಠಾಕೂರ್
ಕರ್ಪೂರಿ ಠಾಕೂರ್

ಸ್ವಾತಂತ್ರ್ಯ ಹೋರಾಟ ಮತ್ತು ಸಮಾಜವಾದಿ ಆಂದೋಲನಕ್ಕೆ ಅನನ್ಯ ಕೊಡುಗೆ ನೀಡಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ ದಿ. ಕರ್ಪೂರಿ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ.

ಜನನಾಯಕ ಎಂದೇ ಖ್ಯಾತಿ ಪಡೆದಿದ್ದ ಕರ್ಪೂರಿ ಠಾಕೂರ್ ಅತ್ಯಂತ ಸರಳ ಜೀವಿಯಾಗಿದ್ದರು. ಠಾಕೂರ್ ಅವರು ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದರೂ ಅವರ ಬಳಿ ಒಂದು ಸ್ವಂತ ಕಾರು ಸಹ ಇರಲಿಲ್ಲ. ಕಾರು ಬಿಡಿ, ಸ್ವಂತ ಮನೆ ಸಹ ಕಟ್ಟಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.

ಕರ್ಪೂರಿ ಠಾಕೂರ್ ಅವರು ಒಬ್ಬ ಶಿಕ್ಷಕ, ಸ್ವಾತಂತ್ರ್ಯ ಹಾಗೂ ಸಮಾಜವಾದಿ ಹೋರಾಟಗಾರ, ರಾಜಕಾರಣಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜನನಾಯಕರಾಗಿದ್ದರು. ನಾಳೆ ಅವರ ಜನ್ಮ ಶತಮಾನೋತ್ಸವದ ದಿನದಂದು ಕೇಂದ್ರ ಸರ್ಕಾರ ಕರ್ಪೂರಿ ಠಾಕೂರ್‌ಗೆ ಭಾರತ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಿದೆ.

ಅವರ ಸರಳತೆಗೆ ಕೆಲವು ಉದಾಹರಣೆ ಇಲ್ಲಿವೆ...

  • ಜನವರಿ 24, 1924 ರಂದು ಬಿಹಾರದ ಸಮಸ್ತಿಪುರ್ ಜಿಲ್ಲೆಯ ಪಿಟೊಂಜಿಯಾದಲ್ಲಿ(ಈಗ ಕರ್ಪೂರಿಗ್ರಾಮ್) ಜನಿಸಿದ ಠಾಕೂರ್ ಅವರು ಬಿಹಾರದ ಉಪ ಮುಖ್ಯಮಂತ್ರಿಯಾಗಿ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸರಳತೆಯ ಬಗ್ಗೆ ಅನೇಕ ಕಥೆಗಳಿವೆ. 1952 ರಲ್ಲಿ ಅವರು ಮೊದಲ ಬಾರಿಗೆ ಶಾಸಕರಾದಾಗ ಅವರು ಆಸ್ಟ್ರಿಯಾಗೆ ಹೋಗುವ ನಿಯೋಗದಲ್ಲಿ ಇದ್ದರು. ಆದರೆ ಅವರ ಬಳಿ ಧರಿಸಲು ಒಂದು ಕೋಟ್ ಸಹ ಇರಲಿಲ್ಲ. ಗೆಳೆಯನ ಬಳಿ ಕೋಟು ಕೇಳಿದಾಗ ಅದೂ ಹರಿದದ್ದು ತಂದು ಕೊಟ್ಟಿದ್ದರು. ಕರ್ಪೂರಿ ಅದೇ ಕೋಟ್ ಧರಿಸಿ ಹೊರಟು ಹೋಗಿದ್ದರು. ಅಲ್ಲಿ ಯುಗೊಸ್ಲಾವಿಯಾದ ಮುಖ್ಯಸ್ಥ ಮಾರ್ಷಲ್ ಟಿಟೊ ಅವರು ಹರಿದ ಕೋಟ್ ಅನ್ನು ಗಮನಸಿ ಅವರಿಗೆ ಹೊಸ ಕೋಟ್ ಅನ್ನು ಉಡುಗೊರೆಯಾಗಿ ನೀಡಿದ್ದರು.
  • ಕರ್ಪೂರಿ ಠಾಕೂರ್ ಅವರ ಬಳಿ ಕಾರು ಇರಲಿಲ್ಲ. 80ರ ದಶಕದಲ್ಲಿ ಕರ್ಪೂರಿ ಠಾಕೂರ್ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. ಒಮ್ಮೆ ಊಟಕ್ಕೆ ನಿವಾಸಕ್ಕೆ ಹೋಗಬೇಕಿತ್ತು. ಸ್ವಲ್ಪ ಹೊತ್ತು ಅವರದೇ ಪಕ್ಷದ ಶಾಸಕರಿಗೆ ಜೀಪ್ ಕೊಡಿ ಎಂದು ಕೇಳಿದಾಗ, ಆ ಶಾಸಕರು, ನನ್ನ ಜೀಪಿನಲ್ಲಿ ಎಣ್ಣೆ ಇಲ್ಲ. ನೀವು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಿರಿ. ಕಾರು ಏಕೆ ಖರೀದಿಸಬಾರದು? ಎಂದು ಪ್ರಶ್ನಿಸಿದ್ದರು. ಅವರು ಸದಾ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು.
  • ಹಿರಿಯ ಪತ್ರಕರ್ತ ಸುರೇಂದ್ರ ಕಿಶೋರ್ ಅವರು 1977 ರ ಒಂದು ಘಟನೆಯ ಬಗ್ಗೆ ಬರೆದಿದ್ದಾರೆ, ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನವನ್ನು ಪಾಟ್ನಾದ ಕದಮ್ ಕುವಾನ್‌ನಲ್ಲಿರುವ ಚರಖಾ ಸಮಿತಿ ಕಟ್ಟಡದಲ್ಲಿ ಆಚರಿಸಲಾಯಿತು. ಇದರಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್, ನಾನಾಜಿ ದೇಶಮುಖ್ ಸೇರಿದಂತೆ ದೇಶಾದ್ಯಂತ ಹಲವು ಮುಖಂಡರು ಭಾಗವಹಿಸಿದ್ದರು.  ಬಿಹಾರ ಮುಖ್ಯಮಂತ್ರಿ ಕರ್ಪೂರಿ ಠಾಕುರ್ ಅವರು ಹರಿದ ಕುರ್ತಾ, ಹರಿದ ಚಪ್ಪಲಿಯೊಂದಿಗೆ ಆಗಮಿಸಿದರು. ಇದನ್ನು ಗಮನಿಸಿದ ಚಂದ್ರಶೇಖರ್ ಅವರು ಒಬ್ಬ ನಾಯಕ ‘ಮುಖ್ಯಮಂತ್ರಿ ಚೆನ್ನಾಗಿ ಬದುಕಲು ಎಷ್ಟು ಸಂಬಳ ಪಡೆಯಬೇಕು? ಎಂದು ಪ್ರಶ್ನಿಸಿದರ. ಆಗ ಎಲ್ಲರೂ ನಗಲು ಪ್ರಾರಂಭಿಸಿದರು. ಚಂದ್ರಶೇಖರ್ ತಮ್ಮ ಆಸನದಿಂದ ಎದ್ದು ನಿಂತು ತಮ್ಮ ಕುರ್ತಾವನ್ನು ಹರಡಿ, ಕರ್ಪೂರಿ ಅವರ ಕುರ್ತಾ ನಿಧಿಗೆ ದೇಣಿಗೆ ನೀಡಿ ಎಂದು ಹೇಳಲು ಪ್ರಾರಂಭಿಸಿದರು. ನೂರಾರು ರೂಪಾಯಿ ಹಣ ಸಂಗ್ರಹವಾಗಿದ್ದು, ಅದರಿಂದ ನೀವು ಕುರ್ತಾ-ಧೋತಿಯನ್ನು ಮಾತ್ರ ಖರೀದಿಸುತ್ತೀರಾ ಎಂದು ಕರ್ಪೂರಿ  ಅವರನ್ನು ಕೇಳಿದಾಗ, ಕರ್ಪೂರಿ ಅವರು "ನಾನು ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತೇನೆ" ಎಂದು ಹೇಳಿದ್ದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ; 26 ತಿಂಗಳು ಜೈಲುವಾಸ
ಕರ್ಪೂರಿ ಠಾಕೂರ್ ಅವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ತೊಡಗಿಸಿಕೊಂಡ ಸ್ವಾತಂತ್ರ್ಯ ಹೋರಾಟಗಾರ. ಸ್ವಾತಂತ್ರ್ಯ ಹೋರಾಟದಲ್ಲಿ ಧುಮಿಕಿದ ಕರ್ಪೂರಿ ಠಾಕೂರ್ 26 ತಿಂಗಳು ಜೈಲು ವಾಸ ಸಹ ಅನುಭವಿಸಿದ್ದರು.

ಇನ್ನು ಠಾಕೂರ್ ಅವರು ಮೊದಲ ಬಾರಿಗೆ 1970 ರಿಂದ 1971 ರ ವರೆಗೆ ಮತ್ತು ಎರಡನೇ ಬಾರಿಗೆ 1977ರಿಂದ 1979ರ ವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. 1988ರಲ್ಲಿ ತಮ್ಮ 64 ವಯಸ್ಸಿನಲ್ಲಿ ನಿಧನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com