ವಿಜಯಪುರ: ಮೂರು ವರ್ಷಗಳ ಹಿಂದೆ ಜಿಯೋಗ್ರಾಫಿಕಲ್ ಇಂಡಿಕೇಷನ್ (ಜಿಐ) ಟ್ಯಾಗ್ ಪಡೆದ ವಿಜಯಪುರ ನಿಂಬೆ ಸಸಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ವಿಜಯಪುರ ಜಿಲ್ಲೆಯ ರೈತರು ಈ ವರ್ಷ ಇಲ್ಲಿಯವರೆಗೆ 5 ಲಕ್ಷ ನಿಂಬೆ ಸಸಿಗಳನ್ನು ಮಾರಾಟ ಮಾಡಿದ್ದಾರೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ವಿಜಯಪುರವು ರಾಜ್ಯದಲ್ಲೇ ಅತಿ ಹೆಚ್ಚು ನಿಂಬೆ ಬೆಳೆಯುವ ಜಿಲ್ಲೆಯಾಗಿದ್ದು, ಜಿಲ್ಲೆಯ ಇಂಡಿ ತಾಲೂಕೊಂದರಲ್ಲೇ ಶೇ 50 ಕ್ಕಿಂತ ಹೆಚ್ಚು ಬೆಳೆಯಲಾಗುತ್ತದೆ.
ಸಾಮಾನ್ಯವಾಗಿ ವಿಜಯಪುರ, ಕಲಬುರಗಿ, ಬಾಗಲಕೋಟೆ, ರಾಯಚೂರು, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ರೈತರು ಸಸಿಗಳನ್ನು ಖರೀದಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ವಿಜಯಪುರ ನಿಂಬೆಗೆ ಜಿಐ ಟ್ಯಾಗ್ ಸಿಕ್ಕಿರುವುದರಿಂದ ಸೊಲ್ಲಾಪುರ, ಪಂಢರಪುರ ಮತ್ತು ರೈತರು ಸಹ ಈ ನಿಂಬೆ ಸಸಿಗಳನ್ನುಖರಿದೀಸುತ್ತಿದ್ದಾರೆ.
ಮಹಾರಾಷ್ಟ್ರದ ಉಸ್ಮಾನಾಬಾದ್ ಮತ್ತು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಜಿಲ್ಲೆಗಳಿಂದ ಸಸಿಗಳನ್ನು ಖರೀದಿಸಲು ಜಿಲ್ಲೆಯ ನರ್ಸರಿಗಳು ಬರಲಾರಂಭಿಸಿವೆ. ಸಸಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಜಿಲ್ಲೆಯ ಅದರಲ್ಲೂ ಇಂಡಿ ತಾಲೂಕಿನ ಹಲವಾರು ರೈತರು ತಮ್ಮ ಜಮೀನಿನ ಹೆಚ್ಚಿನ ಭಾಗವನ್ನು ನಿಂಬೆ ನರ್ಸರಿಗೆ ಮೀಸಲಿಟ್ಟಿದ್ದಾರೆ. ಇಂಡಿ ತಾಲ್ಲೂಕಿನಲ್ಲಿ ಕೆಲ ರೈತರು ನಿಂಬೆ ಬೆಳೆ ಜೊತೆ 1 ರಿಂದ 2 ಎಕರೆ ಜಮೀನು ಮೀಸಲಿಟ್ಟು, ನಿಂಬೆ ಸಸಿಗಳನ್ನು ಬೆಳೆಸುತ್ತಾರೆ. ಪೋಷಕಾಂಶವುಳ್ಳ ಗೊಬ್ಬರ ಬಳಸಿ, ಮಣ್ಣು ಹದ ಮಾಡುತ್ತಾರೆ. ಸಸಿ ಹೊರ ತೆಗೆಯುವಾಗ ಬೇರು ಕತ್ತರಿಸದಂತೆ ಮುಂಜಾಗ್ರತೆ ವಹಿಸುತ್ತಾರೆ. ಗುಣಮಟ್ಟದ ಸಸಿಗಳನ್ನು ಬೆಳೆಸಿ, ಮಾರುತ್ತಾರೆ. ಕೆಲ ರೈತರು ಒಂದು ವರ್ಷದ ಸಸಿಗೆ 13 ರು. ಎರಡು ವರ್ಷದ ಸಸಿಗೆ 25 ರು. ಅದಕ್ಕಿಂತ ಜಾಸ್ತಿ ದೊಡ್ಡವುಗಳಿಗೆ 100 ನಂತೆ ಮಾರಾಟ ಮಾಡಿದ್ದಾರೆ.
ವಸ್ತು ಅಥವಾ ಉತ್ಪನ್ನವೊಂದು ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಸಂಬಂಧಿಸಿದ್ದು ಅಥವಾ ಅಲ್ಲಿ ಹುಟ್ಟಿಕೊಂಡಿರುವುದು ಎಂಬುದನ್ನು ಸೂಚಿಸುವುದಕ್ಕಾಗಿ ನೀಡುವ ಗುರುತೇ ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ ಅಥವಾ ಜಿಐ ಟ್ಯಾಗ್. ನಿರ್ದಿಷ್ಟ ವಸ್ತುವಿನ ಗುಣಮಟ್ಟ, ಖ್ಯಾತಿ ಅಥವಾ ಇತರ ಗುಣಲಕ್ಷಣಗಳನ್ನು ಗುರುತಿಸಲು ಜಿಐ ಟ್ಯಾಗ್ ಮಾನದಂಡವಾಗಿ ನೆರವಾಗುತ್ತದೆ.
Advertisement