ಕಲಿಕೆಗೆ ವಯಸ್ಸಿನ ಮಿತಿಯಿಲ್ಲ: ಜೈಪುರದ 71 ವರ್ಷದ ನಿವೃತ್ತ ಬ್ಯಾಂಕರ್ CA ಫೈನಲ್ ಪರೀಕ್ಷೆಯಲ್ಲಿ ತೇರ್ಗಡೆ!

71ರ ತಾರಾಚಂದ್ ಹನುಮಾನ್‌ಗಢ ಜಿಲ್ಲೆಯ ಸಂಗರಿಯಾದವರು. ಅವರು ಅಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ 1976 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೆರ್ ಮತ್ತು ಜೈಪುರ (ಈಗ SBI) ನಲ್ಲಿ ತಮ್ಮ ಬ್ಯಾಂಕಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದರು.
Tarachand Agarwal with family
ಕುಟುಂಬಸ್ಥರ ಜೊತೆ ತಾರಾಚಂದ್ ಅಗರ್ವಾಲ್
Updated on

ರಾಜಸ್ಥಾನ: ಸಾಧನೆಗೆ ಚಿಕ್ಕ ಮತ್ತು ಯುವ ವಯಸ್ಸು ಬೇಕು ಅಂತಾರೆ. ಆದರೆ ರಾಜಸ್ಥಾನದ ಜೈಪುರದ 71 ವರ್ಷದ ತಾರಾಚಂದ್ ಅಗರ್ವಾಲ್ ಅವರ ಸಾಧನೆ ನೋಡಿದರೆ ಸಾಧನೆಗೆ ವಯಸ್ಸಿನ ಮಿತಿ ಇಲ್ಲ, ಮನಸ್ಸು ಬೇಕು ಎಂಬುದು ಸಾಬೀತಾಗಿದೆ.

ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿರುವ ತಾರಾಚಂದ್ ಅಗರ್ವಾಲ್ ಕಠಿಣ ಪರೀಕ್ಷೆಗಳಲ್ಲಿ ಒಂದಾದ - ಚಾರ್ಟರ್ಡ್ ಅಕೌಂಟೆನ್ಸಿ (CA) ಅಂತಿಮ ಪರೀಕ್ಷೆಯನ್ನು 71ನೇ ವಯಸ್ಸಿನಲ್ಲಿ ಪಾಸಾಗಿದ್ದಾರೆ. ಈ ಮೂಲಕ ಇಂದಿನ ತಲೆಮಾರಿನವರಿಗೆ ಸ್ಫೂರ್ತಿಯಾಗಿದ್ದಾರೆ.

ತಾರಾಚಂದ್ ಸಾಧನೆ

ಜುಲೈ 6 ರಂದು, ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಸಿಎ ಅಂತಿಮ ಫಲಿತಾಂಶಗಳನ್ನು ಘೋಷಿಸಿದಾಗ ಒಬ್ಬರ ಹೆಸರು ಭಾರೀ ಸುದ್ದಿ ಮಾಡಿತು. ಅದು ತಾರಾಚಂದ್ ಅಗರ್ವಾಲ್, ಹೆಚ್ಚಿನವರು ನಿವೃತ್ತಿಯ ನಂತರ ಶೈಕ್ಷಣಿಕ ಅಧ್ಯಯನ ಮಾಡಲು ಹಿಂಜರಿಯುತ್ತಾರೆ, ಆದರೆ ತಾರಾಚಂದ್ ಅಗರ್ವಾಲ್ ಅದನ್ನು ಪ್ರಯತ್ನಿಸಿದ್ದು ಮಾತ್ರವಲ್ಲ ಸಾಧಿಸಿಯೇ ಬಿಟ್ಟರು.

71ರ ತಾರಾಚಂದ್ ಹನುಮಾನ್‌ಗಢ ಜಿಲ್ಲೆಯ ಸಂಗರಿಯಾದವರು. ಅವರು ಅಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ 1976 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೆರ್ ಮತ್ತು ಜೈಪುರ (ಈಗ SBI) ನಲ್ಲಿ ತಮ್ಮ ಬ್ಯಾಂಕಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದರು. 38 ವರ್ಷಗಳ ಕಾಲ ಸೇವೆ ಸಲ್ಲಿಸಿ 2014 ರಲ್ಲಿ ಸಹಾಯಕ ಜನರಲ್ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದರು. 2020 ರಲ್ಲಿ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಅಗರ್ವಾಲ್ ತಮ್ಮ ಪತ್ನಿ ದರ್ಶನಾ ಅವರನ್ನು ಕಳೆದುಕೊಂಡರು, ಪತ್ನಿಯ ಅಗಲುವಿಕೆ ತಾರಾಚಂದ್ ಅವರಿಗೆ ಭಾರೀ ವೇದನೆಯನ್ನು ತಂದಿತು. ಬದುಕು ಶೂನ್ಯವೆನ್ನಿಸತೊಡಗಿತು.

ಖಿನ್ನತೆಗೆ ಒಳಗಾದ ಅಗರ್ವಾಲ್, ಆಧ್ಯಾತ್ಮಿಕ ಓದುವಿಕೆಯಲ್ಲಿ - ವಿಶೇಷವಾಗಿ ಭಗವದ್ಗೀತೆಯಲ್ಲಿ ಸಾಂತ್ವನವನ್ನು ಹುಡುಕಿದರು. ಭಗವದ್ಗೀತೆಯ ಸಾರ ಅಗರ್ವಾಲ್ ಜೀವನ ತಿರುವಿಗೆ ಕಾರಣವಾಯಿತು. ಜೀವನವು ಮಹಾಭಾರತದಂತೆ ಒಂದು ಯುದ್ಧ ಎಂದು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ - ನೀವು ಅದನ್ನು ಧೈರ್ಯದಿಂದ ಎದುರಿಸಬೇಕು ಎಂದು ಭಗವದ್ಗೀತೆ ಶ್ಲೋಕಗಳು ಅರ್ಥಮಾಡಿಸಿದವು.

ಭಗವದ್ಗೀತೆ ಶ್ಲೋಕವನ್ನು ಅರ್ಥಮಾಡಿಕೊಂಡು ಅದನ್ನು ಜೀವನದಲ್ಲಿ ಪಾಲಿಸಲು ಮುಂದಾದರು. ಎಂ.ಕಾಂ ಮಾಡಿ ಪಿಹೆಚ್ ಡಿ ಮಾಡಬೇಕೆಂದು ಅಂದುಕೊಂಡಾಗ ಅವರ ಪುತ್ರರಾದ ಲಲಿತ್ ಮತ್ತು ಅಮಿತ್ ಮತ್ತು ಮೊಮ್ಮಗಳು ಅಂಕಿಕಾ ದೆಹಲಿ ಮೂಲದ ಸಿಎ ಮತ್ತು ತೆರಿಗೆ ಸಲಹೆಗಾರರ ಬಳಿ ಕರೆದುಕೊಂಡು ಹೋದರು. ಸಿಎ ಮಾಡಿ ಎಂದು ಒತ್ತಾಯಿಸಿ ಹುರಿದುಂಬಿಸಿದರು.

Tarachand Agarwal with wife
ತಾರಾಚಂದ್ ಅಗರ್ವಾಲ್, ದರ್ಶನಾ

ಶಿಸ್ತಿನ ವಿದ್ಯಾರ್ಥಿ

ಅಗರ್ವಾಲ್ ಜುಲೈ 2021 ರಲ್ಲಿ CA ಕೋರ್ಸ್‌ಗೆ ನೋಂದಾಯಿಸಿಕೊಂಡರು. ಬರೀ ಸೇರಿಕೊಂಡಿದ್ದು ಮಾತ್ರವಲ್ಲ ಶಿಸ್ತಿನ ಜೀವನಶೈಲಿ ಆರಂಭಿಸಿದರು. ಬೆಳಗ್ಗೆ ಬೇಗನೆ ಎದ್ದು ಯೋಗ ಮತ್ತು ಪ್ರಾಣಾಯಾಮ ಅಭ್ಯಾಸ ಮಾಡುವುದು, ನಂತರ 10-12 ಗಂಟೆಗಳ ಅಧ್ಯಯನ. ನಾಲ್ಕು ಗಂಟೆ ಬರವಣಿಗೆ ಅಭ್ಯಾಸಕ್ಕೆ ಮೀಸಲಾಗಿದ್ದವು. ಇಲ್ಲಿ ಮುಖ್ಯವಾದ ವಿಷಯವೆಂದರೆ ಅವರು ಯಾವುದೇ ಕೋಚಿಂಗ್ ಗೆ ಸೇರಿರಲಿಲ್ಲ. ತಮ್ಮಷ್ಟಕ್ಕೆ ICAI ನಿಂದ ಅಧ್ಯಯನ ಸಾಮಗ್ರಿ ತೆಗೆದುಕೊಂಡು ಬಂದು ಅಧ್ಯಯನ ಮಾಡಿದ್ದಷ್ಟೆ.

ಮೇ 2022 ರಲ್ಲಿ ಫೌಂಡೇಶನ್ ಪರೀಕ್ಷೆಯಲ್ಲಿ, ಜನವರಿ 2023 ರಲ್ಲಿ ಇಂಟರ್ಮೀಡಿಯೇಟ್‌ನಲ್ಲಿ ಉತ್ತೀರ್ಣರಾದರು. ಮೇ 2024 ರಲ್ಲಿ ನಡೆದ ಅಂತಿಮ ಪರೀಕ್ಷೆ ಸಮಯದಲ್ಲಿ ಆರೋಗ್ಯ ಕೈಕೊಟ್ಟಿತು. ಭುಜದ ನೋವಿನಿಂದ ಬರೆಯುವುದು ಅಸಾಧ್ಯವಾಯಿತು. ಆದರೂ, ಅವರು ಬಿಟ್ಟುಕೊಡಲಿಲ್ಲ. ನನಗೆ ಅನಾರೋಗ್ಯವಿದ್ದರೂ ಉತ್ಸಾಹವಿತ್ತು. ಅಂತಿಮವಾಗಿ, ಕಳೆದ ಮೇ 2025 ರಲ್ಲಿ, ಪರಿಶ್ರಮಕ್ಕೆ ಫಲ ಸಿಕ್ಕಿತು. ತಾರಾಚಂದ್ ಅಗರ್ವಾಲ್ CA ಫೈನಲ್‌ನಲ್ಲಿ ಉತ್ತೀರ್ಣರಾದರು.

ಅವರ ಯಶಸ್ಸಿನ ಹಿಂದೆ ಕುಟುಂಬಸ್ಥರ ಬೆಂಬಲವಿದೆ. ಅವರ ಪುತ್ರರು ಪ್ರತಿ ಹೆಜ್ಜೆಯಲ್ಲೂ ಅವರ ಬೆನ್ನಿಗೆ ನಿಂತರು. ಅವರ ಸೊಸೆಯಂದಿರು ಮತ್ತು ಮೊಮ್ಮಕ್ಕಳು ನೋಂದಣಿಗೆ ಸಹಾಯ ಮಾಡಿದರು.

ಸಿಎ ಆಕಾಂಕ್ಷಿಯಾದ ಮೊಮ್ಮಗಳು ಅಂಕಿಕಾ ಅವರೊಂದಿಗಿನ ಅವರ ಬಾಂಧವ್ಯವು ವಿಶೇಷವಾಗಿ ಅಧ್ಯಯನಕ್ಕೆ ಸಹಾಯ ಮಾಡಿತು.

ಜಗತ್ತಿಗೆ ಒಂದು ಸಂದೇಶ

ಅಗರ್ವಾಲ್‌ಗೆ, ಇದು ಕೇವಲ ವೈಯಕ್ತಿಕ ಸಾಧನೆಯಲ್ಲ, ಸಮಾಜಕ್ಕೆ ಮಾದರಿಯಾಗಿದೆ. ಹೆಚ್ಚಿನ ಜನರು ನಿವೃತ್ತಿಯಾದಾಗ ಜೀವನವು ಕೊನೆಗೊಳ್ಳುತ್ತದೆ ಎಂದು ನಂಬುತ್ತಾರೆ, ವಿಶೇಷವಾಗಿ ಸಂಗಾತಿಯನ್ನು ಕಳೆದುಕೊಂಡ ನಂತರ. ಆದರೆ ಬದುಕಲ್ಲಿ ಉತ್ಸಾಹ, ಪ್ರೀತಿಯಿದ್ದರೆ ಸಾವಿನವರೆಗೂ ಬದುಕು ಇರುತ್ತದೆ. ಕನಸು ಕಾಣಬಹುದು, ಕಲಿಯಬಹುದು ಮತ್ತು ಬೆಳೆಯಬಹುದು ಎಂಬುದನ್ನು ನನ್ನನ್ನು ನೋಡಿ ಕಲಿಯಬಹುದು ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com