ಹಿರಿಯ ನಾಗರಿಕರ ತಂತ್ರಜ್ಞಾನ ಆಧಾರಿತ ಆನ್ ಲೈನ್ ವೇದಿಕೆ Sukoon Unlimited

ಸುಕೂನ್ ಅನ್‌ಲಿಮಿಟೆಡ್ ಭಾರತದ ಮೊದಲ ಹಿರಿಯ ನಾಗರಿಕರ ತಂತ್ರಜ್ಞಾನ ಆಧಾರಿತ ಆನ್ ಲೈನ್ ವೇದಿಕೆಯಾಗಿದೆ.
Vibha Singhal and members of online community
ಸುಕೂನ್ ವೇದಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಮತ್ತು ಸಂಸ್ಥಾಪಕಿ ವಿಭಾ ಸಿಂಗಲ್
Updated on

ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ಟಪ್ ಗಳು ಭಾರತದಲ್ಲಿ ಜನಪ್ರಿಯವಾಗುತ್ತಿದೆ. ಉದ್ಯಮಕ್ಕೆ ಸಂಬಂಧಪಟ್ಟ ಸ್ಟಾರ್ಟಪ್ ಗಳು ಹುಟ್ಟಿಕೊಳ್ಳುವುದು ಹೆಚ್ಚು. ಸರ್ಕಾರವೂ ಸ್ಟಾರ್ಟಪ್ ಗಳಿಗೆ ಪ್ರೋತ್ಸಾಹ ನೀಡುತ್ತದೆ.

ಇಲ್ಲೊಬ್ಬರು ಯುವತಿ ಇಳಿವಯಸ್ಸಿನವರಿಗೆ ಸ್ಟಾರ್ಟಪ್ ನ್ನು ಆರಂಭಿಸಿದ್ದಾರೆ. ಸಾಮಾನ್ಯವಾಗಿ ಇಳಿವಯಸ್ಸು ಎಂದರೆ ಶಾರೀರಿಕವಾಗಿ ಮತ್ತು ದೈಹಿಕವಾಗಿ ಕುಂದುವುದು ಎಂಬ ಭಾವನೆಯಿರುತ್ತದೆ. ಆದರೆ ಹಲವರಿಗೆ ಅದರಲ್ಲೂ ನಗರ ಪ್ರದೇಶ ನಿವಾಸಿಗಳಿಗೆ ಒಂಟಿತನ, ಪ್ರತ್ಯೇಕತೆ ಕಾಡಬಹುದು. ಅನೇಕ ಕಡೆಗಳಲ್ಲಿ ವಯಸ್ಸಾದವರು ಒಬ್ಬೊಬ್ಬರೇ ಜೀವನ ಮಾಡುವುದು ಕೂಡ ಉಂಟು.

ಮಕ್ಕಳು, ಮೊಮ್ಮಕ್ಕಳು ಇದ್ದರೆ ಅವರು ಅವರ ಜೀವನದಲ್ಲಿ ಬ್ಯುಸಿಯಾಗಿರುತ್ತಾರೆ. ವಯಸ್ಸಾದವರ ಕಷ್ಟ-ಕಾರ್ಪಣ್ಯಗಳನ್ನು, ನೋವು-ನಲಿವುಗಳನ್ನು ಆಲಿಸುವವರೇ ಇರುವುದಿಲ್ಲ. ಅಂಥಹ ಇಳಿವಯಸ್ಸಿನವರಿಗೆ ಆಸರೆಯಾಗಿಯೇ ಐಐಎಂ ಅಹ್ಮದಾಬಾದ್ ಪದವೀಧರೆ ಕೋಲ್ಕತ್ತಾ ಮೂಲದ ವಿಭಾ ಸಿಂಗಲ್ ಇತ್ತೀಚೆಗೆ ಸುಕೂನ್ ಅನ್ ಲಿಮಿಟೆಡ್ ಎಂಬ ಸ್ಟಾರ್ಟಪ್ ನ್ನು ಆರಂಭಿಸಿದ್ದಾರೆ.

ಏನಿದು ಸುಕೂನ್ ಅನ್ ಲಿಮಿಟೆಡ್?

ಸುಕೂನ್ ಅನ್‌ಲಿಮಿಟೆಡ್ ಭಾರತದ ಮೊದಲ ಹಿರಿಯ ನಾಗರಿಕರ ತಂತ್ರಜ್ಞಾನ ಆಧಾರಿತ ಆನ್ ಲೈನ್ ವೇದಿಕೆಯಾಗಿದೆ. ವಯಸ್ಸಾದವರಿಗೆ ಸಂತೋಷ, ಕಲಿಕೆ, ಯೋಗಕ್ಷೇಮ ವಿಚಾರಿಸುವುದು, ಅವರಿಂದ ಇನ್ನೂ ಸಮಾಜಕ್ಕೆ ಕೊಡುಗೆಯಿದೆ ಎಂಬುದನ್ನು ತೋರಿಸಿಕೊಟ್ಟು ತಾವು ಒಂಟಿಯಲ್ಲ ಎಂಬ ಭಾವನೆ ಮೂಡುವುದಾಗಿದೆ.

ವಯಸ್ಸಾಗುವುದು ಎಂದರೆ ಜೀವನದಲ್ಲಿ ಹಿನ್ನೆಲೆಗೆ ಸರಿಯುವುದು ಎಂದಲ್ಲ. ಹಿರಿಯರು ಜೀವನದಲ್ಲಿ ಸಾಕಷ್ಟು ಬದ್ಧಿವಂತರು, ಅನುಭವಸ್ಥರು, ಪ್ರತಿಭೆ ಉಳ್ಳವರು ಮತ್ತು ದಯೆ ಹೊಂದಿದವರಾಗಿರುತ್ತಾರೆ. ಆದರೆ ಅವರ ಮಾತುಗಳನ್ನು ಕೇಳುವವರು, ಅವರ ಮಾತಿಗೆ ಬೆಲೆ ಕೊಡುವವರು ಎಷ್ಟು ಜನರು ಇರುತ್ತಾರೆ, ಅಂಥವರಿಗೆ ನಮ್ಮ ವೇದಿಕೆ ಅವಕಾಶ ಕಲ್ಪಿಸುತ್ತದೆ. ಹಿರಿಯರ ಭಾವನಾತ್ಮಕ, ಮಾನಸಿಕ ಹಾಗೂ ಸಾಮಾಜಿಕ ಯೋಗ-ಕ್ಷೇಮದ ಮೇಲೆ ಕಾಳಜಿ ವಹಿಸುತ್ತೇವೆ. ಆದರಿಂದ ನಾವು ಏನೇ ಮಾಡಿದರು ಸಹ ಎಲ್ಲವನ್ನು ವಿಶೇಷವಾಗಿ ಹಿರಿಯರಿಗಾಗಿ ವಿನ್ಯಾಸಗೊಳಿಸುತ್ತೇವೆ ಎನ್ನುತ್ತಾರೆ ಸುಕೂನ್ ಸಂಸ್ಥಾಪಕಿ ವಿಭಾ ಸಿಂಘಲ್.

ಹಿರಿಯ ನಾಗರಿಕರ ಜೀವನವನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ತಂತ್ರಜ್ಞಾನವನ್ನು ಏಜ್-ಟೆಕ್ ಎನ್ನುತ್ತೇವೆ.ಇದು ಆರೋಗ್ಯ ರಕ್ಷಣೆ, ಸುರಕ್ಷತೆ, ಸಾಮಾಜಿಕ ಸಂಪರ್ಕ, ಸ್ಮಾರ್ಟ್ ಹೋಮ್, ಆರೋಗ್ಯ ಸಾಧನಗಳು, ಇತ್ಯಾದಿಗಳಂತಹ ಜೀವನ ಪರಿಹಾರಗಳನ್ನು ಒಳಗೊಂಡಿದೆ. ಸುಲಭವಾಗಿ ಹೇಳಬೇಕೆಂದರೆ, ತಂತ್ರಜ್ಞಾನದ ಸಹಾಯದಿಂದ ಹಾಗು ತಂತ್ರಜ್ಞಾನ ಮುಖೇನ ಹಿರೀಯ ನಾಗರೀಕರ ಜೇವನವನ್ನು ಉತ್ತಮ, ಆಶಾದಯಕ ಮತ್ತು ಸಂತೋಷ ವಾಗಿ ನಡೆಸಲು ಸಹಾಯ ಮಾಡುವುದೇ Age-Tech.

ಹಿರಿಯರಿಗೆ ಸಮುದಾಯ-ಚಾಲಿತ ಪರಿಸರ ವ್ಯವಸ್ಥೆ

ಸುಕೂನ್ ಅನ್‌ಲಿಮಿಟೆಡ್ ಸ್ಟಾರ್ಟಪ್, ಹಿರಿಯರು ಸಕ್ರಿಯವಾಗಿ ತೊಡಗಿಸಿಕೊಳ್ಳುವ, ಮುನ್ನಡೆಸುವ ಮತ್ತು ಮಾರ್ಗದರ್ಶನ ನೀಡುವ ಒಂದು ಸಮಗ್ರ ವೇದಿಕೆ. ಸಮಾಜದಲ್ಲಿ ಹಿರಿಯ ನಾಗರಿಕರಿಗೆ ಭಾವನಾತ್ಮಕ ಯೋಗಕ್ಷೇಮ ಮತ್ತು ಅರ್ಥಪೂರ್ಣ ಸಾಮಾಜಿಕ ಸಂವಹನಗಳನ್ನು ಉತ್ತೇಜಿಸಲು ಪೂರಕ ವ್ಯವಸ್ಥೆ ನೀಡುತ್ತದೆ.

ಇಲ್ಲಿ ಏನೇನಿದೆ?

ಸುಕೂನ್ ಸಾರಥಿ : ಸಮಾಜದಲ್ಲಿನ ಹಿರಿಯ ನಾಗರಿಕರು ಪರಸ್ಪರ ಉನ್ನತಿ ಮತ್ತು ಬೆಂಬಲ ನೀಡುವ ಮಾರ್ಗದರ್ಶನ ಜಾಲ.

ಕೌನ್ಸೆಲಿಂಗ್ ಮತ್ತು ಬೆಂಬಲ ಗುಂಪುಗಳು: ಅನುಭವಿ ಹಿರಿಯರಿಂದ ಮಾರ್ಗದರ್ಶನ ಪಡೆದು ಯೋಗಕ್ಷೇಮ ವಿಚಾರಿಸುವ ಸುರಕ್ಷಿತ ವೇದಿಕೆ

ಸಾಮಾಜಿಕ ಸಭೆಗಳು ಮತ್ತು ಕಾರ್ಯಕ್ರಮಗಳು: ಸ್ನೇಹ ಮತ್ತು ಕಲಿಕೆಯನ್ನು ಬೆಳೆಸಲು ಹಿರಿಯ ನಾಗರಿಕರಿಗೆ ಚಟುವಟಿಕೆಗಳು

ಕೌಶಲ್ಯ ಹಂಚಿಕೆ ಮತ್ತು ಸ್ವಯಂಸೇವೆ: ಸಕ್ರಿಯರಾಗಿರಲು, ಮೌಲ್ಯಯುತವಾಗಿರಲು ಮತ್ತು ಉದ್ದೇಶ-ಚಾಲಿತವಾಗಿರಲು ಹಿರಿಯ ನಾಗರಿಕರಿಗೆ ಅವಕಾಶಗಳು.

ತಂತ್ರಜ್ಞಾನ ಸಹಾಯ ಮತ್ತು ಡಿಜಿಟಲ್ ಸೇರ್ಪಡೆ: ಇಂದಿನ ಡಿಜಿಟಲ್ ಜಗತ್ತಿನಲ್ಲಿ ಹಿರಿಯರು ಪರಸ್ಪರ ಸಂಪರ್ಕದಲ್ಲಿರಲು, ಕಿರಿಯರೊಂದಿಗೆ ಸಂವಹನ, ತಂತ್ರಜ್ಞಾನದಲ್ಲಿ ಅಪ್ ಡೇಟ್ ಆಗಲು ಮತ್ತು ಸಬಲರಾಗಿರಲು ಸಹಾಯ ಮಾಡುವುದು.

ಇಲ್ಲಿ ಹಿರಿಯರು ಕೇವಲ ಬಳಕೆದಾರರಲ್ಲ - ಅವರು ಸಮುದಾಯ ನಾಯಕರು, ಮಾರ್ಗದರ್ಶಕರು ಮತ್ತು ಸ್ನೇಹಿತರಾಗಿರುತ್ತಾರೆ.

ಸುಕೂನ್ ಸಾರಥಿ ಏಕೆ ಬೇಕು?

ಮನುಷ್ಯ ಜೀವನದಲ್ಲಿ ಒಂಟಿತನವು ಕೇವಲ ದುಃಖ ತರುವುದು ಮಾತ್ರವಲ್ಲ, ಮನಸ್ಸು ಮತ್ತು ದೇಹ ಎರಡಕ್ಕೂ ಹಾನಿ ಮಾಡುತ್ತದೆ. ಸಾಮಾಜಿಕ ಪ್ರತ್ಯೇಕತೆಯು ಹೃದ್ರೋಗ, ಖಿನ್ನತೆ ಮತ್ತು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳಿಂದ ದೃಢಪಟ್ಟಿವೆ.

ಅನೇಕ ಹಿರಿಯ ನಾಗರಿಕರು, ನಾವು ಈಗ ಕಳೆದುಹೋಗಿದ್ದೇವೆ, ನಾವು ಯಾರಿಗೂ ಬೇಡವಾಗಿದ್ದೇವೆ ಎಂದು ಆಗಾಗ ಕೊರಗುತ್ತಿರುವುದನ್ನು ಕಾಣುತ್ತೇವೆ. ಸುಕೂನ್‌ನಲ್ಲಿ, ನಾವು ಅವರನ್ನು ತಮ್ಮೊಂದಿಗೆ, ಇತರರೊಂದಿಗೆ ಮತ್ತು ಜೀವನದೊಂದಿಗೆ ಮರುಸಂಪರ್ಕಿಸಲು ಸಹಾಯ ಮಾಡುತ್ತೇವೆ ಎನ್ನುತ್ತಾರೆ ವಿಭಾ ಸಿಂಘಲ್.

ಪತಿ ನಿಧನರಾದ ನಂತರ ಒಂಟಿತನ ಅನುಭವಿಸಿಸುತ್ತಿದ್ದ ನಿವೃತ್ತ ಶಿಕ್ಷಕಿ ರಾಣಿ ಮೆಹ್ತಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ನಾನು ದಿನವಿಡೀ ಒಬ್ಬಂಟಿಯಾಗಿ ಕುಳಿತುಕೊಳ್ಳುತ್ತಿದ್ದೆ. ನನ್ನ ಮಕ್ಕಳು ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದಾರೆ, ನನ್ನ ಸಮಯ ಹೇಗೆ ಕಳೆಯಬೇಕೆಂದೇ ಗೊತ್ತಾಗುತ್ತಿರಲಿಲ್ಲ. ಆಗ ನೆರವಿಗೆ ಬಂದದ್ದೇ ಸುಕೂನ್ ಅನ್ ಲಿಮಿಟೆಡ್.

ಇಲ್ಲಿ ನನ್ನನ್ನು ಅರ್ಥಮಾಡಿಕೊಳ್ಳುವ ಜನರೊಂದಿಗೆ ಸಂಪರ್ಕ ಸಾಧಿಸಲು, ಹಂಚಿಕೊಳ್ಳಲು ಮತ್ತು ಕಲಿಯಲು ನಾನು ಒಂದು ಸ್ಥಳವನ್ನು ಕಂಡುಕೊಂಡೆ. ಆನ್ ಲೈನ್ ಮೂಲಕ ನನ್ನ ವಯೋಮಾನದ ಹಲವರ ಸಂಪರ್ಕವಾಗಿದ್ದು ನನಗೀಗ ಅನೇಕ ಸ್ನೇಹಿತರಿದ್ದಾರೆ, ನನ್ನ ಕಷ್ಟ-ಸುಖ ಹಂಚಿಕೊಳ್ಳಲು ಜನರಿದ್ದಾರೆ ಎನಿಸುತ್ತಿದೆ ಎಂದರು.

ಸುಕೂನ್ ಅನ್ ಲಿಮಿಟೆಡ್ ಇಂದು 300 ನಗರಗಳಲ್ಲಿ 2,500 ಕ್ಕೂ ಹೆಚ್ಚು ಸಕ್ರಿಯ ಸದಸ್ಯರನ್ನು ಹೊಂದಿದ್ದು,ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಭಾವನಾತ್ಮಕ ಬೆಂಬಲ, ತೊಡಗಿಸಿಕೊಳ್ಳುವ ಚಟುವಟಿಕೆಗಳು ಮತ್ತು ಪ್ರತಿಫಲ ನೀಡುವ ಅವಕಾಶಗಳನ್ನು ಇಳಿವಯಸ್ಸಿನವರಿಗೆ ನೀಡುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com