

ಮೈಸೂರು: ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದಿಂದ ಪ್ರೇರಿತರಾಗಿರುವ ಕಾಸರಗೋಡಿನ, ಮೈಸೂರು ಮೂಲದ ಸ್ವಯಂಸೇವಾ ಸಂಸ್ಥೆಯಾದ ಅನನ್ಯ ತಂಡದ ಸದಸ್ಯರು, ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ಮತ್ತು ಹುಣಸೂರು ತಾಲ್ಲೂಕುಗಳ ಬುಡಕಟ್ಟು ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಹೊಸ ಲುಕ್ ನೀಡಿದ್ದಾರೆ.
ಅನನ್ಯದ ಸದಸ್ಯರು ಮೈಸೂರಿನ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್) ಸ್ವಯಂಸೇವಕರಾಗಿದ್ದಾರೆ. ಎನ್‌ಎಸ್‌ಎಸ್ ಅಧಿಕಾರಿ ಎನ್ ಸಂತೋಷ್ ಕುಮಾರ್ ನೇತೃತ್ವದಲ್ಲಿ, 2018 ರಲ್ಲಿ ತೆರೆಗೆ ಬಂದ ಚಲನಚಿತ್ರವನ್ನು ವೀಕ್ಷಿಸಿದ ನಂತರ ಈ ಅಭಿಯಾನ ಪ್ರಾರಂಭಿಸಿದರು. ದೂರದ ಬುಡಕಟ್ಟು ಹಳ್ಳಿಗಳಲ್ಲಿ ಹಲವಾರು ಸರ್ಕಾರಿ ಶಾಲೆಗಳನ್ನು ಚಿತ್ರಿಸಿ ಅಲಂಕರಿಸಿದ್ದಾರೆ.
ಎನ್‌ಎಸ್‌ಎಸ್ ಅಧಿಕಾರಿಯಾಗಿ ತಮ್ಮ ಸ್ಥಾನವನ್ನು ಬಳಸಿಕೊಂಡ, ಸಂತೋಷ್ ಅನನ್ಯ ರಚಿಸಿದರು. ಅದರ ಸದಸ್ಯರಿಗೆ ಪ್ರಸಿದ್ಧ ಟೆರಾಕೋಟಾ ಕಲಾವಿದ ಸ್ವಾಮಿ ಅವರಿಂದ ತರಬೇತಿ ಕೊಡಿಸಿದರು. ಅನನ್ಯ ಸಂಸ್ಥೆ ತನ್ನ ಮೊದಲ ಯೋಜನೆಯನ್ನು ಹುಣಸೂರು ತಾಲ್ಲೂಕಿನ ಕುತವಾಡಿ ಬಿ ಹಾಡಿಯಿಂದ ಪ್ರಾರಂಭಿಸಿತು. ಕೆಟ್ಟ ಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆಗೆ ಒಂದು ಹೊಸ ರೂಪ ನೀಡಿತು, ಈ ಯೋಜನೆಗೆ ಅನನ್ಯ ಸಂಸ್ಥೆಯ ಸದಸ್ಯರೇ ಹಣಕಾಸು ಒದಗಿಸಿದರು.
ಈ ಯೋಜನೆಯ ಯಶಸ್ಸಿನ ನಂತರ, ಅನನ್ಯ ಬುಡಕಟ್ಟು ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳನ್ನು "ದತ್ತು" ಪಡೆಯಲು ನಿರ್ಧರಿಸಿದರು. ಶಾಲೆಗಳಿಗೆ ಬಣ್ಣ ಬಳಿಯುವುದು ಮತ್ತು ಅಲಂಕರಿಸುವುದರ ಜೊತೆಗೆ, ಅದು ಅವರಿಗೆ ನೋಟ್‌ಬುಕ್‌ಗಳು, ಪಠ್ಯಪುಸ್ತಕಗಳು, ಕಂಪ್ಯೂಟರ್‌ಗಳು, ಪ್ರಿಂಟರ್‌ಗಳು ಮತ್ತು ಸ್ಮಾರ್ಟ್ ಟಿವಿಗಳನ್ನು ನೀಡಲು ಪ್ರಾರಂಭಿಸಿತು. ಅನನ್ಯ ಸದಸ್ಯರು ಸರ್ಕಾರಿ ಶಾಲೆಗಳ ಆವರಣದಲ್ಲಿ ಹಣ್ಣು ಬಿಡುವ ಸಸಿಗಳನ್ನು ನೆಟ್ಟಿದ್ದಾರೆ.
ಅನನ್ಯ ಬುಡಕಟ್ಟು ಮಕ್ಕಳಿಗೆ ಸ್ವಚ್ಛತಾ ಅಭಿಯಾನಗಳನ್ನು ಆಯೋಜಿಸುತ್ತದೆ, ಕಂಪ್ಯೂಟರ್ ತರಬೇತಿ, ಸ್ಪೋಕನ್ ಇಂಗ್ಲಿಷ್ ಮತ್ತು ಯೋಗ ತರಗತಿಗಳನ್ನು ನಡೆಸುತ್ತದೆ. ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುತ್ತದೆ. ಅನನ್ಯ ಸಂಸ್ಥೆಯ ಈ ಪ್ರಯತ್ನಗಳು ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸುವಲ್ಲಿ ಮಾತ್ರವಲ್ಲದೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳದಲ್ಲೂ ಸಹಾಯ ಮಾಡಿದೆ.
ಹುಣಸೂರು ತಾಲ್ಲೂಕಿನ ಕುತವಾಡಿ, ದೇವಗಹಳ್ಳಿ, ಬಸವನಹಳ್ಳಿ, ಅಸವಾಲು, ಕುಡಿನೀರು ಮುದ್ದನಹಳ್ಳಿ, ಹೊಸಪುರ, ಸಂಜೀವ ನಗರ, ದೇವಲಾಪುರ ಮತ್ತು ಹುಣಸೂರು ತಾಲ್ಲೂಕಿನ ಅಂಬೇಡ್ಕರ್ ನಗರ, ಎಚ್‌ಡಿ ಕೋಟೆ ತಾಲ್ಲೂಕಿನ ಮಂಟಿ ಹಾಡಿ, ಪಡುಕೋಟೆ ಹಾಡಿ ಮತ್ತು ಚಾಮನಹಳ್ಳಿ ಹುಂಡಿ ಮತ್ತು ಮಂಡ್ಯ ತಾಲ್ಲೂಕಿನ ಸಂತೆ ಕೆಸಲಗೆರೆಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದೆ.
ಅನನ್ಯ ತಂಡವು ಏಕಕಾಲದಲ್ಲಿ ಎರಡು ಅಥವಾ ಮೂರು ಶಾಲೆಗಳನ್ನು ಆಯ್ಕೆ ಮಾಡಿ ಶಾಲೆಗಳನ್ನು ಅಭಿವೃದ್ಧಿಗೊಳಿಸುತ್ತದೆ ಎಂದು ಸಂತೋಷ್ TNSE ಗೆ ತಿಳಿಸಿದರು. ಗದ್ದಿಗೆ ದೇವಸ್ಥಾನ ನಮ್ಮ ಮೂಲ. ನಾವು ದೇವಸ್ಥಾನದ ಹತ್ತಿರದ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ದೇವಸ್ಥಾನದ ಆಡಳಿತವು ನಮಗೆ ಆಹಾರ ಮತ್ತು ವಸತಿಯನ್ನು ಒದಗಿಸುತ್ತದೆ. ಒಂದು ಸಣ್ಣ ಶಾಲೆಗೆ ಬಣ್ಣ ಬಳಿಯಲು ಸುಮಾರು 40,000 ರೂ. ವೆಚ್ಚವಾಗುವುದರಿಂದ ನಾವು ಹಣಕ್ಕಾಗಿ ಲೋಕೋಪಕಾರಿಗಳನ್ನು ಸಂಪರ್ಕಿಸುತ್ತೇವೆ.
ಮಜಾ ಟಾಕೀಸ್‌ನ ಸೃಜನಶೀಲ ನಿರ್ದೇಶಕ ತೇಜಸ್ವಿ ನಮಗೆ ಆರ್ಥಿಕವಾಗಿ ಬೆಂಬಲ ನೀಡುತ್ತಾರೆ ಎಂದು ಅವರು ಹೇಳಿದರು. ಈ ವರ್ಷ, ಅನನ್ಯ ಅಸವಾಳು, ಹೊಸಪುರ, ಕುಡಿನೀರು ಮುದ್ದನಹಳ್ಳಿ ಮತ್ತು ಮಂಟಿ ಹಾಡಿಯಲ್ಲಿರುವ ಶಾಲೆಗಳ ಕೆಲಸವನ್ನು ಪೂರ್ಣಗೊಳಿಸಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳನ್ನು ಹೊಂದಿರುವ ಹುಣಸೂರು ತಾಲ್ಲೂಕಿನ ಸಿಂಗನಮರಹಳ್ಳಿಯಲ್ಲಿರುವ ಸರ್ಕಾರಿ ಶಾಲೆಗೆ ಡಿಸೆಂಬರ್ ಅಥವಾ ಜನವರಿಯಲ್ಲಿ ಹೊಸ ರೂಪ ನೀಡಲಾಗುವುದು ಎಂದು ಸಂತೋಷ್ ಹೇಳಿದರು.
ವಾರಾಂತ್ಯ ಅಥವಾ ರಜಾದಿನಗಳಲ್ಲಿ ಸುಮಾರು 50 ಸ್ವಯಂಸೇವಕರು 10 ರಿಂದ 15 ಸದಸ್ಯರ ಬ್ಯಾಚ್‌ಗಳಲ್ಲಿ ಕೆಲಸ ಮಾಡುತ್ತಾರೆ. ಅಂತಹ ಶಾಲೆಗಳು ಕಾಡಿನ ಅಂಚಿನಲ್ಲಿ ಅಥವಾ ಒಳಗೆ ಇರುವುದರಿಂದ ಅವುಗಳಲ್ಲಿ ಕೆಲಸ ಮಾಡುವುದು ಒಂದು ದೊಡ್ಡ ಸವಾಲಾಗಿದೆ. ನಾವು ಮಂಟಿ ಹಾಡಿಯಲ್ಲಿ ಐದು ದಿನಗಳ ಕಾಲ ಸರಿಯಾದ ವಿದ್ಯುತ್ ಮತ್ತು ಕುಡಿಯುವ ನೀರು ಇಲ್ಲದೆ ವಾಸಿಸುತ್ತಿದ್ದೆವು.
ನಮ್ಮ ಫೋನ್‌ಗಳನ್ನು ದಿನಕ್ಕೆ ಎರಡು ಗಂಟೆಗಳ ಕಾಲ ಮಾತ್ರ ಚಾರ್ಜ್ ಮಾಡಲು ಸಾಧ್ಯವಾಯಿತು. ನೀರಿಗಾಗಿ ಕೊಳವೆಬಾವಿಯನ್ನು ಅವಲಂಬಿಸಬೇಕಾಯಿತು. ನಮಗೆ ಕಾಡು ಪ್ರಾಣಿಗಳಿಗೆ ಭಯವಿತ್ತು, ಆದರೆ ಬುಡಕಟ್ಟು ಜನರು ಶಾಲೆಯಲ್ಲಿ ನಮ್ಮೊಂದಿಗೆ ವಾಸಿಸುತ್ತಿದ್ದರು ಮತ್ತು ನಮ್ಮ ಸುರಕ್ಷತೆಗಾಗಿ ನಮ್ಮ ಜೊತೆಯಿದ್ದರು ಎಂದು ಅವರು ಹೇಳಿದರು. ಸಂತೋಷ್ ಅವರ ಈ ಕ್ರಮವು ಹಲವಾರು ಸರ್ಕಾರೇತರ ಸಂಸ್ಥೆಗಳಿಂದ, ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳಿಂದ ಮೆಚ್ಚುಗೆಯನ್ನು ಪಡೆದಿದೆ.
Advertisement