ಇಂಚನ್: ಭಾರತದ ಸ್ನೂಕರ್ ಆಟಗಾರ ಆದಿತ್ಯ ಮೆಹ್ತಾ ಅವರು, ಏಷ್ಯನ್ ಇಂಡೋರ್ ಗೇಮ್ಸ್ನ ಸ್ನೂಕರ್ ವಿಭಾಗದ ಸೆಮಿಫೈನಲ್ ತಲುಪಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಹಂತದ ಪಂದ್ಯದಲ್ಲಿ ಅವರು, ಚೀನಾದ ಯು ಯು ಲ್ಯುನ್ ಅವರ ವಿರುದ್ಧ 4-0 ಅಂತರದ ಜಯ ಸಾಧಿಸಿದರು.
ಮೆಹ್ತಾ ಅವರು ಇದೀಗ ಸೆಮೀಸ್ಗೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಪಂದ್ಯಾವಳಿಯಲ್ಲಿ ಭಾರತಕ್ಕೆ ಪದಕವೊಂದು ಸಿಗುವುದು ಖಾತ್ರಿಯಾಗಿದೆ.
ಏತನ್ಮಧ್ಯೆ, ಶುಕ್ರವಾರ ನಡೆದ ಮತ್ತೊಂದು ಸ್ನೂಕರ್ ಪಂದ್ಯದಲ್ಲಿ, ಭಾರತದ ಕಮಲ್ ಚಾವ್ಲಾ ಅವರು, ಆಫ್ಘಾನಿಸ್ತಾನದ ಹಿರಿಯ ಸ್ನೂಕರ್ ಆಟಗಾರ ಮಹಮ್ಮದಿ ಸಲೇ ವಿರುದ್ಧ 1-4ರ ಅಂತರದಲ್ಲಿ ಸೋಲು ಕಂಡರು. ಪಂದ್ಯ ನಂತರ ಮಾತನಾಡಿದ ಮೆಹ್ತಾ, 'ಪಂದ್ಯಾವಳಿಯಲ್ಲಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿರುವುದು ಸಂತಸ ತಂದಿದೆ' ಎಂದರು.