ಕಬಡ್ಡಿ ಟೈಮ್

ಕಬಡ್ಡಿ ಟೈಮ್

ಕ್ರೀಡೆಯ ಯಶಸ್ಸು ಯಾವುದರ ಮೇಲೆ ನಿಂತಿದೆ ಎಂಬುದನ್ನು ತಿಳಿಯಬೇಕಾದರೆ, ಬಿಸಿಸಿಐ ನೋಡಿ ತಿಳಿಯಬೇಕು. 1983ರ ವಿಶ್ವಕಪ್ ಗೆಲವನ್ನು ಬಿಸಿಸಿಐ ಕ್ರಿಕೆಟ್ ಅಭಿಯಾನಕ್ಕೆ ಹೇಗೆ ಬಳಸಿಕೊಂಡಿತು ಎಂಬುದು ನಮಗೆಲ್ಲ ತಿಳಿದದ್ದೇ. ಅದರ ಆರ್ಭಟದ ಎದುರು ರಾಷ್ಟ್ರೀಯ ಕ್ರೀಡೆ ಎನಿಸಿಕೊಂಡ ಹಾಕಿಯೂ ಸಪ್ಪೆಯಾಯಿತು. ಒಂದು ತಂಡದ ಯಶಸ್ಸು ಎನ್ನುವುದೊಂದೇ ಅದರ ಜನಪ್ರಿಯತೆಗೆ ಅಡಿಗಲ್ಲಾಗುವುದಿಲ್ಲ. ಹಾಗಿದ್ದರೆ ಭಾರತ ಕ್ರಿಕೆಟ್‌ನಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದೆ. ಆಟಗಾರರ ವೈಯಕ್ತಿಕ ಸಾಧನೆಗಳಿಗಿಂತ ತಂಡ ಸಾಧನೆಯನ್ನು ಪರಿಗಣಿಸಿದರೆ ಇಂದಿಗೂ ಭಾರತ ತಂಡ ಗೆದ್ದದ್ದಕ್ಕಿಂತ ಸೋತದ್ದೇ ಹೆಚ್ಚು. ಆದರೂ ಕ್ರಿಕೆಟ್ ಜನಪ್ರಿಯ. ಇದಕ್ಕೆ ಕಾರಣ ಕ್ರಿಕೆಟ್ ಅನ್ನು ಜನ ಇಷ್ಟಪಡುವಂತೆ ಬೆಳೆಸಿದ ಬಿಸಿಸಿಐ ತಂತ್ರ. ಇದನ್ನು ಯಾರೇ ಆದರೂ ಒಪ್ಪಲೇಬೇಕು. ಒಂದು ಕ್ರೀಡೆಯನ್ನು ಮಾರ್ಕೆಟಿಂಗ್ ಮಾಡುವುದು ಹೇಗೆಂಬುದನ್ನು ಬಿಸಿಸಿಐ ನೋಡಿ ಕಲಿಯಬೇಕು.
ಉಳಿದ ಕ್ರೀಡೆಗಳಲ್ಲೂ ಐಪಿಎಲ್ ಮಾದರಿಯ ಲೀಗ್ ಪಂದ್ಯಾವಳಿಗಳು ಪ್ರಾರಂಭವಾದವಾದರೂ ಹೆಚ್ಚೇನೂ ಯಶ ಕಾಣಲಿಲ್ಲ. ಪ್ರೇಕ್ಷಕರನ್ನೂ ಸೆಳೆಯಲಿಲ್ಲ. ಜಾಹೀರಾತು ಪ್ರಪಂಚ ಹತ್ತಿರವೂ ಸುಳಿಯಲಿಲ್ಲ. ಹೀಗಾಗಿ ಜಾಗತಿಕವಾಗಿ ಜನಮನ್ನಣೆ ಪಡೆದ ಟೆನಿಸ್, ವಾಲಿಬಾಲ್, ಬ್ಯಾಡ್ಮಿಂಟನ್‌ಗಳದ್ದೆಲ್ಲ ಇದೇ ಕತೆ. ಭಾರತದಲ್ಲಿ ತನ್ನದೇ ಪ್ರೇಕ್ಷಕ ವರ್ಗವಿರುವ ಫುಟ್ಬಾಲ್ ಸಹ ಹೇಳಿಕೊಳ್ಳುವಂಥ ಕ್ರಾಂತಿ ಮಾಡಲಿಲ್ಲ. ಹಾಗೆ ನೋಡಿದರೆ 1990ರಿಂದಲೂ ಕಬಡ್ಡಿಯಲ್ಲಿ ಪಾರಮ್ಯ ಮೆರೆದಿರುವ ಭಾರತದಲ್ಲಿ ಹೊಸ ಹವಾ ಹುಟ್ಟುಹಾಕಬಹುದು ಎಂಬ ನಿರೀಕ್ಷೆ ಇತ್ತು. ದುರ್ದೈವವೆಂದರೆ ಯಾವುದೇ ಕ್ರೀಡೆಯಲ್ಲಿ ಪದಕ ತಪ್ಪಿದಾಗಲೂ ನಮ್ಮ ಕ್ರೀಡಾಳುಗಳು ಪ್ರಯೋಜನವಿಲ್ಲ ಎಂದು ಜರಿಯುವ ನಾವು ಗೆದ್ದ ಕ್ರೀಡೆಯನ್ನು ಕಣ್ಣರಳಿಸಿ ನೋಡಿದ್ದಂತೂ ಇಲ್ಲ, ಏನೋ ಆಗೀಗ ಟೆನಿಸ್, ಹಾಕಿ ಬಿಟ್ಟರೆ ಬೇರೆ ಪ್ರಕಾರಗಳಲ್ಲಿ ಯಾವೆಲ್ಲ ಕ್ರೀಡಾಗಳುಗಳಿದ್ದಾರೆಂಬುದೇ ನಮಗೆ ತಿಳಿದಿಲ್ಲ.
ಕಾಲ ಬದಲಾಗುತ್ತಿದೆ...
ಒಂದೊಮ್ಮೆ ಕೇವಲ ಹಳ್ಳಿ ಹೈದರ ಜೀವಾಳವಾಗಿದ್ದ ಕಬಡ್ಡಿ ಇಂದು ನಗರಗಳಿಗೂ ದಾಂಗುಡಿಯಿಡುತ್ತಿದೆ. ದೈಹಿಕ ಸಾಮರ್ಥ್ಯದೊಂದಿಗೆ ಅಪಾರ ಚಾಕಚಕ್ಯತೆ ಬೇಡುವ ಈ ಕ್ರೀಡೆಗೆ ಕಾರ್ಪೊರೇಟ್ ಜಗತ್ತು ಮಾರು ಹೋಗಿದೆ. ಅದರಲ್ಲೇನೋ ವಿಶೇಷ ಇದೆ ಅಂತ ಎಲ್ಲರಿಗೂ ಅನ್ನಿಸತೊಡಗಿದೆ. ಕ್ರೀಡೆಯೊಂದರ ಮಹತ್ವ ಅರಿಯುವುದು ಅದು ಮುಖ್ಯ ವಾಹಿನಿಗಳಲ್ಲಿ ಪ್ರಸಾರವಾದಾಗಲೇ. ಕ್ರಿಕೆಟೇತರ ಕ್ರೀಡೆಗಳನ್ನು ಭಾರತದಲ್ಲಿ ಪ್ರಸಾರ ಮಾಡುವ ಮುಂಚೆ ಲಕ್ಷ ಬಾರಿ ಯೋಚಿಸುತ್ತಿದ್ದ ವಿದೇಶಿ ಖಾಸಗಿ ಚಾನಲ್‌ಗಳು ನಾಮುಂದು ತಾಮುಂದು ಎಂದು ಹಕ್ಕಿಗೆ ಮುಗಿಬಿದ್ದಿವೆ. ಪ್ರೋ ಕಬಡ್ಡಿ ಲೀಗ್ ಪ್ರಸಾರದ ಹಕ್ಕು ಸ್ಟಾರ್‌ಸ್ಪೋರ್ಟ್ಸ್ ಪಾಲಾಗಿದ್ದರೆ, ವಿಶ್ವ ಕಬಡ್ಡಿ ಲೀಗ್ ಪ್ರಸಾರದ ಹಕ್ಕನ್ನು ಸೋನಿ ಸಿಕ್ಸ್ ಪಡೆದುಕೊಂಡಿರುವುದೇ ಇದಕ್ಕೆ ಸಾಕ್ಷಿ. ಇವೆಲ್ಲವೂ ನಮ್ಮ ದೇಶದ ಜೀವನಾಡಿ ಕಬಡ್ಡಿಗಾಗಿ ನಡೆಯುತ್ತಿರುವ ಸರ್ಕಸ್. ಇಷ್ಟೆಲ್ಲ ಆದ ಬಳಿಕ ಏಕಾಏಕಿ ಕಬಡ್ಡಿ ಜನಪ್ರಿಯವಾಗಿಬಿಡುತ್ತದೆಂಬ ಹುಚ್ಚು ನಂಬಿಕೆ ಯಾರಲ್ಲೂ ಇಲ್ಲ, ಹಳ್ಳಿ ದಿಲ್ಲಿಗಳ ಆಸಕ್ತ ಮನಸುಗಳು ಕಣ್ಣರಳಸಿದ್ದಾವೆ ಎಂಬುದಂತೂ ನಿಜ. ನೆನಪಿಡಿ, ಕ್ರಿಕೆಟ್ ಭಾರತದ ಜನಮಾನಸದಲ್ಲಿ ಒಂದೆರಡು ವರ್ಷಗಳಲ್ಲಿ ಜನಪ್ರಿಯವಾದ ಕ್ರೀಡೆಯಲ್ಲ. ಹೀಗಾಗಿ ಕಬಡ್ಡಿಯಲ್ಲಿ ಏಕಾಏಕಿ ಯಶಸ್ಸು ನಿರೀಕ್ಷಿಸುವುದು ಸಲ್ಲ. ಆದರೆ ನಿಧಾನವಾಗಿಯಾದರೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾದರೆ ಎಲೆ ಮರೆಕಾಯಂತೆ ಉಳಿದ ನಮ್ಮ ದೇಸೀ ಕ್ರೀಡೆ ಗೆದ್ದಂತೆ.

ಈ ದಿನ ಎಂದೋ ಬರಬೇಕಿತ್ತು...
ಪ್ರೋ ಕಬಡ್ಡಿ ಜನಪ್ರಿಯವಾಗುತ್ತಿರುವ ರೀತಿ ಸಂತಸ ತರುತ್ತಿದೆ. ಮೊನ್ನೆಯಷ್ಟೇ ಚನ್ನಪಟ್ಟಣಕ್ಕೆ ಹೋಗಿದ್ದಾಗ ಜನ ಟಿ.ವಿ.ಯಲ್ಲಿ ಪಂದ್ಯಗಳನ್ನು ನೋಡಿ ಪ್ರಶ್ನೆಗಳನ್ನು ಕೇಳಿದಾಗ ಸಂತಸವಾಯ್ತು. ಅಂದರೆ ಕಬಡ್ಡಿ ಬಗ್ಗೆ ಆಸಕ್ತಿ ಬೆಳೆಯುತ್ತಿದೆ ಎಂದರ್ಥ. ಈ ದಿನ ಯಾವತ್ತೋ ಬರಬೇಕಿತ್ತು. ತಡವಾಗಿಯಾದರೂ ಭಾರತದಲ್ಲಿ ಕಬಡ್ಡಿ ಬೇರು ಗಟ್ಟಿಯಾಗುತ್ತಿದೆ.
= ಬಿ.ಸಿ. ರಮೇಶ್, ಕಬಡ್ಡಿ ಆಟಗಾರ

= ಗಣೇಶ್ ಪ್ರಸಾದ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com