ತವರಿನ ಶಾಪ!

ತವರಿನ ಶಾಪ!

ಬೇಕಾದಂತೆ ಪಿಚ್ ನಿರ್ಮಿಸಿಕೊಂಡು ಕ್ರಿಕೆಟ್‌ನಲ್ಲಿ ತವರು ತಂಡ ಮೇಲುಗೈ ಸಾಧಿಸುವುದು ಕಾಮನ್. ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳಲ್ಲಿ ತವರಿನ ಅಂಗಣದಲ್ಲಿ ಆಟಗಾರರಿಗೆ ಹೆಚ್ಚಿನ ಅನುಕೂಲವಾಗುವ ಅಂಶವೆಂದರೆ, ಅಭಿಮಾನಿಗಳ ಬೆಂಬಲ. ಅಲ್ಲದೆ, ತವರಿನ ಅಭಿಮಾನಿಗಳ ಎದುರಿಗೆ ಗೆಲ್ಲಬೇಕೆಂಬ ಕ್ರೀಡಾಪಟುಗಳ ಮನೋಭಾವವೂ ತವರಿನಲ್ಲಿ ಜಯಕ್ಕೆ ಕಾರಣವಾಗುತ್ತವೆ. ಫಾರ್ಮುಲಾ 1 ರೇಸ್ ಚಾಲಕರೂ ಇದಕ್ಕೆ ಹೊರತಲ್ಲ. ಆದರೆ, ಅವರು ಇದುವರೆಗೂ ತವರಿನಲ್ಲಿ ಅಷ್ಟಾಗಿ ಯಶಸ್ಸು ಸಾಧಿಸಿರುವುದು ಕಂಡುಬಂದಿಲ್ಲ. ಕಳೆದ 8 ಋತುಗಳಲ್ಲಿ ಕೇವಲ 5 ಚಾಲಕರು ಮಾತ್ರ ತವರಿನ ಅಂಗಣದಲ್ಲಿ ಜಯ ಸಾಧಿಸಿರುವುದೇ ಇದಕ್ಕೆ ಸಾಕ್ಷಿ.
ಕಾರಣವೇನಿರಬಹುದು?
ಫಾರ್ಮುಲಾ 1 ಚಾಲಕರು ಟ್ರ್ಯಾಕ್, ಗುರಿ ಬಿಟ್ಟು ಬೇರೇನನ್ನೂ ಗಮನಿಸುವುದಿಲ್ಲ. ಅಲ್ಲದೆ, ರುಂ ರುಂ ಸದ್ದಿನಲ್ಲಿ ಫಾರ್ಮುಲಾ 1 ಚಾಲಕರಿಗೆ ಅಭಿಮಾನಿಗಳ ಬೆಂಬಲದ ಜಯಘೋಷಗಳು ಕೇಳುವುದಿರಲಿ, ಕೊಂಚ ನಿರ್ಲಕ್ಷ್ಯವಹಿಸಿದರೂ, ದೊಡ್ಡ ಅನಾಹುತವೇ ಘಟಿಸಬಹುದು. ಇನ್ನು ಟ್ರ್ಯಾಕ್‌ನಲ್ಲಂತೂ ತವರಿನ ಚಾಲಕನಿಗೆ ಅಂಥ ಯಾವುದೇ ವ್ಯವಸ್ಥೆಗೆ ಅವಕಾಶವಿಲ್ಲ. ತಪ್ಪು ತೀರ್ಪು ನೀಡುವ ರೆಫರಿಗಳಿಗೂ ಇಲ್ಲಿ ಚಾನ್ಸಿಲ್ಲ. ಈ ಎಲ್ಲ ಕಾರಣಗಳು ಫಾರ್ಮುಲಾ 1ರಲ್ಲಿ ಎಲ್ಲ ಚಾಲಕರಿಗೂ ಎಲ್ಲ ಗ್ರಾನ್ ಪ್ರೀಗಳಲ್ಲಿ ಸಮಾನ ಅವಕಾಶ ಒದಗಿಸಿರಬಹುದು.
ವೆಟಲ್‌ಗೆ ಒಮ್ಮೆ ತವರು ಪಟ್ಟ
ಸತತ 4 ಬಾರಿ ಗ್ರ್ಯಾನ್ ಪ್ರಿಯಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಛಕೊಂಡಿರುವ ಸೆಬಾಸ್ಟಿಯನ್ ವೆಟಲ್‌ಗೂ ತವರಿನಲ್ಲಿ ಹೆಚ್ಚಿನ ಪ್ರಶಸ್ತಿಗಳನ್ನು ಗೆಲ್ಲಲಾಗಲಿಲ್ಲ. ಇದುವರೆಗೂ 39 ಜಯ ಕಂಡಿರುವ ವೆಟಲ್‌ಗೆ ತವರಿನಲ್ಲಿ ಸಿಕ್ಕಿದ್ದು 1 ಜಯ ಮಾತ್ರ. ಅದು 2013ರ ಜರ್ಮನ್ ಗ್ರ್ಯಾನ್ ಪ್ರೀಯಲ್ಲಿ. 2009ರಲ್ಲಿ ಅವರು ಜಯದ ಹೊಸ್ತಿಲಲ್ಲಿದ್ದರು. ಆದರೆ, ತಮ್ಮ ರೆಡ್‌ಬುಲ್‌ನ ಸಹ ಚಾಲಕ ಮಾರ್ಕ್ ವೆಬರ್ ಅದಕ್ಕೆ ಅವಕಾಶ ನೀಡಲಿಲ್ಲ.
ರೋಸ್‌ಬರ್ಗ್
ಪ್ರಸಕ್ತ ಋತುವಿನಲ್ಲಿ ತವರಿನ ಅಂಗಣದಲ್ಲಿ 2 ಪ್ರಶಸ್ತಿ ಗೆದ್ದ ಕೀರ್ತಿ ರೋಸ್‌ಬರ್ಗ್ ಅವರಿಗೆ ಸಲ್ಲುತ್ತದೆ. ಯುವಕರಾಗಿದ್ದಾಗ ಹೆಚ್ಚಿನ ಸಮಯ ಕಳೆದ ಮೊನಾಕೊದಲ್ಲಿ ಅವರು ರೇಸ್ ಗೆದ್ದಿದ್ದರು. ನಂತರ ತವರು ಜರ್ಮನಿಯಲ್ಲಿ ಜಯದ ಸಂಭ್ರಮ ಅನುಭವಿಸಿದ್ದರು. ಜರ್ಮನಿ ಗ್ರ್ಯಾನ್ ಪ್ರಿಯಲ್ಲಿ ಮರ್ಸಿಡೀಸ್ ತಂಡದ ಸಹ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಕಾರಿನ ಗೇರ್‌ಬಾಕ್ಸ್ ವೈಫಲ್ಯ ಕಂಡಿದ್ದು, ರೋಸ್‌ಬರ್ಗ್‌ಗೆ ಜಯಿಸಲು ಅನುಕೂಲವಾಗಿ ಪರಿಣಮಿಸಿತ್ತು.
ಲೂಯಿಸ್ ಹ್ಯಾಮಿಲ್ಟನ್
ತವರಿನ ಅಂಗಣವಾದ ಬ್ರಿಟಿಷ್ ಗ್ರ್ಯಾನ್ ಪ್ರೀಯಲ್ಲಿ ಪದಾರ್ಪಣೆ ಸ್ಪರ್ಧೆಯಲ್ಲೇ (2007) ಪೊಲ್ ಪೋಸೆಷನ್ ಪಡೆದಿದ್ದರು ಹ್ಯಾಮಿಲ್ಟನ್. ನಂತರ 2008ರಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ವರ್ಷವೂ (2014) ಸಿಲ್ವರ್‌ಸ್ಟೋನ್‌ನಲ್ಲಿ ಲೂಯಿಸ್ ಯಶಸ್ಸಿನ ಕಹಳೆ ಊದಿದ್ದಾರೆ.
ಫೆರ್ನಾಂಡೊ ಅಲಾನ್ಸೋ2003ರಲ್ಲಿ ಅಲಾನ್ಸೊ ತವರಿನ ಅಂಗಣವಾದ ಸ್ಪೇನ್ ಗ್ರ್ಯಾನ್ ಪ್ರೀಯಲ್ಲಿ ಅಂಗಣಕ್ಕಿಳಿದಾಗ ತವರಿನ ಅಭಿಮಾನಿಗಳಿಗೆ ಅವರು ಚಾಂಪಿಯನ್ ಆಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, 2003ರವರೆಗೆ ಅಭಿಮಾನಿಗಳು ಕಾಯಬೇಕಾಯಿತು. ನಂತರ 2013ರಲ್ಲೂ ಅವರು ತವರಿನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಫೆಲಿಪೆ ಮಸ್ಸಾ
ಬ್ರೆಜಿಲ್ ಚಾಲಕ ಫೆಲಿಪೆ ಮಸ್ಸಾ ಅವರು 2006, 2008ರಲ್ಲಿ ತವರಿನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

= ಮಲ್ಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com