ಥೋರ್ಪ್‌ದು ತಪ್ಪಲ್ಲ

ಥೋರ್ಪ್‌ದು ತಪ್ಪಲ್ಲ
Updated on

ಕೆಲ ವಿಷಯಗಳನ್ನು ಹೌದೆಂದು ಒಪ್ಪಿಕೊಳ್ಳಲು ನಿಜವಾಗಿಯೂ ಗಟ್ಸ್ ಬೇಕು. ಇನ್ನು ಸೆಕ್ಸ್‌ನಂಥ ವಿಚಾರಗಳಲ್ಲಿ ಮನುಷ್ಯ ಎಂಬ ಪ್ರಾಣಿ ತುಂಬಾ ಜಾಗರೂಕವಾಗಿರುತ್ತದೆ. ಕಾರಣ ತನ್ನ ದೌರ್ಬಲ್ಯಗಳು ಮತ್ತೊಬ್ಬರಿಗೆ ಗೊತ್ತಾಗಬಾರದೆಂಬುದು. ಅಂಥದ್ದರಲ್ಲಿ ತಾನು ಸಲಿಂಗಕಾಮಿ ಅಂತ ಬಹಿರಂಗವಾಗಿ ಹೇಳ್ಕೊಳ್ಳೋದು ಅಷ್ಟು ಸುಲಭದ ಮಾತಲ್ಲ. ಕಾಮಿ ಅಂತ ಹೇಳ್ಕೊಳ್ಳೋದೇ ಕಷ್ಟದ ಕೆಲಸ. ಇನ್ನು, ಸಲಿಂಗಕಾಮಿ ಅಂತ ಹೇಳ್ಕೊಳ್ಳೋದು? ಅತಿ ಕಷ್ಟದ ಕೆಲಸ.
ಅದರಲ್ಲೂ ಕ್ರೀಡಾಪಟುಗಳು ಇಂಥ ವಿಚಾರಗಳನ್ನು ಹೇಳ್ಕೊಳ್ಳೋಕೆ ಹಿಂದುಮುಂದು ನೋಡ್ತಾರೆ. ಅವರ ಕ್ರೀಡಾ ಭವಿಷ್ಯದ ಭಯ ಅವರನ್ನು ಕಾಡ್ತಾ ಇರುತ್ತೆ. ಹಾಗಾಗಿ, ಅವರು ಸಿಕ್ಕಾಪಟ್ಟೆ ಯೋಚ್ನೆ ಮಾಡಿ ಆಮೇಲೆ ಅದನ್ನು ಬಹಿರಂಗಗೊಳಿಸ್ತಾರೆ. ಈವರೆಗೂ ಕೆಲವೇ ಕೆಲವರು ಮಾತ್ರ ಇಂಥ ವಿಚಾರಗಳನ್ನ ಹೇಳ್ಕೊಂಡಿದಾರೆ. ಈಗ ಅವರ ಸಾಲಿಗೆ ಸೇರ್ತಾ ಇರೋದು ಇಯಾನ್ ಥೋರ್ಪ್.
ಈತ ಬೇರ್ಯಾರೂ ಅಲ್ಲ. ಆಸ್ಟ್ರೇಲಿಯಾದ ಈಜುಗಾರ. ಅಷ್ಟೇ ಅಲ್ಲ, ಮಾಜಿ ಒಲಿಂಪಿಕ್ಸ್ ಚಾಂಪಿಯನ್. ಹಲವು ಪ್ರಶಸ್ತಿಗಳಿಗೆ ಭಾಜನನಾಗಿದ್ದ. ಆತನನ್ನು ಕಾಡುತ್ತಿದ್ದ ವಿವಾದ- ಆತ ಸಲಿಂಗಕಾಮಿ ಅನ್ನೋದು. ಆದರೆ, ಇಂಥ ಆರೋಪಗಳಿಗೆಲ್ಲ ಸೊಪ್ಪು ಹಾಕಿರಲಿಲ್ಲ. 16 ವರ್ಷಗಳಿಂದ ಇಂಥ ಆರೋಪ ನಿರಾಕರಿಸುತ್ತಲೇ ಬಂದಿದ್ದ ಈತನ ಸತ್ಯವನ್ನು ಬ್ರಿಟನ್‌ನ ಪರ್ತಕರ್ತನೊಬ್ಬ ಬಾಯಿಬಿಡಿಸಿದ್ದಾನೆ.
ಇದೇ ಮೊದಲ ಬಾರಿಗೆ, ಥೋರ್ಪ್ ಅಂತರಂಗದ ಗುಟ್ಟು ಬಿಚ್ಚಿಟ್ಟಿದ್ದಾನೆ. ಇದು ಯಾವ ಶುದ್ಧಿಯೋ ಗೊತ್ತಿಲ್ಲ... ಅಂತೂ ಕೊನೆಗೂ ಸತ್ಯ ಒಪ್ಕೊಂಡಿದ್ದಕ್ಕೆ ಆತನನ್ನು ಮೆಚ್ಕೋಬೇಕಷ್ಟೆ. ಕೇವಲ 14ನೇ ವಯಸ್ಸಿಗೆ ಆಸ್ಟ್ರೇಲಿಯಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ, ಆ ದೇಶವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೆ ಆತ ಪಾತ್ರನಾಗಿದ್ದ. 1998ರ ಪರ್ತ್ ಒಲಿಂಪಿಕ್ಸ್‌ನಲ್ಲಿ ತನ್ನ 14ನೇ ವಯಸ್ಸಿಗೇ 400 ಮೀ. ಫ್ರೀ ಸ್ಟೈಲ್‌ನಲ್ಲಿ ಚಿನ್ನ ಗೆದ್ದು ಚಾಂಪಿಯನ್ ಆದ ಈತ ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟಿದ್ದ. ಇಲ್ಲಿಂದ ಮುಂದೆ ನಡೆದಿದ್ದು ಆತನ ಮಟ್ಟಿಗೆ ಐತಿಹಾಸಿಕ ಸಾಧನೆಯೇ ಸರಿ.
ಒಲಿಂಪಿಕ್ಸ್ ಮಾತ್ರವಲ್ಲ, ವಿಶ್ವ ಈಜು ಚಾಂಪಿಯನ್‌ಶಿಪ್, ಕಾಮನ್ವೆಲ್ತ್ ಗೇಮ್ಸ್, ಪ್ಯಾನ್ ಪೆಸಿಫಿಕ್ ಚಾಂಪಿಯನ್‌ಶಿಪ್... ಹೀಗೆ, 2004ರವರೆಗೆ ಆತ ಮುಟ್ಟಿದ್ದೆಲ್ಲವೂ ಚಿನ್ನ ಎಂಬಂಥ ಸಾಧನೆ. ಅಸಲಿಗೆ ಇಲ್ಲೇ ಆಗಿದ್ದು ನೋಡಿ ಯಡವಟ್ಟು. ಚಿಕ್ಕ ವಯಸ್ಸಿಗೆ ಹಣ, ಅಂತಸ್ತು, ಜನಪ್ರಿಯತೆ ಎಲ್ಲವೂ ಬಂದಾಗ, ಹುಡುಗ ಹಾದಿ ತಪ್ಪಿದ. ಅಷ್ಟರಲ್ಲೇ, ಆತನಿಗೆ ಮಿತ್ರನೊಬ್ಬನಿಂದ ಸಿಕ್ಕಿದ್ದು ಸಲಿಂಗಕಾಮದ ಕೊಡುಗೆ!
ಅಷ್ಟು ಚಿಕ್ಕ ವಯಸ್ಸಿಗೇ ದೊರೆತ ಎಲ್ಲ ಸೌಕರ್ಯ, ಹಣ, ಐಶ್ವರ್ಯ ಆತನ ತಲೆಕೆಡಿಸಿದವು. ಹೀಗಾಗಿ, ಹದಿಹರೆಯದಲ್ಲೇ ಆತ ದಾರಿ ತಪ್ಪಿಬಿಟ್ಟ. ಆತನ ಕ್ಲೋಸ್ ಫ್ರೆಂಡ್ ಅನ್ನಿಸಿಕೊಂಡವ ಇಯಾನ್‌ನನ್ನು ಇಂಥ ಸಲಿಂಗಕಾಮ ಕೂಪಕ್ಕೆ ದೂಡಿಬಿಟ್ಟ. ಅದನ್ನು ಇಯಾನ್ ಥೋರ್ಪ್ ತಾನೇ ಹೇಳುವುದು ಹೀಗೆ. ಆಗ ನನಗೇನೂ ತಿಳಿಯದು. ಆದರೂ, ಹದಿಹರೆಯದವರಿಗೆ ಇರುವಂತೆ ನನ್ನಲ್ಲೂ ಕಾಮನೆಗಳು ಪುಟಿದೇಳುತ್ತಿದ್ದ ವಯಸ್ಸದು. ಯಾವುದು ಸರಿ, ಯಾವುದು ತಪ್ಪೆಂಬ ತೂಗುಯ್ಯಾಲೆಯಲ್ಲಿದ್ದವನಾದ ನನ್ನನ್ನು ನನ್ನ ತೀರಾ ಖಾಸಾ ದೋಸ್ತ್ ಒಬ್ಬ ಸಲಿಂಗಕಾಮಕ್ಕೆ ಬಳಸಿಕೊಂಡ. ಆತ ನನ್ನ ರೂಮ್‌ಮೇಟ್ ಆಗಿದ್ದರಿಂದ ಅವನೊಂದಿಗೆ ನಾನು ರಾತ್ರಿ ಕಳೆಯಬೇಕಿದ್ದುದರಿಂದ, ಬಲವಂತವಾಗಿ ಆತನ ಅಭೀಪ್ಸೆಗೆ ಒಳಗಾಗಬೇಕಾಯ್ತು. ಬಳಿಕ, ಇದು ದುಃಶ್ಚಟವಾಗಿಯೇ ಹೋಯಿತು.
ಹೀಗೆ ಹೇಳುತ್ತಾ ಸಾಗುವ ಥೋರ್ಪ್, ನನ್ನ ಕಥೆ ಹೀಗಾಯಿತು, ಆದರೆ, ಈಗಷ್ಟೇ ಕ್ರೀಡಾ ಕ್ಷೇತ್ರಕ್ಕೆ ಕಾಲಿಡುತ್ತಿರುವ ಉದಯೋನ್ಮುಖ ಪ್ರತಿಭೆಗಳಿಗೆ ಹೀಗಾಗುವುದು ಬೇಡವೆಂಬ ಕಿವಿಮಾತನ್ನೂ ಪರೋಕ್ಷವಾಗಿ ಹೇಳುತ್ತಾನೆ.
ಪ್ರಪಂಚ ಏನೇ ಮಾಡರ್ನ್ ಆಗಲಿ, ನಮ್ಮ ಆಚಾರ- ವಿಚಾರಗಳಲ್ಲಿ ಎಷ್ಟೇ ಬದಲಾವಣೆಗಳಾಗಲಿ, ನಿಯತ್ತು, ಪ್ರಾಮಾಣಿಕತೆ, ಶುದ್ಧಹಸ್ತದಿಂದ ಜೀವನ ನಡೆಸುವವರಿಗೆ ಈಗಲೂ ಗೌರವವಿದೆ. ಭಾರತವಾಗಲೀ, ವಿದೇಶಗಳಾಗಲೀ, ಮನಸ್ಸಿಗೆ ಬಂದಂತೆ ನಡೆದುಕೊಳ್ಳೋದು, ಅಡ್ಡ ದಾರಿ ಹಿಡಿಯೋದನ್ನು ಎಲ್ಲೂ ಒಪ್ಪುವುದಿಲ್ಲ. ಮುಕ್ತ ಲೈಂಗಿಕತೆಗೆ ಅವಕಾಶವಿರುವ ಪಾಶ್ಚಿಮಾತ್ಯ ದೇಶಗಳಲ್ಲೂ ಸಲಿಂಗಕಾಮ ಶೇಮ್.. ಶೇಮ್... ವಿಷಯವೇ. ಕೆಲವೊಂದು ದೇಶಗಳಲ್ಲಿ ಸಲಿಂಗಿಗಳಿಗೆ ಪೂರಕ ಕಾನೂನು ಜಾರಿ ಆಗಿರಬಹುದು. ಆದರೆ, ಜನರ ಮನಸ್ಸಿನಲ್ಲಿ ಇಂಥ ಆಚರಣೆಗಳ ಬಗ್ಗೆ ತಾತ್ಸಾರ ಇದ್ದೇ ಇರುತ್ತೆ.
ಹಾಗಾಗಿ, ಸಾಧನೆಯ ಹಾದಿಯಲ್ಲಿನ ಯಾವುದೇ ಕ್ರೀಡಾಳು ಜೀವನದಲ್ಲಿ ಹುಷಾರಾಗಿರಬೇಕು, ಹಣ, ಅಂತಸ್ತು, ಜನಪ್ರಿಯತೆಗಳಲ್ಲಿ ಮೈಮರೆಯದೇ, ಶುದ್ಧ ಚಾರಿತ್ರ್ಯದಿಂದ ಬದುಕಬೇಕೆನ್ನುವುದು ಈ ಲೇಖನದ ಆಶಯ. ಇಲ್ಲವಾದರೆ, ಇಯಾನ್ ಥೋರ್ಪ್‌ನಂತೆ ಮುಂದೊಂದು ದಿನ ಯಾರ ಮುಂದೆಯೋ ತಲೆತಗ್ಗಿಸಿಕೊಂಡು ಬದುಕಿನ ತಪ್ಪನ್ನು ಒಪ್ಪಿಕೊಳ್ಳೋ ಅಗತ್ಯ ಬರುವುದಿಲ್ಲ. ಈ ಜಗತ್ತನ್ನು ಬಿಟ್ಟು ಹೋದಾಗಲೂ ನಮ್ಮ ನೆನಪುಗಳಲ್ಲಿ ಕಪ್ಪುಚುಕ್ಕೆ ಇರದಂತೆ ನೋಡಿಕೊಳ್ಳಬಹುದು.

= ಚೇತನ್ ಓ.ಆರ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com