
ಕೌಲಾಲಂಪುರ: ಮಾದಕ ವಸ್ತು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವ ವಿಶ್ವದ ನಂಬರ್ ಒನ್ ಬ್ಯಾಡ್ಮಿಂಟನ್ ಆಟಗಾರ ಮಲೇಷ್ಯಾದ ಲೀ ಚಾಂಗ್ ವೀ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿರುವ ವಿಷಯ ಶನಿವಾರ ಬಹಿರಂಗವಾಗಿದೆ. ಬಿ ಮಾದರಿಯ ಪರೀಕ್ಷೆಯಲ್ಲಿ ಆಟಗಾರನೊಬ್ಬ ನಿಷೇಧಿತ ಔಷಧ ಸೇವಿಸಿರುವುದು ಪತ್ತೆಯಾಗಿದೆ ಎಂದು ಮಲೇಷ್ಯಾ ಬ್ಯಾಡ್ಮಿಂಟನ್ ಸಂಸ್ಥೆಯ ಉಪಾಧ್ಯಕ್ಷ ನೋರ್ಜಾ ಜಕಾರಿಯಾ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ . ಈಗ ಲೀ ಎರಡನೇ ಪರೀಕ್ಷೆಗಾಗಿ ನಾರ್ವೆಗೆ ತೆರಳಿದ್ದಾರೆ ಎನ್ನಲಾಗಿದೆ. ಆದರೆ ಆಟಗಾರರನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ವಿಚಾರಣೆ ನಡೆಸುವುದು ಸೇರಿದಂತೆ ಹಲವಾರು ಕಾರ್ಯಗಳು ಬಾಕಿ ಉಳಿದಿವೆ. ಹೀಗಾಗಿ ಆಟಗಾರನ ಹೆಸರನ್ನು ಬಹಿರಂಗ ಪಡಿಸಲಾಗುವುದು ಎಂದು ನೋರ್ಜಾ ತಿಳಿಸಿದ್ದಾರೆ.
ಈ ಆಟಗಾರ ತುಂಬಾ ಕಠಿಣ ಪರಿಶ್ರಮವಾದಿಯಾಗಿದ್ದಾನೆ. ಅಲ್ಲದೆ, ಈತ ತನ್ನ ಯಶಸ್ಸಿಗಾಗಿ ಯಾವತ್ತೂ ಒಳಮಾರ್ಗಗಳನ್ನು ಬಳಸಿದವನಲ್ಲ. ಆದರೆ, ಈಗ ನಡೆದಿರುವ ಘಟನೆ ಅವರ ವೈಯಕ್ತಿಕ ವಿಷಯವಾಗಿದೆ. ಆತನನ್ನು ಬೆಂಬಲಿಸುವ ನಿಟ್ಟಿನಲ್ಲಿ ನಾವು ಆಟಗಾರ ಮುಗ್ಧ ಎಂದು ಹೇಳುತ್ತೇವೆ. ಕಾರಣ ಆತ ದೇಶಕ್ಕಾಗಿ ಆಡಿ ಕೀರ್ತಿ ತಂದಿದ್ದಾನೆ ಎಂದು ನೋರ್ಜಾ ತಿಳಿಸಿದರು. ಕಳೆದ ಅಗಸ್ಟ್‌ನಲ್ಲಿ ಕೋಪನ್ ಹೇಗನ್‌ನಲಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್‌ನ ವಿಕ್ಟೋರ್ ಅಕ್ಸೆಲ್ಸೆನ್ ಅವರನ್ನು ಸೋಲಿಸಿದಾಗಲೇ ಲೀ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಆದರೆ, ಫೈನಲ್ ಪಂದ್ಯದಲ್ಲಿ ಆತ ಚೀನಾದ ಚೆನ್‌ಲಾಂಗ್ ವಿರುದ್ಧ ಸೋಲನುಭವಿಸಿದ್ದರು. 2008ರಿಂದ ಇಲ್ಲಿಯವರೆಗೂ ವಿಶ್ವ ಬ್ಯಾಡ್ಮಿಂಟನ್‌ನ ಅಗ್ರಸ್ಥಾನದಲ್ಲಿದ್ದ ಲೀ ಚಾಂಗ್ ವೀ ಇದುವರೆಗೂ ವಿಶ್ವ ಚಾಂಪಿಯನ್‌ಶಿಪ್ ಅಥವಾ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿಲ್ಲ.
Advertisement