ಹಾಂಕಾಂಗ್: ಮೂರನೇ ಬಾರಿಗೆ ಸೂಪರ್ ಸೀರಿಸ್ ಪ್ರಶಸ್ತಿ ಗೆಲ್ಲುವ ಸೈನಾ ನೆಹ್ವಾಲ್ ಅವರ ಕನಸು ಭಗ್ನಗೊಂಡಿದೆ. ಶುಕ್ರವಾರ ನಡೆದ ಹಾಂಕಾಂಗ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಅವರು, ಥಾಯ್ಲೆಂಡ್‌ನ ತೈಜು-ಯಿಂಗ್ ವಿರುದ್ಧ 15-21, 19-21 ಅಂತರದಲ್ಲಿ ಸೋತು ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಪಂದ್ಯಾವಳಿಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಮೊದಲ ಗೇಮ್‌ನಲ್ಲಿ ಸೈನಾ ಅವರು ಸ್ವಲ್ಪ ದಣಿದಂತೆ ಕಂಡುಬಂತು. ಕೊಂಚ ಸುಸ್ತಾದಂತೆ ಕಂಡುಬಂದ ಅವರ ಆಟದಲ್ಲಿ ಎಂದಿನಂತೆ ಚುರುಕು ಇರಲಿಲ್ಲ. ಮೊದಲ ಗೇಮ್‌ನ ಒಂದು ಹಂತದಲ್ಲಿ ತೈ ವಿರುದ್ಧ 2-2ರ ಸಮಬಲ ಸಾಧಿಸಿದರಾದರೂ ಆನಂತರ ತೈ ಅವರಿಗೆ ಅಂಕಗಳನ್ನು ಬಿಟ್ಟುಕೊಟ್ಟರು. ಸೈನಾ ಅವರ ದುರ್ಬಲ ಆಟದ ಲಾಭ ಪಡೆದ ತೈ ಮಿಂಚಿನ ಆಟವಾಡಿ ಶೀಘ್ರದಲ್ಲೇ ಮೊದಲ ಗೇಮ್ ಗೆದ್ದುಕೊಂಡರು.
ಆದರೆ, ಎರಡನೇ ಗೇಮ್‌ನಲ್ಲಿ ಸೈನಾ ಪಟ್ಟುಬಿಡದೇ ಹೋರಾಡಿದರು. ತೈ ವಿರುದ್ಧ ಸಮರ ಸಾರಿದ ಅವರು, ಎದುರಾಳಿಗೆ ತೀವ್ರ ಪೈಪೋಟಿ ನೀಡಿದರು. ಅತ್ತ ತೈ ಹಸ ಪ್ರತಿಸ್ಪರ್ಧೆ ನೀಡಿದರು.
ಒಬ್ಬರ ಹಿಂದೊಬ್ಬರಂತೆ ಅಂಕಗಳನ್ನು ಪೇರಿಸುತ್ತಾ ಸಾಗಿದ ಅವರು ಒಂದು ಹಂತದಲ್ಲಿ 19-19ರ ಸಮಬಲ ಸಾಧಿಸಿದರು.
ಆದರೆ, ಗೆಲುವಿಗಾಗಿ ಶಕ್ತಿ ಮೀರಿ ಹೋರಾಡಿದ ತೈ, ಸರಸರನೆ ಅಂಕಗಳನ್ನು 21ಕ್ಕೇರಿಸಿಕೊಂಡು ಸೈನಾ ಅವರನ್ನು ಸೋಲಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ