ಹುಸಿಯಾದ ಪದಕ ನಿರೀಕ್ಷೆ

ಭರವಸೆಯ ಆಟಗರ ಕಿಡಂಬಿ ಶ್ರೀಕಾಂತ್ ಅವರು ಹಾಂಕಾಂಗ್...
ಕಿಡಂಬಿ ಶ್ರೀಕಾಂತ್
ಕಿಡಂಬಿ ಶ್ರೀಕಾಂತ್
Updated on

ಹಾಂಕಾಂಗ್: ಭರವಸೆಯ ಆಟಗಾರ ಕಿಡಂಬಿ ಶ್ರೀಕಾಂತ್ ಅವರು ಹಾಂಕಾಂಗ್ ಓಪನ್‌ನ ಸೆಮಿಫೈನಲ್‌ನಲ್ಲಿ ಸೋಲು ಅನುಭುವಿಸಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಅವರು ಚೀನಾದ ಚೆನ್ ಲಾಂಗ್ ವಿರುದ್ಧ 17-21, 21-19, 6-21 ಅಂತರದಲ್ಲಿ ಸೋಲು ಕಂಡರು.

ಇತ್ತೀಚೆಗಷ್ಟೇ ಚೀನಾ ಓಪನ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಶ್ರೀಕಾಂತ್ ಅವರ ಮೇಲೆ ಹಲವಾರು ನಿರೀಕ್ಷೆಗಳಿದ್ದವು. ಅದರಲ್ಲೂ ಶುಕ್ರವಾರ ನಡೆದಿದ್ದ ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಭಾರತದ ಸೈನಾ ನೆಹ್ವಾಲ್ ಅವರು ಸೋತಿದ್ದರು. ಈ ಹಿನ್ನೆಲೆಯಲ್ಲಿ ಹಾಂಕಾಂಗ್ ಓಪನ್‌ನಲ್ಲಿ ಏಕೈಕ ಭರವಸೆಯ ಆಶಾಕಿರಣವಾಗಿ ಶ್ರೀಕಾಂತ್ ಹೊರಹೊಮ್ಮಿದ್ದರು. ಆದರೆ, ಪದಕ ಗೆಲ್ಲುವ ಅವರ ಹಾಗೂ ಕೋಟ್ಯಾಂತರ ಭಾರತೀಯರ ಕನಸು ನನಸಾಗಲಿಲ್ಲ.

ಮೊದಲ ಗೇಮ್‌ನ ಆರಂಭದಲ್ಲಿ ಶ್ರೀಕಾಂತ್ ಅವರು ಎದುರಾಳಿಗೆ ಉತ್ತಮ ಪೈಪೋಟಿ ನೀಡಲಿಲ್ಲ. ಇದರ ಲಾಭ ಮಾಡಿಕೊಂಡ ಚೆನ್, ಆರಂಭದಿಂದಲೇ ಅಂಕಗಳನ್ನು ಪೇರಿಸುತ್ತಾ ಹೋದರು. ಒಂದು ಹಂತದಲ್ಲಿ ಇಬ್ಬರ ನಡುವೆ 10-3 ರಷ್ಟು ದೊಡ್ಡ ಅಂತರ ಸೃಷ್ಟಿಸಿಕೊಂಜಿದ್ದ ಚೆನ್, ಶ್ರೀಕಾಂತ್‌ಗಿಂತ ಸಾಕಷ್ಟು ಮುಂದಿದ್ದರು. ಆದರೆ, ಈ ಹಂತದಲ್ಲಿ ಶ್ರೀಕಾಂತ್ ಕೈ ಚೆಲ್ಲಲಿಲ್ಲ. ಚೆನ್ ಅವರನ್ನು ಹಿಂದಿಕ್ಕಲು ಸಾಕಷ್ಟು ಹೋರಾಟ ನಡೆಸಿದರು. ಆದರೆ, ತಮ್ಮ ಮೇಲೆ ಹಿಡಿತ ಸಾಧಿಸಲು ಶ್ರೀಕಾಂತ್‌ಗೆ ಚೆನ್ ಅವಕಾಶ ನೀಡಲಿಲ್ಲ. ಅಂತಿಮವಾಗಿ, ಚೀನಾದ ಆಟಗಾರ 17-21ರ ಅಂತರದಲ್ಲಿ ಮೊದಲ ಗೇಮ್ ಗೆದ್ದುಕೊಂಡರು.

ಇನ್ನು, ಎರಡನೇ ಗೇಮ್‌ನಲ್ಲಿ ಶ್ರೀಕಾಂತ್ ಪುಟಿದೆದ್ದರು. ತಮ್ಮೆಲ್ಲಾ ಅಂತಃಸತ್ವವನ್ನು ಧಾರೆಯೆರೆದ ಅವರು ಗೆಲುವಿಗಾಗಿ ಹೋರಾಡಿದರು. ಇದು ಶ್ರೀಕಾಂತ್ ಅವರನ್ನು ಮೊದಲ ಗೇಮ್‌ನಲ್ಲಿ ಮಣಿಸಿದ ಉತ್ಸಾಹದಲ್ಲಿದ್ದ ಚೆನ್ ಅವರಿಗೆ ಕೊಂಚ ದಿಗಿಲುಗೊಳ್ಳುವಂತೆ ಮಾಡಿತು.

ತಕ್ಷಣವೇ ಎಚ್ಚೆತ್ತುಕೊಂಡ ಚೆನ್, ಶ್ರೀಕಾಂತ್ ವಿರುದ್ಧ ಹರಿಹಾಯ್ದರು. ಶೀಘ್ರದಲ್ಲೇ ತಮ್ಮ ಹಾಗೂ ಕಿಡಂಬಿ ನಡುವಿನ ಅಂತರವನ್ನು 4-0ಗೆ ಹೆಚ್ಚಿಸಿಕೊಂಡರು. ಆದರೆ, ಶ್ರೀಕಾಂತ್ ಪಟ್ಟುಬಿಡಲಿಲ್ಲ. ವೇಗವಾಗಿ ಅಂಕಗಳನ್ನು ಹೆಚ್ಚಿಸಿಕೊಂಡ ಅವರು 8-8ರ ಸಮಬಲ ಸಾಧಿಸಿದರು. ಈ ಹಂತದಲ್ಲಿ ಚೆನ್ ಸಹ ಕೆಲವೊಂದು ಅಂಕಗಳನ್ನು ಸುಲಭವಾಗಿ ಬಿಟ್ಟುಕೊಟ್ಟರು. ಇದರಿಂದಾಗಿ, ಶ್ರೀಕಾಂತ್ 21-19ರ ಅಂತರದಲ್ಲಿ 2ನೇ ಗೇಮ್ ಗೆದ್ದುಕೊಂಡರು.

ಇನ್ನು, ಮೂರನೇ ಹಾಗೂ ನಿರ್ಣಾಯಕ ಗೇಮ್ ಹೆಚ್ಚು ನಿರೀಕ್ಷೆಗೊಳಗಾಗಿತ್ತು. ಈ ಬಾರಿ ಚೆನ್ ಮತ್ತೆ ತಪ್ಪು ಮಾಡಲಿಲ್ಲ. ಆರಂಭದಿಂದಲೇ ಶ್ರೀಕಾಂತ್ ವಿರುದ್ಧ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದ ಅವರು, ಬಹುಬೇಗನೇ 11-4ರ ದೊಡ್ಡ ಅಂತರ ಗಳಿಸಿದರು. ಇಲ್ಲಿ ಶ್ರೀಕಾಂತ್ ಅವರು ಕೆಲವೊಂದು ತಪ್ಪುಗಳನ್ನೆಸಗಿದ್ದರಿಂದ ಎದುರಾಳಿಯ ಅಂಕಗಳಲ್ಲಿ ಏರಿಕೆ ತಂದರು. ತಮ್ಮ ವಿರುದ್ಧ ಚೆನ್ ಅಂಕಗಳನ್ನು ಹೆಚ್ಚುಹೆಚ್ಚಾಗಿ ಗಳಿಸಿದಂತೆಲ್ಲಾ ಶ್ರೀಕಾಂತ್ ಒತ್ತಡಕ್ಕೊಳಗಾದಂತೆ ಭಾಸವಾಯಿತು. ಇದರಿಂದಾಗಿ, ಅವರಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಹೊರಹೊಮ್ಮಲಿಲ್ಲ. ಅಂತಿಮವಾಗಿ, ಈ ಗೇಮ್‌ನಲ್ಲಿ ಚೆನ್ ಅವರು 21-6ರ ಭಾರೀ ಅಂತರದಲ್ಲಿ ಜಯ ಸಾಧಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com