
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ಬಗ್ಗೆ ಮುದ್ಗಲ್ ಸಮಿತಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾದ ಕ್ರಿಕೆಟಿಗರ ಹೆಸರನ್ನು ಬಹಿರಂಗ ಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಮುದ್ಗಲ್ ವರದಿಯಲ್ಲಿ 'ವ್ಯಕ್ತಿ 2' ಮತ್ತು 'ವ್ಯಕ್ತಿ 3' ಎಂದು ಉಲ್ಲೇಖಿಸಿರುವ ಅನಾಮಿಕರು ಯಾರು ಎಂಬುದು ಕುತೂಹಲ ಸೃಷ್ಟಿಸಿದೆ.
ವರದಿಯಲ್ಲಿ ಉಲ್ಲೇಖಿಸಿರುವ 'ವ್ಯಕ್ತಿ 3' ಎಂಬುದು ಟೀಂ ಇಂಡಿಯಾದ ಕ್ರಿಕೆಟರ್ ಎಂದು ಬಿಸಿಸಿಐ ಮೂಲಗಳು ಹೇಳಿದ್ದವು. ಈ ವ್ಯಕ್ತಿ ಸದಾಚಾರ ಸಂಹಿತೆ ಉಲ್ಲಂಘನೆ ಮಾಡಿದ್ದರೂ ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ಆ ವ್ಯಕ್ತಿ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದೂ ಬಿಸಿಸಿಐ ಹೇಳಿತ್ತು.
'ವ್ಯಕ್ತಿ 3' ಸದಾಚಾರ ಸಂಹಿತೆ ಉಲ್ಲಂಘನೆ ನಡೆಸಿರುವುದು ಶ್ರೀನಿವಾಸನ್ ಮತ್ತು ಬಿಸಿಸಿಐಯ ಇತರ ನಾಲ್ವರು ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಅವರ್ಯಾರೂ ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಮುದ್ಗಲ್ ವರದಿಯಲ್ಲಿಯೂ ಹೇಳಲಾಗಿದೆ.
ಏತನ್ಮಧ್ಯೆ, ವರದಿಯಲ್ಲಿ ಉಲ್ಲೇಖಿಸಿರುವ 'ವ್ಯಕ್ತಿ 3' ಯಾರು ಎಂಬುದು ನಿಗೂಢವಾಗಿಯೇ ಉಳಿದುಕೊಂಡಿದೆ. ಇನ್ನೊಂದೆಡೆ ವರದಿಯಲ್ಲಿ ಉಲ್ಲೇಖಿಸಿರುವ 'ವ್ಯಕ್ತಿ 2' ಶ್ರೀನಿವಾಸನ್‌ರ ಅಳಿಯ ಗುರುನಾಥ್ ಮೇಯಪ್ಪನ್ ಅವರೊಂದಿಗೆ ಸಂಪರ್ಕದಲ್ಲಿ ಇದ್ದರು ಎಂದೂ ಹೇಳಲಾಗುತ್ತಿದೆ.
ವರದಿಯಲ್ಲಿರುವ ಅನಾಮಿಕರ ಹೆಸರನ್ನು ಬಹಿರಂಗ ಪಡಿಸುವ ಮೂಲಕ ಆ ವ್ಯಕ್ತಿಗಳ ವೃತ್ತಿ ಜೀವನಕ್ಕೆ ಧಕ್ಕೆ ತರುವುದು ಬೇಡ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಎಲ್ಲಿಯವರೆಗೆ ಹಗರಣದಲ್ಲಿ ಭಾಗಿಯಾಗಿರುವ ಕ್ರಿಕೆಟಿಗರ ಹೆಸರನ್ನು ಮುಚ್ಚಿಟ್ಟು ಬಿಸಿಸಿಐ ಅವರನ್ನು ರಕ್ಷಿಸುವ ಕಾರ್ಯ ಮಾಡಬಹುದು? ಎಂಬುದು ಸದ್ಯದ ಪ್ರಶ್ನೆ.
Advertisement