ಮನಿಲಾ: ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್(ಐಪಿಟಿಎಲ್)ನಲ್ಲಿ ಇಂಡಿಯಾ ಏಸಸ್ ತಂಡ ತನ್ನ ಜಯ ಓಟವನ್ನು ಮುಂದುವರಿಸಿದೆ. ಶನಿವಾರ ನಡೆದ ತನ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಇಂಡಿಯಾ ಏಸ್ ತಂಡ, ಮನಿಲಾ ಮಾವೆರಿಕ್ಸ್ ತಂಡವನ್ನು 24-15 ಅಂತರದಲ್ಲಿ ಸೋಲಿಸಿತು. ತನ್ನ ಮೊದಲ ಪಂದ್ಯದಲ್ಲಿ ಸಿಂಗಪೂರ್ ಸ್ಲಾಮರ್ಸ್ ತಂಡವನ್ನು ಮಣಿಸಿದ್ದ ಇಂಡಿಯನ್ ಏಸಸ್, ಇದೀಗ ಸತತ ಎರಡನೇ ಗೆಲುವು ದಾಖಲಿಸಿ, ಪಂದ್ಯಾವಳಿಯಲ್ಲಿ ತನ್ನ ಜಯದ ನಾಗಾಲೋಟವನ್ನು ಮುಂದುವರಿಸಿದೆ.
ಲೆಜೆಂಡ್ಸ್ ಸಿಂಗಲ್ಸ್ ಸುತ್ತಿನ ಪಂದ್ಯದಲ್ಲಿ, ಇಂಡಿಯಾ ಏಸಸ್‌ನ ಫ್ಯಾಬ್ರಿಸ್ ಸ್ಯಾಂಟೊರೊ ಹಾಗೂ ಮನಿಲಾ ತಂಡದ ಕಾರ್ಲೋಸ್ ಮಾಯಾ ನಡುವೆ ಪಂದ್ಯ ನಡೆಯಿತು. ಆದರೆ, ಪಂದ್ಯದ ಮಧ್ಯದಲ್ಲೇ ಕಾರ್ಲೋಸ್ ಮಾಯಾ ಅವರು ಗಾಯಗೊಂಡು ನಿರ್ಗಮಿಸಿದರು. ಇವರ ಬದಲಿಗೆ ಡೇನಿಯಲ್ ನೆಸ್ಟರ್ ಪಂದ್ಯ ಮುಂದುವರೆಸಿದರು. ಆದರೆ, ಅಂತಿಮವಾಗಿ ಸ್ಯಾಂಟೆರೊ 6-1 ಅಂತರದಲ್ಲಿ ಜಯ ಸಾಧಿಸಿದರು. ಇತ್ತಂಡಗಳ ನಡುವಿನ ಪುರುಷರ ಡಬಲ್ಸ್ ಪಂದ್ಯದಲ್ಲಿ ಏಸಸ್ ತಂಡದ ಗೆಲ್ ಮಾನ್‌ಫಿಲ್ಸ್ ಹಾಗೂ ರೋಹನ್ ಬೋಪಣ್ಣ ಜೋಡಿ, ಜೋ ವಿಲ್‌ಫ್ರೆಡ್ ಸೋಂಗಾ ಹಾಗೂ ಫಿಲಿಪಿನೊ ಟ್ರೀಟ್ ಹುಲೆ ವಿರುದ್ಧ 0-6 ಅಂತರದ ಸೋಲು ಕಂಡಿತು.
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ, ಏಸಸ್ ತಂಡದ ಗೆಲ್ ಮಾನ್‌ಫಿಲ್ಸ್ ಅವರು ಆ್ಯಂಡಿ ಮರ್ರೆಯನ್ನು 6-4 ಅಂತರದಲ್ಲಿ ಸೋಲಿಸಿದರು.
ಎರಡೂ ತಂಡಗಳ ನಡುವಿನ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಇಂಡಿಯಾ ಏಸಸ್‌ನ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ, ಮನಿಲಾ ತಂಡ ಮಾರಿಯಾ ಶರಪೊವಾ ಹಾಗೂ ಆ್ಯಂಡಿ ಮರ್ರೆ ವಿರುದ್ಧ 6-1 ಅಂತರದಲ್ಲಿ ಜಯ ಸಾಧಿಸಿ, ಏಸಸ್ ತಂಡಕ್ಕೆ 18-12ರ ಮುನ್ನಡೆ ಒದಗಿಸಿಕೊಟ್ಟರು. ಇದಾದ ನಂತರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಏಸಸ್ ತಂಡದ ಆ್ಯನಾ ಇವಾನೊವಿಕ್ ಅವರು ಶರಪೋವಾ ವಿರುದ್ಧ 6-3 ಅಂತರದಲ್ಲಿ ಗೆಲುವು ದಾಖಲಿಸಿದರು. ಇಂಡಿಯಾ ಏಸಸ್ ತಂಡ, ಮನಿಲಾ ತಂಡದ ವಿರುದ್ಧ 24-15 ಅಂತರದ ಜಯ ಪಡೆಯಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ