ಎರಡನೇ ಸುತ್ತಿಗೆ ಸೈನಾ, ಶ್ರೀಕಾಂತ್

ಕಳೆದ ಭಾನುವಾರವಷ್ಟೇ ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರೀಸ್ ಪ್ರಶಸ್ತಿಯನ್ನು...
ಕಿಡಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್
ಕಿಡಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್

ಕೌಲಾಲಂಪುರ: ಕಳೆದ ಭಾನುವಾರವಷ್ಟೇ ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರೀಸ್ ಪ್ರಶಸ್ತಿಯನ್ನು ಮೊದಲ ಬಾರಿಗೆ ಗೆದ್ದುಕೊಂಡಿದ್ದ ಭಾರತದ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್, ಇದೀಗ ಮಲೇಷಿಯನ್ ಟೂರ್ನಿಯಲ್ಲೂ ಶುಭಾರಂಭ ಮಾಡಿದ್ದಾರೆ.

ಕೌಲಾಲಂಪುರದಲ್ಲಿ ನಡೆಯುತ್ತಿರುವ 5 ಲಕ್ಷ ಡಾಲರ್ ಬಹುಮಾನ ಮೊತ್ತದ ಮಲೇಷಿಯನ್ ಓಪನ್ ಸೂಪರ್ ಸಿರೀಸ್ ಪ್ರೀಮಿಯರ್ ಟೂರ್ನಿಯಲ್ಲಿ ಈ ಇಬ್ಬರೂ ಶಟ್ಲರ್ಗಳು ತಮ್ಮ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತಿಗೆ ಹೆಜ್ಜೆ ಹಾಕಿದ್ದಾರೆ.

ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್, 21-13, 21-16 ನೇರ ಗೇಮ್ ಗಳಿಂದ ಇಂಡೊನೇಷಿಯಾದ ಮಾರಿಯಾ ಫೆಬೆ ಕುಸುಮಸ್ತುತಿ ಅವರನ್ನು ಸೋಲಿಸಿದರು. ಕೇವಲ 37 ನಿಮಿಷಗಳ ಆಟದಲ್ಲಿಯೇ ಸೈನಾ, ಗೆಲವು ದಾಖಲಿಸಿ ಎರಡನೇ ಸುತ್ತು ಪ್ರವೇಶಿಸಿದರು.

ವಿಶ್ವದ ನಾಲ್ಕನೇ ಶ್ರೇಯಾಂಕಿತ, ತಮಿಳುನಾಡು ಮೂಲದ ಕೆ. ಶ್ರೀಕಾಂತ್, ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್ನ ರಾಜೀವ್ ಓಸೆಫ್ ಅವರನ್ನು 21-10, 15-21, 24-22 ಅಂಕಗಳಿಂದ ಸೋಲಿಸಿ ಮುನ್ನಡೆದರು.

ಒಟ್ಟು 56 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾರತೀಯ ಆಟಗಾರ ಮೊದಲ ಗೇಮ್ ಗೆದ್ದು ಶುಭಾರಂಭ ಮಾಡಿದ್ದರು. ಆದರೆ, ಎರಡನೇ ಗೇಮ್ ನಲ್ಲಿ ಅನಗತ್ಯ ತಪ್ಪುಗಳನ್ನು ಮಾಡುವ ಮೂಲಕ ಎದುರಾಳಿಗೆ ಮೇಲುಗೈ ಸಾಧಿಸಲು ಅವಕಾಶ ಮಾಡಿಕೊಟ್ಟರು. ಶ್ರೀಕಾಂತ್ ರ ತಪ್ಪುಗಳ ಲಾಭ ಪಡೆದ ರಾಜೀವ್ 21-15ರಿಂದ ಎರಡನೇ ಗೇಮ್ ಜಯಿಸಿ 1-1ರಿಂದ ಸಮಗೌರವ ಸಾಧಿಸಿದರು.

ಈ ಮಧ್ಯೆ ತೀವ್ರ ಹಣಾಹಣಿಯಿಂದ ಕೂಡಿದ್ದ ಮೂರನೇ ಗೇಮ್ ನಲ್ಲಿ ಶ್ರೀಕಾಂತ್ ಮತ್ತೆ ತಮ್ಮ ಅತ್ಯುತ್ತಮ ಲಯ ಕಂಡುಕೊಳ್ಳುವ ಮೂಲಕ ಅಂತಿಮವಾಗಿ ಗೆಲವು ತಮ್ಮದಾಗಿಸಿಕೊಂಡರು.
ಕಳೆದ ವರ್ಷ ವಿಶ್ವ ಚಾಂಪಿಯನ್ಶಿಪ್ನಲ್ಲಿ ರಾಜೀವ್ ಅವರನ್ನು ಮಣಿಸಿದ್ದ ಶ್ರೀಕಾಂತ್, ಇಲ್ಲಿಯೂ ತಮ್ಮ ಪ್ರಭುತ್ವ ಮುಂದುವರಿಸಿದರು. ಮತ್ತೊಂದೆಡೆ 2010ರ ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ರಾಜೀವ್ ಉತ್ತಮ ಪ್ರದರ್ಶನ ನೀಡಿದರೂ ಗೆಲ್ಲುವ ಅದೃಷ್ಟ ಹೊಂದಿರಲಿಲ್ಲ.

ಪರುಪಳ್ಳಿ ಕಶ್ಯಪ್ ತಮ್ಮ ಎದುರಾಳಿ ಕೊರಿಯಾದ ಲೀ ಡಾಂಗ್ ವಿರುದ್ಧ 21--15 11--21 21--14 ಗೇಮ್ ಗಳಿಂದ ಗೆದ್ದರೆ, ಎಚ್.ಎಸ್ ಪ್ರಣಯ್ ಐರ್ಲೆಂಡ್ನ ಸ್ಕಾಟ್ ಎವಾನ್ಸ್ ವಿರುದ್ಧ 22--20 21--18 ಅಂತರದಲ್ಲಿ ಜಯಿಸಿದರು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com