ಮಿಯಾಮಿ ಓಪನ್ ಸೆಮಿಫೈನಲ್ಗೆ ಸಾನಿಯಾ ಜೋಡಿ

ಕಳೆದ ತಿಂಗಳಷ್ಟೇ ಜೋಡಿಯಾದ ನಂತರ ಮೊದಲ ಪ್ರವೇಶದಲ್ಲಿಯೇ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿದ್ದ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ಲೆಂಡ್ನ ಮಾರ್ಟಿನಾ...
ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್
ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್

ಮಿಯಾಮಿ: ಕಳೆದ ತಿಂಗಳಷ್ಟೇ ಜೋಡಿಯಾದ ನಂತರ ಮೊದಲ ಪ್ರವೇಶದಲ್ಲಿಯೇ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿದ್ದ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ಲೆಂಡ್ನ ಮಾರ್ಟಿನಾ ಹಿಂಗಿಸ್, ಈಗ ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲೂ ಸೆಮಿಫೈನಲ್ ಪ್ರವೇಶಿಸುವುದರೊಂದಿಗೆ ಸತತ ಎರಡನೇ ಚಾಂಪಿಯನ್ ಪಟ್ಟದತ್ತ ಸಾಗಿದ್ದಾರೆ.

ಇಂಡಿಯಾನ ವೇಲ್ಸ್ನಲ್ಲಿ ಪ್ಯಾರಿಬಸ್ ಓಪನ್ ಪ್ರಶಸ್ತಿ ಗೆದ್ದು ತಮ್ಮ ಜೋಡಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಸಾನಿಯಾ ಮತ್ತು ಹಿಂಗಿಸ್, ಮಿಯಾಮಿ ಓಪನ್ ಟೂರ್ನಿಯಲ್ಲೂ ದಿಟ್ಟ ಪ್ರದರ್ಶನ ನೀಡುತ್ತಿದ್ದು, ಪ್ರಶಸ್ತಿ ಗೆದ್ದುಕೊಳ್ಳಲು ಇನ್ನೆರೆಡು ಮೆಟ್ಟಿಗಳುಗಳಷ್ಟೇ ಉಳಿದಿವೆ.

ಅಗ್ರಶ್ರೇಯಾಂಕಿತ ಜೋಡಿಯಾಗಿರುವ ಸಾನಿಯಾ-ಹಿಂಗಿಸ್, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೊಡಿನೋವಾ ಸಹೋದರಿಯರಾದ ಅನಸ್ತಸಿಯಾ ಮತ್ತು ಅರಿನಾ ಅವರನ್ನು 6-3, 6-4 ನೇರ ಸೆಟ್ಗಳಿಂದ ಪರಾಭವಗೊಳಿಸಿದರು. ಸುಮಾರು ಒಂದೂವರೆ ಗಂಟೆ ಆಟದಲ್ಲಿ ಭಾರತ-ಸ್ವಿಜರ್ಲೆಂಡ್ ಜೋಡಿಯು ಉತ್ತಮ ಹೊಂದಾಣಿಕೆ ಆಟ ಪ್ರದರ್ಶಿಸುವ ಮೂಲಕ ನಿರೀಕ್ಷೆಯಂತೆ ಎದುರಾಳಿ ಜೋಡಿಯ ಮೇಲೆ ಸವಾರಿ ಮಾಡುವಲ್ಲಿ ಯಶಸ್ವಿಯಾಯಿತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಅನುಭವಿ ಆಟಗಾರ್ತಿಯಾಗಿರುವ ಮಾರ್ಟಿನಾ ಹಿಂಗಿಸ್, ಒಟ್ಟು 11 ಗ್ರ್ಯಾನ್ಸ್ಲಾಮ್ (ಮಹಿಳೆಯರ ವಿಭಾಗದಲ್ಲಿ 9 ಮತ್ತು ಮಿಶ್ರ ಡಬಲ್ಸ್ ನಲ್ಲಿ 2) ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇನ್ನೊಂದೆಡೆ ಸಾನಿಯಾ ಮೂರು ಗ್ರ್ಯಾನ್ಸ್ಲಾಮ್ ಗಳನ್ನು (ಎಲ್ಲವೂ ಮಿಶ್ರ ಡಬಲ್ಸ್ನಲ್ಲಿ) ಜಯಿಸಿದ್ದಾರೆ.

ಈ ಇಬ್ಬರ ನಡುವಿನ ಉತ್ತಮ ತಾಳಮೇಳ ಈಗ ಸತತ ಎರಡನೇ ಪ್ರಶಸ್ತಿಯತ್ತ ಸಾಗಲು ನೆರವಾಗಿದೆ. ಭಾರತ-ಸ್ವಿಸ್ ಜೋಡಿಗೆ ಸೆಮಿಫೈನಲ್ ಪಂದ್ಯದಲ್ಲಿ ಏಳನೇ ಶ್ರೇಯಾಂಕಿತ ಜೋಡಿಯಾದ ಹಂಗರಿಯ ಟಿಮಿಯಾ ಬಾಬೊಸ್ ಮತ್ತು ಫ್ರಾನ್ಸ್ ನ ಕ್ರಿಸ್ಟಿನಾ ಮ್ಲಾಡೆನೊವಿಚ್ ಅವರ ಸವಾಲು ಎದುರಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com