
ನವದೆಹಲಿ: ಮುಂದಿನ ವರ್ಷ ರಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಫಲಿತಾಂಶ ಪಡೆಯಲು ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಯಲ್ಲಿ ತಮ್ಮ ಹೆಸರನ್ನು ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿಯು 2011ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದಿದ್ದರು. ಈ ಜೋಡಿಯನ್ನು ಟಾರ್ಗೆಟ್ ಒಲಿಂಪಿಕ್ಸ್ ಪೊಡಿಯಂ ಯೋಜನೆಯಿಂದ ಕೇಂದ್ರ ಸರ್ಕಾರ ಕೈಬಿಟ್ಟಿದೆ. ಬ್ಯಾಡ್ಮಿಂಟನ್ ಈ ಯೋಜನೆಯ ಫಲವನ್ನು ಪಡೆಯುತ್ತಿರುವ ಮೊದಲ ಕ್ರೀಡೆಯಾಗಿದೆ.
ಈ ಕ್ರೀಡೆಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಮಾ.30ರಂದು ಕೇಂದ್ರ ಯುವ ಹಾಗೂ ಕ್ರೀಡಾ ಸಚಿವಾಲಯ, ಇಂಡಿಯಾ ಇನ್ರ್ಫಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ ಇಂಡಿಯಾ ಇನ್ರ್ಫಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್ ಪ್ರತಿ ವರ್ಷ ರು.10ಕೋಟಿಯಂತೆ ಮೂರು ವರ್ಷಕ್ಕೆ ಒಟ್ಟು ರು. 30 ಕೋಟಿ ಆರ್ಥಿಕ ನೆರವು ನೀಡಲಿದೆ.
ಯೋಜನೆಯಲ್ಲಿ ತಮ್ಮ ಹೆಸರನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಜ್ವಾಲಾ, ಸರ್ಕಾರದನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಹಾಗೂ ಅಶ್ವಿನಿ ಹೆಸರನ್ನು ಪ್ರಮುಖ ಯೋಜನೆಯಿಂದ ಕೈಬಿಡಲಾಗಿದೆ ಎಂಬ ಸುದ್ದಿ ಓದಿದೆ. ಇಷ್ಟು ದಿನಗಳ ಕಾಲ ನಮಗೆ ಇದ್ದ ಏಕೈಕ ಬೆಂಬಲ ಭಾರತದ ಸರ್ಕಾರವಾಗಿತ್ತು. ಈಗ ಅದು ಕೂಡ ಸಿಗುವುದಿಲ್ಲ. ಈಗಾಗಲೇ ಕಾರ್ಪೋರೆಟ್ ಕಂಪನಿಗಳ ಬೆಂಬಲ ಇರುವ ಆಟಗಾರರು ಇದ್ದಾರೆ. ಆದರೆ ಅಶ್ವಿನಿ ಹಾಗೂ ನನ್ನನ್ನು ಪರಿಗಣಿಸಿಲ್ಲ. ಇನ್ನು ಏನು ಮಾಡಬೇಕು ಗೋತ್ತಿಲ್ಲ ಬಹಳ ನಿರಾಸೆಯಾಗಿದೆ ಎಂದಿದ್ದಾರೆ.
ನನ್ನ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಕಳೆದ ವರ್ಷ 3 ಪದಕಗಳನ್ನು ಗೆದ್ದಿದ್ದೇನೆ. ಈಗ ಒಲಿಂಪಿಕ್ಸ್‍ಗೆ ಅರ್ಹತೆ ಪಡೆಯುವತ್ತ ಗಮನ ಹರಿಸಿದ್ದೇನೆ. ಡಬಲ್ಸ್ ವಿಭಾಗದಲ್ಲಿ ಆಡುವುದು ಎಷ್ಟು ಕಷ್ಟ ಎಂದು ಸಾಕಷ್ಟು ಜನರಿಗೆ ತಿಳಿದಿಲ್ಲ. ಪದೇ ಪದೇ ನಾವು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಬ್ಯಾಡ್ಮಿಂಟನ್ ಸಂಸ್ಥೆ ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇನ್ನು ರಾಷ್ಟ್ರೀಯ ಕೋಚ್ ನಾವು ಸೋತಾಗಲೇ ಹೆಚ್ಚು ಸಂತೋಷಪಡುತ್ತಾರೆ. ಈ ರೀತಿಯಾಗಿ ನಿರ್ಲಕ್ಷಿಸಿರುವುದರಿಂದ ನೋವಾಗಿದೆ ಹಾಗಾಗಿ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದೇನೆ. ಇನ್ನು ಮುಂದೆ ಏನನ್ನು ನಿರೀಕ್ಷಿಸುವುದಿಲ್ಲ. ಸಂಪೂರ್ಣ ವ್ಯವಸ್ಥೆಯೇ ನಮ್ಮ ವಿರುದ್ಧ ನಿಂತಿದೆ. ಪ್ರತಿ ಬಾರಿಯೂ ನಾನು ಉತ್ಸಾಹ ದಿಂದ ತಯಾರಿ ನಡೆಸಲು ಮುಂದಾದಾಗ ಈ ರೀತಿಯಾದ ನಿರಾಸೆಗಳಿಂದ ಬೇಸತ್ತಿದ್ದೇನೆ.
ದೇಶದಲ್ಲಿ ಸಿಂಗಲ್ಸ್ ವಿಭಾಗದ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಡಬಲ್ಸ್ ಆಟಗಾರರು ಏಕೆ ನೀಡುತ್ತಿಲ್ಲ ಎಂದು ಪ್ರಶ್ನೆ ಉದ್ಭವಿಸಬಹುದು. ಅದಕ್ಕೆ ಕಾರಣ, ಪದೇ ಪದೇ ನಮ್ಮನ್ನು ನಿರ್ಲಕ್ಷಿಸುತ್ತಿರುವುದೇ ಕಾರಣ ಎಂದರು.
Advertisement