
ಬೆಂಗಳೂರು: ನಿರೀಕ್ಷೆಯಂತೆ ಎರಡು ಸಮಬಲದ ತಂಡಗಳು ಜಿದ್ದಾಜಿದ್ದಿನ ಹೋರಾಟ ನೀಡುವ ಮೂಲಕ ರೋಚಕ ಹಣಾಹಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಡ್ರಾ ಫಲಿತಾಂಶದೊಂದಿಗೆ ತೃಪ್ತಿಪಟ್ಟಿವೆ. ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಹಾಗೂ ರಾಯಲ್ ವಾಹಿಂಗ್ಡೊ ತಂಡಗಳು ಐ-ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಡ್ರಾ ಫಲಿತಾಂಶ ಪಡೆದಿವೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಎಫ್ ಸಿ ಮತ್ತು ಇದೇ ಮೊದಲ ಬಾರಿಗೆ ಐ-ಲೀಗ್‍ಗೆ ಪ್ರವೇಶಿಸಿರುವ ಮೇಘಾಲಯದ ರಾಯಲ್ ವಾಹಿಂಗ್ಡೊ 3-3 ಗೋಲುಗಳ ಡ್ರಾಗೆ ಸಮಾಧಾನಗೊಂಡಿವೆ. ಉಭಯ ತಂಡಗಳು ಪಂದ್ಯದಲ್ಲಿ ತೀವ್ರ ಹೋರಾಟಕಾರಿ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಪಂದ್ಯ ಸಾಕಷ್ಟು ರೋಚಕವಾಗಿತ್ತು.
ಆದರೆ, ಯಾವುದೇ ತಂಡ ಮೇಲುಗೈ ಸಾಧಿಸದ ಹಿನ್ನೆಲೆಯಲ್ಲಿ ಪಂದ್ಯದಲ್ಲಿ ಉಭಯ ತಂಡಗಳು ತಲಾ 1 ಅಂಕಗಳನ್ನು ಹಂಚಿಕೊಂಡವು. ಪಂದ್ಯದ 17ನೇ ನಿಮಿಷದಲ್ಲಿ ರಾಯಲ್ ವಾಹಿಂಗ್ಡೊ ಮೊದಲು ಗೋಲು ಖಾತೆ ತೆರೆಯುವ ಮೂಲಕ ಮುನ್ನಡೆ ಸಾಧಿಸಿತು.
ಈ ವೇಳೆ ಕಿಮ್ ಒದ್ದ ಚೆಂಡನ್ನು ಸರಿಯಾಗಿ ಊಹಿಸುವಲ್ಲಿ ಬಿಎಫ್ ಸಿ ತಂಡದ ಗೋಲ್‍ಕೀಪರ್ ರಾಲ್ಟೆ ವಿಫಲರಾದ ಹಿನ್ನೆಲೆಯಲ್ಲಿ ಎದುರಾಳಿ ತಂಡ ಗೋಲು ದಾಖಲಿಸಿತು. ನಂತರ ಸಂಘಟಿತ ದಾಳಿ ನಡೆಸಿದ ಬೆಂಗಳೂರು ಎಫ್ ಸಿಗೆ 39ನೇ ನಿಮಿಷದಲ್ಲಿ ರಾಬಿನ್ ಸಿಂಗ್ ಆಸರೆಯಾಗಿ ನಿಂತರು.
ಯುಗೆನ್ಸನ್ ಲಿಂಗ್ಡೊ ಕಾರ್ನರ್ ಕಿಕ್‍ನಿಂದ ಬಂದ ಚೆಂಡನ್ನು ರಾಬಿನ್ ಸಿಂಗ್ ಗೋಲು ಪೆಟ್ಟಿಗೆಯೊಳಗೆ ಸೇರಿಸುವ ಮೂಲಕ ತಂಡಗಳ ಅಂತರವನ್ನು ಸಮಬಲಗೊಳಿಸಿದರು. ಮತ್ತೆ ಅಬ್ಬರಿಸಿದ ರಾಯಲ್ ಆಟಗಾರರು 44ನೇ ನಿಮಿಷದಲ್ಲಿ ಎರಡನೇ ಗೋಲು ದಾಖಲಿಸುವ ಮೂಲಕ ಆತಿಥೇಯರ ಮೇಲೆ ಒತ್ತಡ ಹಾಕಿದರು.
ಈ ವೇಳೆ ಚುರುಕಿನ ಆಟ ಪ್ರದರ್ಶಿಸಿದ ಗುಡ್ ವಿನ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಈ ಮೂಲಕ ರಾಯಲ್ ತಂಡ ಮೊದಲ ಅವಧಿ ಮುಕ್ತಾಯಕ್ಕೆ 2-1 ಗೋಲುಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಎರಡನೇ ಅವ„ಯಲ್ಲಿ ಮಿಂಚಿನ ದಾಳಿ ನಡೆಸಿದ ಬಿಎಫ್ ಸಿ 56ನೇ ನಿಮಿಷದಲ್ಲಿ ಗೋಲಿನ ಅಂತರನ್ನು ಸಮಗೊಳಿಸಿದರು.
ಲಿಂಗ್ಡೊ ಅವರ ಫ್ರೀ ಕಿಕ್ ಅನ್ನು ಹೆಡ್ ಮಾಡಿದ ಶಂಕರ್ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ಆನಂತರ 70ನೇ ನಿಮಿಷದಲ್ಲಿ ಜೋಷ್ ವಾಲ್ಕರ್ ಗೋಲು ದಾಖಲಿಸಿ ಆತಿಥೇಯರು ಮುನ್ನಡೆ ಸಾಧಿಸಲು ಕಾರಣರಾದರು. ಆದರೆ 74ನೇ ನಿಮಿಷದಲ್ಲಿ ರೀಗನ್ ಗೋಲು ದಾಖಲಿಸಿ ತಂಡ ಸಮ ಅಂತರ ಕಾಯ್ದುಕೊಳ್ಳಲು ನೆರವಾದರು.
Advertisement