
ನವದೆಹಲಿ: ಬರೋಡಾದ ಪ್ರತಿಭೆ ದೀಪಕ್ ಹೂಡಾ ಅವರ ಅರ್ಧಶತಕದ ನೆರವಿನಿಂದಾಗಿ ರಾಜಸ್ಥಾನ ರಾಯಲ್ಸ್ ತಂಡ, ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಡೆಲ್ಲಿ ಡೇರ್‍ಡೆವಿಲ್ಸ್ ತಂಡದ ವಿರುದ್ಧ 3 ವಿಕೆಟ್‍ಗಳ ಜಯ ಸಾಧಿಸಿದೆ.
ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ 20 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ರಾಜಸ್ಥಾನ 20 ಓವರ್‍ಗಳಲ್ಲಿ 7 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿತು.
ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ತಂಡಕ್ಕಿದು ಸತತ ಎರಡನೇ ಗೆಲವು. ಶುಕ್ರವಾರ ನಡೆದಿದ್ದ ತನ್ನ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭರ್ಜರಿ 26 ರನ್‍ಗಳಿಂದ ಜಯ ಗಳಿಸಿತ್ತು. ಇನ್ನು, ಡೆಲ್ಲಿ ತಂಡದ ಬಗ್ಗೆ ಹೇಳುವುದಾದರೆ, ಈ ಪಂದ್ಯದಲ್ಲಿನ ಸೋಲು ಸೇರಿದಂತೆ ಡುಮಿನಿ ಪಡೆ ಸತತ ಎರಡನೇ ಪರಾಭವ ಕಂಡಿದೆ. ಗುರುವಾರ ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಕೇವಲ 1 ರನ್ ಅಂತರದಲ್ಲಿ ಡೆಲ್ಲಿ ಗೆಲವಿನಿಂದ ವಂಚಿತವಾಗಿತ್ತು.
ಇದೀಗ, ತವರಿನಲ್ಲೇ ಆಡಿದ ಮೊದಲ ಪಂದ್ಯದಲ್ಲಿ ಮತ್ತೆ ಸೋಲುವ ಮೂಲಕ ಭಾರೀ ಮುಖಭಂಗ ಅನುಭವಿಸಿದೆ. ಡೆಲ್ಲಿ ಸೋತ ಮಾತ್ರಕ್ಕೆ ಆ ತಂಡ ಉತ್ತಮವಾಗಿ ಆಡಲಿಲ್ಲ ಎಂದೇನಲ್ಲ. ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ತಂಡದ ನಾಯಕ ಸ್ಮಿತ್, ಎದುರಾಳಿಯನ್ನು ಮೊದಲು ಬ್ಯಾಟಿಂಗ್‍ಗೆ ಇಳಿಸಿದರು. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಡೆಲ್ಲಿ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಯಿತು. ಆರಂಭಿಕರಾದ ಮಾಯಾಂಕ್ ಅಗರ್ವಾಲ್, ಶ್ರೇಯಸ್ ಅಯ್ಯರ್, ನಾಯಕ ಡುಮಿನಿ, ಮಧ್ಯಮ ಕ್ರಮಾಂಕದ ಆ್ಯಂಜೆಲೊ ಮ್ಯಾಥ್ಯೂಸ್ ಅವರ ಆರ್ಭಟದ ಬ್ಯಾಟಿಂಗ್ ನೆರವಿನಿಂದ ತಂಡ 20 ಓವರ್‍ಗಳಲ್ಲಿ 184 ರನ್ ಮೊತ್ತವನ್ನು ಪೇರಿಸಿತ್ತು.
ಅರ್ಹ ಗೆಲವು: ಡೆಲ್ಲಿ ತಂಡ ನೀಡಿದ್ದ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ ತಂಡಕ್ಕೆ ಆರಂಬಿsಕ ಅಜಿಂಕ್ಯ ರಹಾನೆ ದೊಡ್ಡ ಕಾಣಿಕೆ ನೀಡಿದರು. ಮತ್ತೊಬ್ಬ ಆರಂಭಿಕ ಸಂಜು ಸ್ಯಾಮ್ಸನ್, ಅವರ ನಂತರ ಬಂದ ಸ್ಟೀವನ್ ಸ್ಮಿತ್, ಕರುಣ್ ನಾಯರ್ ಹಾಗೂ ಸ್ಟುವರ್ಟ್ ಬಿನ್ನಿಯವರ ವಿಕೆಟ್ ಬೇಗನೆ ಉರುಳಿದರೂ, ಗಟ್ಟಿಯಾಗಿ ನಿಂತು ಬ್ಯಾಟ್ ಬೀಸಿದ ರಹಾನೆ ಮತ್ತು ದೀಪಕ್ ಹೂಡಾ 5ನೇ ವಿಕೆಟ್‍ಗೆ 52 ರನ್‍ಗಳ ಜೊತೆಯಾಟ ನೀಡಿದರು. 16ನೇ ಓವರ್‍ನಲ್ಲಿ ರಹಾನೆ ನಿರ್ಗಮನದ ನಂತರ, ಇನಿಂಗ್ಸ್‍ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಾವೇ ಮೈಮೇಲೆ ಎಳೆದುಕೊಂಡಂತೆ ಆಡಿದ ಹೂಡಾ, ಅರ್ಧಶತಕ ಗಳಿಸಿ ಜಯವನ್ನು ತಮ್ಮ ಕಡೆಗೆ ಸೆಳೆದುಕೊಂಡರು. 19ನೇ ಓವರ್‍ನಲ್ಲಿ ಅವರು ವಿಕೆಟ್ ಚೆಲ್ಲಿದರೂ, ಅಂತಿಮ ಹಂತದಲ್ಲಿ ಜೊತೆಗೂಡಿದ ಕ್ರಿಸ್ ಮೋರಿಸ್, ಸೌಥೀ ಸಾಥ್ ತಂಡಕ್ಕೆ ಗೆಲವು ತಂದುಕೊಟ್ಟರು. ಡೆಲ್ಲಿ ಪರ ಉತ್ತಮವಾಗಿ ಬೌಲ್ ಮಾಡಿದ ಇರ್ಮಾನ್ ತಾಹಿರ್ 4 ವಿಕೆಟ್ ಗಳಿಸಿ ಗಮನ ಸೆಳೆದಿದ್ದು ವ್ಯರ್ಥವಾಯಿತು.
Advertisement