ಚಾಲೆಂಜರ್ಸ್ ಆಕ್ರಮಣಕ್ಕೆ ಡೆಲ್ಲಿ ಢಮಾರ್

ವೇಗಿಗಳಾದ ಮಿಚೆಲ್ ಸ್ಟಾರ್ಕ್ ಹಾಗೂ ವರುಣ್ ಅರುಣ್ ಅವರ ಆಕ್ರಮಣಕಾರಿ ದಾಳಿಯ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ...
ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು

ನವದೆಹಲಿ: ವೇಗಿಗಳಾದ ಮಿಚೆಲ್ ಸ್ಟಾರ್ಕ್ ಹಾಗೂ ವರುಣ್ ಅರುಣ್ ಅವರ ಆಕ್ರಮಣಕಾರಿ ದಾಳಿಯ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು 10 ವಿಕೆಟ್ ಗಳಿಂದ ಬಗ್ಗುಬಡಿಯಿತು.

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಡೆವಿಲ್ಸ್ 18.2 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 95 ರನ್ ಗಳಿಸಿತ್ತು. ಈ ಸುಲಭ ಮೊತ್ತವನ್ನು ಬೆನ್ನಟ್ಟಿದ ಬೆಂಗಳೂರು ತಂಡ, 10.3 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 99 ರನ್ ಗಳಿಸಿ, ಜಯದ ನಗೆ ಬೀರಿತು.

ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಡೆಲ್ಲಿ ತಂಡವನ್ನು  ಬ್ಯಾಟಿಂಗ್‍ಗೆ ಇಳಿಸಿದರು. ಈ ಹಿಂದಿನ ಎರಡು ಬಾರಿ ಚೇಸಿಂಗ್ ಆಯ್ಕೆ ಮಾಡಿಕೊಂಡು ಕೈಸುಟ್ಟುಕೊಂಡಿದ್ದ ಕೊಹ್ಲಿಗೆ ಈ ಬಾರಿ ಹಾಗಾಗಲಿಲ್ಲ. ಅವರ ನಿರ್ಧಾರ ಸರಿಯಾದ ಫಲವನ್ನೇ ನೀಡಿತು. ಅಲ್ಲದೆ ಮಿಚೆಲ್ ಸ್ಟಾರ್ಕ್ ತಂಡಕ್ಕೆ ವಾಪಸಾದ ಮೇಲೆ ತಂಡದ ಬೌಲಿಂಗ್ ಶಕ್ತಿ ಹೆಚ್ಚುತ್ತದೆ ಎಂದಿದ್ದ ಅವರ ಹೇಳಿಕೆ ಈ ಪಂದ್ಯದಲ್ಲಿ ಮತ್ತೊಮ್ಮೆ ಸಾಕಾರವಾಯಿತು.

ಕೊಹ್ಲಿ ನಿರ್ಧಾರದ ಹಿನ್ನೆಲೆಯಲ್ಲಿ ಮೊದಲು ಬ್ಯಾಟಿಂಗ್‍ಗೆ ಇಳಿದ ಡೆಲ್ಲಿ ತಂಡಕ್ಕೆ ಮಿಚೆಲ್ ಸ್ಟಾರ್ಕ್ ಆರಂಭಿಕ ಪೆಟ್ಟು ನೀಡಿದರು. ಆರಂಭಿಕ ಶ್ರೇಯಸ್ ಅಯ್ಯರ್ ಅವರನ್ನು ಡಕ್‍ಔಟ್ ಮಾಡಿ ಪೆವಿಲಿಯನ್ಗೆ ಅಟ್ಟಿದ ಅವರು, ಬೆಂಗಳೂರು ಪಾಳಯದಲ್ಲಿ ಮೊದಲ ವಿಕೆಟ್ ನಗು ಚೆಲ್ಲಿದರು. ಇದಾದ ಮೇಲೆ, ದಾಳಿಗಿಳಿದ ಡೇವಿಡ್ ವೈಸ್, ಶ್ರೇಯಸ್ ನಂತರ ಕಣಕ್ಕಿಳಿದು ಅಪಾಯಕಾರಿಯಾಗಿದ್ದ ನಾಯಕ ಡುಮಿನಿ ಅವರ ವಿಕೆಟನ್ನು ಬೇಗನೇ ಪಡೆದರು.

ಆರಂಭಿಕ ಮಯಾಂಕ್ ಅಗರ್ವಾಲ್ ಹಾಗೂ ಡುಮಿನಿ ಅಷ್ಟರಲ್ಲಾಗಲೇ 2ನೇ ವಿಕೆಟ್ ಗೆ 34 ರನ್ ಸೇರಿಸಿದ್ದರು. ಡುಮಿನಿ ನಿರ್ಗಮನದ ನಂತರ, ವೇಗಿ ವರುಣ್ ಅರುಣ್ ಮಾಡಿದ 6ನೇ ಓವರ್‍ನಲ್ಲಿ ಡೆಲ್ಲಿ ತಂಡದ 2 ವಿಕೆಟ್ ಉರುಳಿದವು. ಡುಮಿನಿ ನಂತರ ಬಂದಿದ್ದ ಯುವರಾಜ್ ಸಿಂಗ್ ಹಾಗೂ ಅವರ ನಂತರ ಬಂದ ಮ್ಯಾಥ್ಯೂಸ್ ಇಬ್ಬರೂ ಬಲಿಯಾದರು.

ಈ ಹಂತದಲ್ಲಿ, ಆರಂಭಿಕ ಮಾಯಾಂಕ್ ಅಗರ್ವಾಲ್ ಗೆ ಜೊತೆಯಾದ ಕೇದಾರ್ ಜಾಧವ್ 5ನೇ ವಿಕೆಟ್ ಗೆ 28 ರನ್ ಸೇರಿದರು. ಆದರೆ, ಇಕ್ಬಾಲ್ ಅವರು ಅಗರ್ವಾಲ್ ವಿಕೆಟ್ ಪಡೆಯುವ ಮೂಲಕ ಈ ಜೋಡಿಯನ್ನು ಮುರಿದರು. ಆಗ, ಕ್ರೀಸ್‍ಗೆ ಬಂದಿದ್ದು ಕಾಲ್ಟರ್ ನೀಲ್. ಆದರೆ, ವೈಯಕ್ತಿಕವಾಗಿ 4 ರನ್ ಗಳಿಸಿದ ವೈಸ್ ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು.

ಆಗ, ಕ್ರೀಸ್‍ಗೆ ಕಾಲಿಟ್ಟಿದ್ದು ಅಮಿತ್ ಮಿಶ್ರಾ. ಆದರೆ, ಅವರೂ ಕ್ರೀಸ್‍ನಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ.
ಮಿಂಚಿನ ದಾಳಿ ನಡೆಸಿದ ಸ್ಟಾರ್ಕ್, ಮಿಶ್ರಾ ಹಾಗೂ ಅವರ ನಂತರ ಬಂದಿದ್ದ ನದೀಮ್ ಅವರನ್ನು ತಾವು ಕ್ರಮವಾಗಿ ಮಾಡಿದ ಇನಿಂಗ್ಸ್‍ನ 15ನೇ ಹಾಗೂ 17ನೇ ಓವರ್‍ನಲ್ಲಿ ಬಲಿಪಡೆದರು.

ಮಧ್ಯಮ ಕ್ರಮಾಂಕದಲ್ಲಿನ ಎಲ್ಲಾ ಬ್ಯಾಟ್ಸ್ ಮನ್ ಗಳು ಕೈಕೊಟ್ಟರೂ ಧೀರೋದಾತ್ತ ಆಟ ಪ್ರದರ್ಶಿಸಿ, ವೈಯಕ್ತಿಕವಾಗಿ 33 ರನ್ ಗಳಿಸಿದ್ದ ಕೇದಾರ್ ಜಾಧವ್ ಇನಿಂಗ್ಸ್‍ನ 18ನೇ ಓವರ್‍ನಲ್ಲಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಡೆಲ್ಲಿ ತಂಡದ ಕೊನೆಯ ಆಶಾಕಿರಣವೂ
ಬತ್ತಿ ಹೋಯಿತು. ಇನ್ನು, ಕೊನೆಯ ವಿಕೆಟ್‍ಗೆ ಜತೆಯಾದ ಮುತ್ತುಸ್ವಾಮಿ ಹಾಗೂ ಇಮ್ರಾನ್ ತಾಹಿರ್ ಕೇವಲ 3 ರನ್ ಸೇರಿಸಿತಷ್ಟೇ. 19ನೇ ಓವರ್ ನಲ್ಲಿ ಮುತ್ತುಸ್ವಾಮಿ ರನೌಟ್ ಆಗುವುದರೊಂದಿಗೆ ಡೆಲ್ಲಿ ಇನಿಂಗ್ಸ್ 95 ರನ್ಗಳಿಗೆ ಅಂತ್ಯಗೊಂಡಿತು.

ಸುಲಭ ಜಯ: ಡೆಲ್ಲಿ ತಂಡದ ಸುಲಭ ಸಾಧ್ಯ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್
ತಂಡ, ತಮ್ಮ ಅಭಿಮಾನಿಗಳು ನಿರೀಕ್ಷಿಸುವ ನಿಟ್ಟಿನಲ್ಲೇ ಗೆಲವಿನತ್ತ ಹೆಜ್ಜೆಯಿಟ್ಟಿತು. ಇನಿಂಗ್ಸ್ ಆರಂಭಿಸಿದ ಕ್ರಿಸ್ ಗೇಯ್ಲ್ ಹಾಗೂ ವಿರಾಟ್ ಕೊಹ್ಲಿ ಕೊನೆಯವರೆಗೂ ವಿಕೆಟ್ ಚೆಲ್ಲದೇ ಉತ್ತಮ ಜತೆಯಾಟವಾಡಿ ರಂಜಿಸಿದರು. ಅದರಲ್ಲೂ ಸ್ಫೋಟಕ ಬ್ಯಾಟಿಂಗ್‍ಗೆ ಹೆಸರುವಾಸಿಯಾಗಿರುವ ಗೇಯ್ಲ್ ಅವರು ತಮ್ಮ ಎಂದಿನ ಫಾರ್ಮ್ ಗೆ ಮರಳಿದ್ದು ಅಭಿಮಾನಿಗಳಿಗೆ ಖುಷಿಕೊಟ್ಟಿತು. ಆರು ಬೌಂಡರಿ, 4 ಸಿಕ್ಸರ್  ಸಿಡಿಸಿ ಅಜೇಯ 62
ರನ್ ಗಳಿಸಿ ಮಿಂಚಿದರು.

4ನೇ ಸ್ಥಾನ: ಈ ಗೆಲವಿನೊಂದಿಗೆ, ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ವಿಕೆಟ್ ನಷ್ಟವಿಲ್ಲದೆ ಚೇಸ್ ಮಾಡಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಬೆಂಗಳೂರು ತಂಡ ಪಾತ್ರವಾಯಿತು. ಅಲ್ಲದೆ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ಆದರೆ, 4 ಓವರ್ ಮಾಡಿ 20 ರನ್ ನೀಡಿ 3 ವಿಕೆಟ್ ಕಬಳಿಸಿದ ಸ್ಟಾರ್ಕ್‍ಗೆ ಪಂದ್ಯಶ್ರೇಷ್ಠ ಗೌರವ ಕೊಡದೇ 4 ಓವರ್ ಮಾಡಿ 24 ರನ್ ನೀಡಿ 2 ವಿಕೆಟ್ ಪಡೆದ ವರುಣ್ ಅರುಣ್ ಅವರಿಗೆ ಪಂದ್ಯಶ್ರೇಷ್ಠ ಗೌರವ ನೀಡಿದ್ದು ಬಹುತೇಕರ ಅಚ್ಚರಿಗೆ ಕಾರಣವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com