
ಮುಂಬೈ: ವಾಂಖೆಡೆ ಕ್ರೀಡಾಂಗಣ ಪ್ರವೇಶಿಸದಂತೆ ನಟ ಶಾರೂಕ್ ಖಾನ್ ಗೆ ವಿಧಿಸಿದ್ದ ನಿಷೇಧವನ್ನು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ವಾಪಸ್ ಪಡೆದಿದೆ.
ಆಡಳಿತ ಮಂಡಳಿ ಸಭೆ ವೇಳೆ ಕೈಗೊಳ್ಳಲಾಗಿರುವ ಈ ನಿರ್ಧಾರವನ್ನು ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ) ಪತಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದೆ. ಶಾರುಕ್ ಖಾನ್ ಗೆ ವಿಧಿಸಿದ್ದ ನಿಷೇಧವನ್ನು ಹಿಂಪಡೆಯುವ ನಿರ್ಧಾರಕ್ಕೆ ಎಂಸಿಎ ಅಧ್ಯಕ್ಷ ಶರದ್ ಪವಾರ್ ಸಮ್ಮತಿಸಿದ್ದಾರೆ ಎಂದು ಎಂಸಿಎ ಉಪಾಧ್ಯಕ್ಷ ಆಶಿಶ್ ಶಿಲಾರ್ ತಿಳಿಸಿದ್ದಾರೆ.
ಅಗತ್ಯವಿದ್ದಾಗ ಶಾರುಕ್ ಖಾನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ, ಅದನ್ನು ಮುಂದುವರೆಸುವುದು ಸೂಕ್ತ ಅಲ್ಲ ಎಂಬ ನಿರ್ಧಾರ ಆಡಳಿತ ಮಂಡಳಿ ಸಭೆಯಲ್ಲಿ ವ್ಯಕ್ತವಾದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ತಿಳಿಸಿದೆ. ಮೂಲಗಳ ಪ್ರಕಾರ ನಿಷೇಧವನ್ನು ಹಿಂಪಡೆಯುವಂತೆ ಶಾರುಕ್ ಖಾನ್ ಶರದ್ ಪವಾರ್ ಗೆ ಮನವಿ ಮಾಡಿದ್ದರು ಎಂದು ಹೇಳಲಾಗಿದೆ.
ಮುಂಬೈ ನ ವಾಂಖೆಡೆ ಕ್ರೀಡಾಂಗಣದಲ್ಲಿ ಅನುಚಿತವಾಗಿ ನಡೆದುಕೊಂಡಿದ್ದಕ್ಕೆ 2012 ರಲ್ಲಿ ಶಾರುಕ್ ಖಾನ್ ಗೆ ನಿಷೇಧ ವಿಧಿಸಲಾಗಿತ್ತು. ಐಪಿಎಲ್ ತಂಡ ಕೊಲ್ಕತಾ ನೈಟ್ ರೈಡರ್ಸ್ ನ ಸಹ ಮಾಲಿಕರಾಗಿದ್ದ ಶಾರುಕ್ ಖಾನ್ ಪಂದ್ಯಾವಳಿ ನಡೆಯುತ್ತಿರಬೇಕಾದರೆ ವಾಂಖೆಡೆ ಕ್ರೀಡಾಂಗಣದಲ್ಲಿ ದುರ್ವರ್ತನೆ ತೋರಿದ್ದರು.
Advertisement