ಫ್ರಾನ್ಸ್ ತಂಡವನ್ನು ಲಘುವಾಗಿ ನೋಡಲ್ಲ

ಇತ್ತೀಚೆಗೆ ತಂಡದ ಕೋಚ್ ಬದಲಾವಣೆಯ ವಿಚಾರದಲ್ಲಿ ಹೆಚ್ಚು ವಿವಾದಕ್ಕೆ ಗುರಿಯಾಗಿದ್ದ, ಭಾರತೀಯ ಹಾಕಿ ಕ್ರೀಡೆ ಈಗ ಮತ್ತೆ ಆಟದತ್ತ ಗಮನ ಹರಿಸಲು...
ರೋಲಂಟ್ ಓಲ್ಟ್‍ಮನ್ಸ್
ರೋಲಂಟ್ ಓಲ್ಟ್‍ಮನ್ಸ್

ಲೆ ಟೌಕೆಟ್ (ಫ್ರಾನ್ಸ್): ಇತ್ತೀಚೆಗೆ ತಂಡದ ಕೋಚ್ ಬದಲಾವಣೆಯ ವಿಚಾರದಲ್ಲಿ ಹೆಚ್ಚು ವಿವಾದಕ್ಕೆ ಗುರಿಯಾಗಿದ್ದ, ಭಾರತೀಯ ಹಾಕಿ ಕ್ರೀಡೆ ಈಗ ಮತ್ತೆ ಆಟದತ್ತ ಗಮನ ಹರಿಸಲು ಸಜ್ಜಾಗಿದೆ. ಭಾರತ ತಂಡ ಯುರೋಪ್ ಪ್ರವಾಸದಲ್ಲಿದ್ದು, ಈ ವೇಳೆ ಎದುರಾಳಿ ಫ್ರಾನ್ಸ್ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ನೂತನ ಕೋಚ್ ರೋಲಂಟ್ ಓಲ್ಟ್‍ಮನ್ಸ್ ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ನಾಲ್ವರು ವಿದೇಶಿ ಕೋಚ್‍ಗಳನ್ನು ಕಂಡಿರುವ ಭಾರತೀಯ ಆಟಗಾರರು ಫ್ರಾನ್ಸ್  ವಿರುದ್ಧ ಎರಡು ಪಂದ್ಯಗಳನ್ನಾಡಲಿದ್ದು, ನಂತರ ಸ್ಪೇನ್‍ಗೆ ತೇರಳಲಿದ್ದಾರೆ. ಪಾಲ್ ವಾನ್ ಆ್ಯಸ್ ಅವರ ನ್ನು ವಜಾಗೊಳಿಸಿದ ನಂತರ ಮತ್ತೆ ತಂಡದ ಕೋಚ್ ಸ್ಥಾನವನ್ನು ಅಲಂಕರಿಸಿರುವ ರೋಲಂಟ್ ಓಲ್ಟ್‍ಮನ್ಸ್‍ಗೆ ಈ ಪ್ರವಾಸ ಅಗ್ನಿ ಪರೀಕ್ಷೆಯಾಗಿ ಪರಿಣಮಿಸಿದೆ. ಕಾರಣ ಇದೇ ವರ್ಷಾಂತ್ಯದಲ್ಲಿ ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿ ಭಾರತದಲ್ಲೇ ನಡೆಯಲಿರುವ ಹಿನ್ನೆಲೆಯಲ್ಲಿ ಈ ಪ್ರವಾಸ ಭಾರತ ತಂಡಕ್ಕೆ ಪೂರ್ವ ತಯಾರಿ ನಡೆಸಲು ಉತ್ತಮ ವೇದಿ ಕೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ತಂಡದ ಹೊಂದಾಣಿಕೆಗೆ ಅವಕಾಶ: ಪ್ರತಿ ಬಾರಿ ತಂಡದ ಕೋಚ್ ಬದಲಾದಾಗಲೂ ಆಟಗಾರರು ಒಂದು ತಂಡವಾಗಿ ಆಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಕಾರಣ ಪ್ರತಿ ಕೋಚ್ ತನ್ನದೇ ಆದ, ತಾಂತ್ರಿಕತೆ, ಸಿದ್ಧತಾ ಶೈಲಿ, ತಂಡವನ್ನು ಪಳಗಿಸುವ ವಿಭಿನ್ನ ವ್ಯವಸ್ಥೆ ಹೊಂದಿರುತ್ತಾನೆ. ಹಾಗಾಗಿ ಕೋಚ್ ಬದಲಾದಾಗ ತಂಡದ ವಾತಾವರಣವೂ ಬದಲಾಗುತ್ತದೆ. ಈ ವಾತಾವರಣಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಈ ಪ್ರವಾಸ ಓಲ್ಟ್‍ಮನ್ಸ್‍ಗೆ ಹಾಗೂ ಆಟಗಾರರಿಗೆ ಸವಾಲಾಗಿದೆ.
ಪಂದ್ಯದ ಕುರಿತು ಮಾತನಾಡಿರುವ ರೋಲಂಟ್ ಓಲ್ಟ್‍ಮನ್ಸ್, ನಮ್ಮ ತಂಡ ಇತ್ತೀಚಿನ ದಿನಗಳಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿದೆಯಾದರೂ, ಎದುರಾಳಿಯನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಆ ತಂಡ ಯೂರೋಹಾಕಿ ಚಾಂಪಿಯನ್‍ಶಿಪ್‍ಗೆ ಸಿದ್ಧತೆ ನಡೆಸುತ್ತಿದೆ. ಹಾಗಾಗಿ ಈ ಸರಣಿ ಎದುರಾಳಿ ತಂಡಕ್ಕೆ ಬಹಳ ಪ್ರಮುಖವಾಗಿದೆ. ಪ್ರತಿಷ್ಠಿತ ಟೂರ್ನಿ ಆರಂಭವಾಗುವ ಮೊದಲು ಸಿಗುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲು ಎದುರಾಳಿ ತಂಡ ಕಾದು ಕುಳಿತಿರುತ್ತದೆ ಎಂದು ಓಲ್ಟ್‍ಮನ್ಸ್ ತಿಳಿಸಿದ್ದಾರೆ.ಭಾರತ ತಂಡದ ಆಟಗಾರರು ಉತ್ತಮ ಸಿದ್ಧತೆ ನಡೆಸಿದ್ದಾರೆ. ಎದುರಾಳಿ ತಂಡಕ್ಕೆ ಹೋರಾಟ ನೀಡುವ ತಂತ್ರಗಾರಿಕೆ ಸಿದ್ಧವಾಗಿದೆ. ಈ ಪ್ರವಾಸದಲ್ಲಿ ನಮ್ಮ ತಂತ್ರಗಾರಿಕೆ ಹಾಗೂ ಆಟಗಾರರ ಸಾಮರ್ಥ್ಯವನ್ನು ಚೆನ್ನಾಗಿ ಅರಿಯಲು ನೆರವಾಗಲಿದೆ ಎಂದರು.
ಭಾನುವಾರ ಅಭ್ಯಸದ ನಂತರ ಮಾತನಾಡಿದ ಭಾರತ ತಂಡದ ನಾಯಕ ಸರ್ದಾರ್ ಸಿಂಗ್, ಬೆಲ್ಜಿಯಂನಲ್ಲಿ ನಡೆದ ಕಳೆದ ಪಂದ್ಯದಲ್ಲಿ ವೇಗದ ಆಟ ಹಾಗೂ ಆರಂಭಿಕ ಗೋಲುಗಳಿಂದ ಎದುರಾಳಿ ತಂಡ ನಮ್ಮನ್ನು ಮಣಿಸಿತ್ತು. ಈ ಬಾರಿ ಅವರಿಗೆ ಅವಕಾಶ ನೀಡುವುದಿಲ್ಲ. ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲೆತ್ನಿಸುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com