
ಮಾಂಟ್ರಿಯಲ್: ಭಾರತದ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಹಾಗೂ ರೊಮೇನಿಯಾದ ಫ್ಲೋರಿನ್ ಮರ್ಜಿಯಾ ಜೋಡಿಯು, ಕೆನಡಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದೆ.
ಯುನಿಪ್ರಿಕ್ಸ್ ಕ್ರೀಡಾಂಗಣದ ಹಾರ್ಡ್ ಕೋರ್ಟ್‍ನಲ್ಲಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಬೋಪಣ್ಣ ಜೋಡಿ, ಸರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ಜ್ಯಾಂಕೊ ತಿಪ್ಸರ್‍ವಿಚ್ ಜೋಡಿ ವಿರುದ್ಧ 3-6, 7-5, 3-10 ಸೆಟ್‍ಗಳ ಅಂತರದಲ್ಲಿ ಪರಾಭವಗೊಂಡಿತು.
ಒಂದು ಗಂಟೆ 27 ನಿಮಿಷಗಳ ಪಂದ್ಯದಲ್ಲಿ ಸರ್ಬಿಯಾ ಜೋಡಿಯ ಆಕ್ರಮಣಕಾರಿ ಆಟವನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದ ಬೋಪಣ್ಣ ಹಾಗೂ ಫ್ಲೋರಿನ್, ಮುಖಭಂಗ ಅನುಭವಿಸಿದರು.
ಪಂದ್ಯದ ಆರಂಭಿಕ ಸೆಟ್‍ನಲ್ಲಿ 3-6ರ ಹಿನ್ನಡೆ ಅನುಭವಿಸಿದ್ದ ಬೋಪಣ್ಣ, ನಂತರ ಎರಡನೇ ಸೆಟ್‍ನಲ್ಲಿ ಹೋರಾಟಕಾರಿ ಪ್ರದರ್ಶನದಿಂದ 7-5 ಮುನ್ನಡೆಯೊಂದಿಗೆ ಪಂದ್ಯದಲ್ಲಿ ಸಮಬಲ ಸಾಧಿಸಿತ್ತು. ಆದರೆ, ಮೂರನೇ ಸೆಟ್‍ನಲ್ಲಿ ಮತ್ತೆ ವೈಫಲ್ಯ ಕಂಡ ಬೋಪಣ್ಣ ಜೋಡಿ ಟೂರ್ನಿಯಿಂದ ಹೊರಬಿತ್ತು.
Advertisement