
ಗಾಲೆ: ಭಾರತದ ಏಕಪಕ್ಷೀಯ ಪ್ರದರ್ಶನದಿಂದ ದಿಕ್ಕೆಟ್ಟು ಹೋಗಿ ಕಂಗಾಲಾಗಿದ್ದ ಸಿಂಹಳೀಯರ ಮೊಗದಲ್ಲಿ ಮನೆಮಾಡಿದ್ದು ದುಗುಡ ಬಿಟ್ಟು ಬೇರೇನಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‍ಕೀಪರ್ ದಿನೇಶ್ ಚಂಡಿಮಾಲ್ (162: 169 ಎಸೆತ, 19 ಬೌಂಡರಿ, 4 ಸಿಕ್ಸರ್) ಅವರ ಅಜೇಯ ಶತಕ ಪ್ರವಾಸಿ ಭಾರತ ಮತ್ತು ಆತಿಥೇಯ ಲಂಕಾ ನಡುವಣದ ಮೊದಲ ಟೆಸ್ಟ್ ಪಂದ್ಯವನ್ನು ಕೌತುಕದತ್ತ ಸಾಗಿಸಿದೆ.
ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಪ್ರಭುತ್ವ ಸಾಧಿಸಿ ಇನ್ನಿಂಗ್ಸ್ ಗೆಲುವನ್ನು ಎದುರುನೋಡುತ್ತಿದ್ದ ಟೀಂ ಇಂಡಿಯಾಗೆ ಪಂದ್ಯದ ಮೂರನೇ ದಿನವಾದ ಶುಕ್ರವಾರದಂದು ದಿಗ್ಭ್ರಮೆ ಹಿಡಿಸಿದ್ದು ದಿನೇಶ್ ಅವರ ಸೊಗಸಾದ ಬ್ಯಾಟಿಂಗ್. ಅವರ ಕೆಚ್ಚೆದೆಯ ಹೋರಾಟದ ಫಲವಾಗಿ ಎರಡನೇ ಇನ್ನಿಂಗ್ಸ್‍ನಲ್ಲಿ 82.2 ಓವರ್‍ಗಳಲ್ಲಿ 367 ರನ್ ಗಳಿಗೆ ಆಲೌಟ್ ಆದ ಲಂಕಾ, ಭಾರತದ ಗೆಲುವಿಗೆ 176 ರನ್ ಜಯದ ಗುರಿ ನೀಡಿದ್ದು, ಕೊಹ್ಲಿ ಪಡೆ ಗೆಲುವಿಗಾಗಿ ಸಜ್ಜಾಗಿದೆ. ಇದಕ್ಕೆ ಉತ್ತರವಾಗಿ ಭಾರತ 8 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 23 ರನ್ ಮಾಡಿದೆ.
ಆರಂಭಿಕ ಕೆ.ಎಲ್. ರಾಹುಲ್ (5) ರಂಗನಾ ಹೆರಾತ್ ಬೌಲಿಂಗ್‍ನಲ್ಲಿ ಎಲ್‍ಬಿ ಬಲೆಗೆ ಬಿದ್ದು ಕ್ರೀಸ್ ತೊರೆದು ಮತ್ತೆ ನಿರಾಸೆ ಅನುಭವಿಸಿದರು. ದಿನದಾಟ ನಿಂತಾಗ ಶಿಖರ್ ಧವನ್ ಮತ್ತು ಇಶಾಂತ್ ಶರ್ಮಾ ಕ್ರಮವಾಗಿ 13 ಮತ್ತು 5 ರನ್ ಗಳಿಸಿ ಕ್ರೀಸ್‍ನಲ್ಲಿದ್ದರು. ದಿಲ್ ಗೆದ್ದ ದಿನೇಶ್ ಇನ್ನು ಪಂದ್ಯದ ಎರಡನೇ ದಿನದಂದು ಕೇವಲ 5 ರನ್‍ಗೆ 2 ವಿಕೆಟ್ ಕಳೆದುಕೊಂಡು ಚಡಪಡಿಸಿದ್ದ ಲಂಕಾ, ಮೂರನೇ ದಿನದಾಟವನ್ನು ಅತ್ಯಂತ ಎಚ್ಚರಿಕೆಯಿಂದಲೇ ಎದುರಿಸಲು ಮುಂದಾದರೂ, ಮೊದಲ ಎಸೆತದಲ್ಲೇ ರಾತ್ರಿ ಕಾವಲುಗಾರ ಧಮ್ಮಿಕಾ ಪ್ರಸಾದ್ ವಿಕೆಟ್ ಬಿದ್ದಾಗ ಪರಿತಪಿಸಿತು.
ವೇಗಿ ಏರಾನ್ ಬೌಲಿಂಗ್‍ನಲ್ಲಿ ರಹಾನೆಗೆ ಕ್ಯಾಚಿತ್ತು ಪ್ರಸಾದ್ ಕ್ರೀಸ್ ತೊರೆದರು. ಬಳಿಕ ಬಂದ ನಾಯಕ ಮ್ಯಾಥ್ಯೂಸ್ (39) ಜತೆಗೂಡಿದ ಸಂಗಕ್ಕಾರ ಜೋಡಿ 4ನೇ ವಿಕೆಟ್‍ಗೆ ಅಮೂಲ್ಯ 87 ರನ್ ಸೇರಿಸಿ ಪರಿಸ್ಥಿತಿ ಸುಧಾರಿಸಿತು. ಆದರೆ ಈ ಜೋಡಿಯನ್ನು ಅಶ್ವಿನ್ ಬೇರ್ಪಡಿಸಿ ಮತ್ತೆ ಭಾರತದ ಕೈ ಮೇಲಾಗಿಸಿದರು. ತದನಂತರ ಕ್ರೀಸ್ ಗಿಳಿದ ಲಂಕನ್ನರ ಪೈಕಿ ದಿನೇಶ್ ಚಂಡಿಮಾಲ್ ಆಟ ನೋಡುಗರಿಗೆ ಹಬ್ಬವಾಯಿತು. ಅವರಿಗೆ ಲಹಿರು ತಿರಿಮಾನೆ (44) ಮತ್ತು ಜೀಸನ್ ಮುಬಾರಕ್ (49) ಒಂದಷ್ಟು ಸಾಥ್ ನೀಡಿ ಕೈಚೆಲ್ಲಿದರೂ, ಕೊನೇ ಕ್ಷಣದವರೆಗೂ ಹೆಬ್ಬಂಡೆಯಂತೆ ನಿಂತ ಚಂಡಿಮಾಲ್ ಇನ್ನಿಂಗ್ಸ್‍ಗೆ ಬ್ರೇಕ್ ಬೀಳುತ್ತಿದ್ದಂತೆ ಪ್ರತಿಯೊಬ್ಬರಿಂದಲೂ ಶ್ಲಾಫಿಸಲ್ಪಟ್ಟದ್ದು ದಿನದ ಹೈಲೈಟ್ ಎನಿಸಿಕೊಂಡಿತು.
ರಹಾನೆ ವಿಶ್ವದಾಖಲೆ
ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಚುರುಕಿನ ಕ್ಷೇತ್ರರಕ್ಷಕನೆಂದೇ ಕರೆಸಿಕೊಳ್ಳುವ ಅಜಿಂಕ್ಯ ರಹಾನೆ 8 ಕ್ಯಾಚ್‍ಗಳನ್ನು ಹಿಡಿದು ವಿಶ್ವದಾಖಲೆ ಬರೆದಿದ್ದಾರೆ.
ವಿಕೆಟ್ ಕೀಪರ್ ಅಲ್ಲದ ಕ್ರಿಕೆಟಿಗನಿಂದ ಈ ಚರಿತ್ರಾರ್ಹ ದಾಖಲೆ ನಿರ್ಮಿತವಾಗಿದೆ. ಈ ಹಿಂದೆ ಟೆಸ್ಟ್ ಪಂದ್ಯವೊಂದರಲ್ಲಿ ಅತಿಹೆಚ್ಚು ಕ್ಯಾಚ್ ಗಳನ್ನು ಹಿಡಿದವರ ದಾಖಲೆ ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್ (7), ಯುಜುವೇಂದರ್ ಸಿಂಗ್ (7) ಹಷನ್ ತಿಲಕರತ್ನೆ (7) ಅವರ ಹೆಸರಲ್ಲಿತ್ತು.
Advertisement