
ಚೆನ್ನೈ: ಪ್ರಬಲ ಆಸ್ಟ್ರೇಲಿಯಾ `ಎ' ತಂಡದ ವಿರುದ್ಧ ಪರಿಣಾಮಕಾರಿ ಆಲ್ರೌಂಡ್ ಆಟ ಪ್ರದರ್ಶಿಸಿದ ಗುರ್‍ಕೀರತ್ ಸಿಂಗ್ ಮಾನ್ (2 ವಿಕೆಟ್, ಅಜೇಯ 87 ರನ್), ಎ ತಂಡಗಳ ತ್ರಿಕೋನ ಏಕದಿನ ಸರಣಿ ಯಲ್ಲಿ ಭಾರತ ಚಾಂಪಿಯನ್ ಆಗಲು ನೆರವಾದರು. ಇದರೊಂದಿಗೆ ಯುವ ಪಡೆಯ ಕೋಚ್ ಜವಾಬ್ದಾರಿ ಹೊತ್ತ ಕರ್ನಾಟಕದ ರಾಹುಲ್ ದ್ರಾವಿಡ್ ಅವರಿಗೆ ಮೊದಲ ಯಶಸ್ಸು ದೊರೆತಂತಾಗಿದೆ.
ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ ಗಳಿಂದ ಆಸ್ಟ್ರೇಲಿಯಾ ವಿರುದ್ಧ ಜಯಿಸಿತು. 229 ರನ್ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ, 43.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಮುಟ್ಟಿತು.
ಗುರ್‍ಕೀರತ್ ಆಸರೆ: ಸಾಧಾರಣ ಗುರಿ ಬೆನ್ನಟ್ಟಿದ ಭಾರತ ಆರಂಭಿಕರಾದ ಮಾಯಾಂಕ್ ಅಗರ್ ವಾಲ್ (32)ಮತ್ತು ಉನ್ಮುಕ್ತ್ ಚಾಂದ್ (24) ಅವರ 59 ರನ್ ಗಳ ಉತ್ತಮ ಆರಂಭದ ನಂತರ ದಿಢೀರ್ ಕುಸಿತ ಕಂಡಿತು. ಎಲ್ಲಕ್ಕಿಂತ ಮಿಗಿಲಾಗಿ ಮನೀಷ್ (9), ಕರುಣ್ (0), ಕೇದಾರ್ (29), ಅಕ್ಷರ್ (16) ನಿರಂತರವಾಗಿ ವಿಕೆಟ್ ಒಪ್ಪಿಸಿದಾಗ ಭಾರತದ ಪಾಳೆಯದಲ್ಲಿ ದುಗುಡ ಕಾಣಿಸಿಕೊಂಡಿತು. ಆದರೆ ಗುರ್ ಕೀರತ್, 85 ಎಸೆತಗಳಲ್ಲಿ 7 ಬೌಂಡರಿ 2 ಸಿಕ್ಸರ್ ನೆರವಿನಿಂದ ಅಜೇಯ ಆಟವಾಡಿದರಲ್ಲದೆ, ಸಂಜು ಸ್ಯಾಮ್ಸನ್ (24) ಜತೆಗೂಡಿ 7ನೇ ವಿಕೆಟ್ ಗೆ ಮುರಿಯದ 87 ರನ್ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಕಂಗೆಟ್ಟ ಕಾಂಗರೂ: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಅಜೇಯ ಯಾತ್ರೆಯೊಂದಿಗೆ ಟೂರ್ನಿಗೆ ವಿದಾಯ ಆರಂಭಿಕರಾದ ಉಸ್ಮಾನ್ ಖವಾಜ (76) ಹಾಗೂ ಬರ್ನ್ಸ್ (41) ಅವರ 82 ರನ್‍ಗಳ ಭದ್ರ ಅಡಿಪಾಯದ ಹೊರತಾಗಿಯೂ ತಂಡ ಅಲ್ಪ ಮೊತ್ತಕ್ಕೆ ಕುಸಿಯಲು ಭಾರತ ತಂಡದ ಬೌಲರ್ ಗಳ ಪ್ರಭಾವಿ ದಾಳಿ ಪ್ರಮುಖ ಕಾರಣವಾಯಿತು. ನಂತರ ಬಂದವರಲ್ಲಿ ಫರ್ಗ್ಯೂಸನ್ (21), ಟ್ರಾವಿಸ್ ಹೆಡ್ 20 ರನ್ ಗಳಿಸಿದ್ದೇ ಗರಿಷ್ಠವೆನಿಸಿತು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾಎ 50 ಓವರ್ ಗಳಲ್ಲಿ 9 ವಿಕೆಟ್‍ಗೆ 226 (ಖವಾಜಾ 76, ಬರ್ನ್ಸ್ 41, ಕರಣ್ 37ಕ್ಕೆ 3, ಅಕ್ಷರ್ 25ಕ್ಕೆ 2) ಭಾರತ ಎ 43.3 ಓವರ್‍ಗಳಲ್ಲಿ 6 ವಿಕೆಟ್‍ಗೆ 229 (ಗುರ್ ಕೀರತ್ ಅಜೇಯ 87, ಮಾಯಾಂಕ್ 32, ಅಗರ್ 39ಕ್ಕೆ2, ಸಂಧು 38ಕ್ಕೆ1) ಪಂದ್ಯ ಶ್ರೇಷ್ಠ: ಗುರ್ ಕೀರತ್ ಸಿಂಗ್, ಸರಣಿಶ್ರೇಷ್ಠ: ಮಾಯಾಂಕ್.
Advertisement