ಡೋಪಿಂಗ್ ವರದಿ ತಡೆದ ಐಎಎಎಫ್?

ಜಗತ್ತಿನ ಕ್ರೀಡಾಲೋಕವನ್ನು ತನ್ನ ಕಬಂಧಬಾಹುಗಳಲ್ಲಿ ಹಿಡಿದಿಟ್ಟಿರುವ ಡೋಪಿಂಗ್ ಭೂತದ ಬಗ್ಗೆ 2011ರಲ್ಲಿ ತಯಾರಿಸಲಾದ ಸಮೀಕ್ಷೆ ವರದಿಯೊಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಜಗತ್ತಿನ ಕ್ರೀಡಾಲೋಕವನ್ನು ತನ್ನ ಕಬಂಧಬಾಹುಗಳಲ್ಲಿ ಹಿಡಿದಿಟ್ಟಿರುವ ಡೋಪಿಂಗ್ ಭೂತದ ಬಗ್ಗೆ 2011ರಲ್ಲಿ ತಯಾರಿಸಲಾದ ಸಮೀಕ್ಷೆ ವರದಿಯೊಂದು ಪ್ರಕಟಗೊಳ್ಳದಂತೆ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆ (ಐಎಎಎಫ್) ಪಕ್ಷಪಾತ ತೋರಿತ್ತು ಎಂದು ಬ್ರಿಟನ್‍ನ `ಸಂಡೇ ಟೈಮ್ಸ್ ' ಹಾಗೂ ಜರ್ಮನಿಯ `ಎಆರ್‍ಡಿ/ಡಬ್ಲ್ಯೂಡಿಆರ್' ಟಿವಿ ವಾಹಿನಿ ಆರೋಪಿಸಿವೆ.

ಮಾಧ್ಯಮಗಳು ಹೇಳೋದೇನು? ಐಎಎಎಫ್ ಕಡೆಗೆ ಬೆರಳು ತೋರಿಸುತ್ತಿರುವ ಮಾಧ್ಯಮಗಳು ಸಮೀಕ್ಷೆ ವರದಿಯು ಜಾಗತಿಕ ಮಟ್ಟದಲ್ಲಿ ಹಬ್ಬಿಕೊಂಡಿರುವ ಡೋಪಿಂಗ್ ಎಂಬ ವಿಷವೃಕ್ಷದ ಸಂಪೂರ್ಣ ವಿಚಾರವನ್ನು ಹೇಳಿತ್ತು ಎಂದಿವೆ. `ಜರ್ಮನಿಯ ಟ್ಯುಬೆನ್ಜಿನ್ ವಿಶ್ವವಿದ್ಯಾಲಯದ ಸಂಶೋಧಕರು ಜಗತ್ತಿನ ನಾನಾ ದೇಶಗಳಲ್ಲಿ ಸಮೀಕ್ಷೆ ನಡೆಸಿ ಆ ವರದಿಯನ್ನು ತಯಾರಿಸಲಾಗಿತ್ತು.

2011ರಲ್ಲಿ ದಕ್ಷಿಣ ಕೊರಿಯಾದ ಡೇಗುವಿನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಪದಕ ಗೆದ್ದವರನ್ನು ಸಂದರ್ಶಿಸಿ ಅವರ ಹೇಳಿಕೆಗಳನ್ನೂ ವರದಿಯಲ್ಲಿ ದಾಖಲಿಸಲಾಗಿತ್ತು. ಗೌಪ್ಯತೆಯ ಪ್ರಮಾಣದ ಮೇರೆಗೆ ಕೆಲವೊಂದು ವಿಚಾರಗಳನ್ನು ಹೇಳಿಕೊಂಡಿದ್ದ ಆ ಅಥ್ಲೀಟ್ ಗಳು, ಸ್ಪರ್ಧೆಯ ವೇಳೆ ತಾವು ಉದ್ದೀಪನಾ ಮದ್ದು ಸೇವಿಸಿದ್ದನ್ನು ಒಪ್ಪಿಕೊಂಡಿದ್ದರು.

ಅದಷ್ಟೇ ಅಲ್ಲದೆ, ಜಗತ್ತಿನ ಅನೇಕ ಪ್ರಮುಖ ಅಥ್ಲೀಟ್‍ಗಳು ತಾವು ಉದ್ದೀಪನಾ ಮದ್ದುಗಳನ್ನು ಉಪಯೋಗಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಇದರಿಂದ, ಜಗತ್ತಿನ ಒಟ್ಟಾರೆ ಕ್ರೀಡಾಪಟುಗಳಲ್ಲಿ ಮೂರನೇ ಒಂದರಷ್ಟು  ಮಂದಿ ಉದ್ದೀಪನಾ ಮದ್ದುಗಳ ದಾಸಾನು ದಾಸರಾಗಿದ್ದರೆನ್ನುವುದು ಬಹಿರಂಗಗೊಂಡಿತ್ತು'' ಎಂದು ಮಾಧ್ಯಮಗಳು ವರದಿಯನ್ನು ಬಣ್ಣಿಸಿವೆ.

ಆರೋಪವೇನು?
``ಹಲವಾರು ಮಹತ್ವದ ವಿಚಾರಗಳ ನ್ನೊಳಗೊಂಡಿದ್ದ ಸಮೀಕ್ಷೆ ವರದಿಯ ಕೆಲ ಅಂಶಗಳು 2013ರಲ್ಲಿ ಅಮೆರಿಕದ ಮಾಧ್ಯಮವೊಂದರಲ್ಲಿ ಪ್ರಕಟಗೊಂಡವು. ತಕ್ಷಣವೇ ಜಾಗೃತವಾದ ಐಎಎಎಫ್, ತನ್ನ ಪ್ರಭಾವವನ್ನು ಬಳಸಿ ಆ ವರದಿಯು ಸಂಪೂರ್ಣವಾಗಿ ಪ್ರಕಟಗೊಳ್ಳದಂತೆ `ನೋಡಿಕೊಂಡಿತು' ಎಂದಿವೆಯಲ್ಲದೆ, `ಈ ನಡೆಯ ಮೂಲಕ ಮಾಧ್ಯಮ ಸ್ವಾತಂತ್ರ್ಯದ ಮೇಲೆ ಐಎಎಎಫ್ ಅತಿಕ್ರಮಣ ಮಾಡುತ್ತಿದೆ'ಎಂದು ಮಾಧ್ಯಮಗಳು ಆರೋಪಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com