ಫೈನಲ್‍ನಲ್ಲಿ ಸೋತರೂ ಸೈನಾ ನೆಹ್ವಾಲ್ ನಂಬರ್ 1

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದರೂ ವಿಶ್ವ...
ಸೈನಾ ನೆಹ್ವಾಲ್
ಸೈನಾ ನೆಹ್ವಾಲ್

ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದರೂ ವಿಶ್ವ ರ್ಯಾಂಕಿಂಗ್‍ನಲ್ಲಿ ಅಗ್ರಸ್ಥಾನ  ಸಂಪಾದಿಸಲಿದ್ದಾರೆ. ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್, ತಮ್ಮ ಪ್ರತಿಸ್ಪರ್ಧಿ ಸ್ಪೇನ್‍ನ ಕೆರೊಲಿನಾ ಮರಿನ್ ವಿರುದ್ಧ ನೇರ ಸೆಟ್ ಗಳ ಸೋಲನುಭವಿಸಿದ್ದರು. ಮರಿನ್ ಈ  ಗೆಲುವಿನಿಂದಾಗಿ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ 80,612 ಅಂಕಗಳನ್ನು ಉಳಿಸಿಕೊಂಡರು.ಇತ್ತ ಸೈನಾ ನೆಹ್ವಾಲ್ ಕಳೆದ ಬಾರಿ ಕ್ವಾರ್ಟರ್ ಫೈನಲ್‍ನಲ್ಲಿ ಹೊರಬಿದ್ದಿದ್ದರು. ಇನ್ನು ಈ ಬಾರಿಯ ಟೂರ್ನಿಯಲ್ಲಿ  ಫೈನಲ್ ಸುತ್ತಿಗೆ ಪ್ರವೇಶಿಸುವ ಮೂಲಕ ಶ್ರೇಷ್ಠ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಸೈನಾ ನೆಹ್ವಾಲ್ ಹೆಚ್ಚುವರಿಯಾಗಿ 3600 ಅಂಕಗಳನ್ನುಪಡೆಯುವ ಮೂಲಕ ರ್ಯಾಂಕಿಂಗ್ ಪಟ್ಟಿಯಲ್ಲಿ 82,792 ಅಂಕಗಳನ್ನು  ಪಡೆದುಕೊಂಡಿದ್ದಾರೆ. ಈ ಮೂಲಕ ಸೈನಾ ಮತ್ತೆ ಅಗ್ರಸ್ಥಾನ ಅಲಂಕರಿಸಿದ್ದಾರೆ. ಈ ವಾರದ ಒಳಗಾಗಿ ಅಧಿಕೃತವಾದ ನೂತನ ವಿಶ್ವರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಲಿದೆ.
ಕಳೆದ ಏಪ್ರಿಲ್‍ನಲ್ಲಿ ಮೊದಲ ಬಾರಿಗೆ ವಿಶ್ವದ ನಂಬರ್ ಒನ್ ಪಟ್ಟವನ್ನು ಅಲಂಕರಿಸಿದ್ದ ಸೈನಾ ನೆಹ್ವಾಲ್, ಕೇವಲ ಐದು ವಾರಗಳ ಕಾಲ ಈ ಪ್ರತಿಷ್ಠಿತ ಸ್ಥಾನವನ್ನು ಅಲಂಕರಿಸಿದ್ದರು. ಈಗ ವಿಶ್ವ ಚಾಂಪಿಯನ್‍ಶಿಪ್ ಮುಕ್ತಾಯದ ನಂತರ ಅಗ್ರಸ್ಥಾನಕ್ಕೇರಿರುವ ಸೈನಾ ಈ ಬಾರಿ ಸಾಕಷ್ಟು ದೀರ್ಘಾವಧಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ.
ಇನ್ನು ಫೈನಲ್ ಪಂದ್ಯದಲ್ಲಿ ಸ್ವಯಂಕೃತ ತಪ್ಪಿನಿಂದ ಸೋಲನುಭವಿಸಿದ್ದಾಗಿ ಒಪ್ಪಿಕೊಂಡಿರುವ ಸೈನಾ ನೆಹ್ವಾಲ್, ``ಪಂದ್ಯದಲ್ಲಿ ಇದಕ್ಕಿಂತಲೂ ಉತ್ತಮ ಪ್ರದರ್ಶನ ನೀಡಬಹುದಿತ್ತು.
ಪಂದ್ಯದ ಮೊದಲ ಗೇಮ್ ನಲ್ಲಿ ಹೆಚ್ಚು ತಪ್ಪುಗಳನ್ನು ಎಸಗಿದೆ. ಫಿಟ್ನೆಸ್ ನಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಇನ್ನು ಎರಡನೇ ಗೇಮ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಮಹತ್ವದ ಹಂತದಲ್ಲಿ ಮಾಡಿದ ಒಂದು ತಪ್ಪು ಪಂದ್ಯವನ್ನು ಕೈಚೆಲ್ಲುವಂತೆ ಮಾಡಿತು. ಈ ಹಿಂದೆ ನನ್ನ ವಿರುದ್ಧ ಆಡಿದ್ದ ಅನುಭವ ಕೆರೊಲಿನಾ ಮರಿನ್‍ಗೆ ಅನುಕೂಲವಾಯಿತು'' ಎಂದು ಅಭಿಪ್ರಾಯಪಟ್ಟರು.
ಸೈನಾಗೆ ಪ್ರಧಾನಿ ಅಭಿನಂದನೆ ಮೊಟ್ಟ ಮೊದಲ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ, ಖ್ಯಾತ ಆಟಗಾರ್ತಿ ಸೈನಾ ನೆಹ್ವಾಲ್‍ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಸಾಧನೆ ಮಾಡಿರುವುದು ಯಶಸ್ವಿ ಹೆಜ್ಜೆಯಾಗಿದೆ. ಈ ಸಾಧನೆಗಾಗಿ ಸೈನಾ ನೆಹ್ವಾಲ್ ಅವರಿಗೆ ಅಭಿನಂದನೆಗಳು. ಅವರ ಈ ಯಶಸ್ಸು ಸಾಕಷ್ಟು ಯುವ ಪ್ರತಿಭೆಗಳಿಗೆ ಸ್ಫೂರ್ತಿದಾಯಕವಾಗಲಿದೆ ಎಂದು ಮೋದಿ ಅವರು ಟ್ವೀಟ್ ಮಾ ಡಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಇದು ಐದನೇ ಪದಕವಾಗಿದ್ದು, ಮೊದಲ ಬಾರಿಗೆ ಬೆಳ್ಳಿ ಪದಕ ಲಭಿಸಿದೆ. ಉಳಿದಂತೆ ನಾಲ್ಕು ಕಂಚಿನ ಪದಕಗಳು ಲಭಿಸಿದ್ದವು. 1983ರಲ್ಲಿ ಪ್ರಕಾಶ್ ಪಡುಕೋಣೆ ಭಾರತಕ್ಕೆ ಮೊದಲ ಬಾರಿಗೆ ಕಂಚಿನ ಪದಕ ತಂದುಕೊಟ್ಟಿದ್ದರು. ಆನಂತರ 2011ರಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ 2011ರಲ್ಲಿ ಮಹಿಳೆಯರ ಡಬಲ್ಸ್‍ನಲ್ಲಿ ಕಂಚಿನ ಪದಕ ಪಡೆದಿದ್ದರು.ನಂತರ 2013 ಮತ್ತು 2014ರಲ್ಲಿ ಪಿ.ವಿ ಸಿಂಧು ಮಹಿಳೆಯರ ಸಿಂಗಲ್ಸ್ ನಲ್ಲಿ ಕಂಚಿನ ಪದಕ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com