
ನವದೆಹಲಿ: ಇದೇ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಯ ಆತಿಥ್ಯವನ್ನು ಛತ್ತೀಸ್ ಗಢದ ರಾಜಧಾನಿ ರಾಯ್ ಪುರಕ್ಕೆ ಲಭಿಸಿದೆ.
2014ರಲ್ಲಿ ಸ್ಥಾಪನೆಯಾದ ಸುಸಜ್ಜಿತ 3 ಸಾವಿರ ಆಸನಗಳುಳ್ಳ ರಾಯ್ ಪುರ ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ಈ ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಇದೇ ಮೊದಲ ಬಾರಿಗೆ ಈ ಕ್ರೀಡಾಂಗಣದಲ್ಲಿ ಹಾಗೂ ರಾಯ್ ಪುರದಲ್ಲಿ ಅಂತಾರಾಷ್ಟ್ರೀಯ ಹಾಕಿ ಟೂರ್ನಿಯನ್ನು ಆಯೋಜಿಸಲಾಗಿದೆ.
ಇತ್ತೇಚೆಗೆ ಬ್ಯೂನಸ್ ಐರಿಸ್ ಹಾಗೂ ಆ್ಯಂಟ್ವೆರ್ಪ್ ನಲ್ಲಿ ನಡೆದ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿ ಪಂದ್ಯಾವಳಿಗಳಲ್ಲಿ ಅರ್ಹತೆ ಪಡೆದ 8 ತಂಡಗಳು ಫೈನಲ್ ಟೂರ್ನಿಯಲ್ಲಿ ಭಾಗವಹಿಸಲಿವೆ. ಈ ಬಾರಿ ವಿಶ್ವದ ನಂಬರ್ ಒನ್ ತಂಡವಾಗಿರುವ ಆಸ್ಟ್ರೇಲಿಯಾ, ನಂತರದ ಸ್ಥಾನಗಳಲ್ಲಿರುವ ಹಾಲೆಂಡ್, ಜರ್ಮನಿ, ಬೆಲ್ಜಿಯಂ, ಗ್ರೇಟ್ ಬ್ರಿಟನ್, ಅರ್ಜೆಂಟೀನಾ, ಭಾರತ ಮತ್ತು ಕೆನಡಾ ತಂಡಗಳು ಈ ಟೂರ್ನಿಯಲ್ಲಿ ಸೆಣಸಲಿವೆ.
ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಯಲ್ಲಿ ಒಲಿಂಪಿಕ್ ಗೆ ಅರ್ಹತೆ ಪಡೆದುಕೊಂಡಿರುವ ತಂಡಗಳೇ ಸೆಣಸುತ್ತಿರುವ ಕಾರಣ ಟೂರ್ನಿ ಹೆಚ್ಚು ರೋಚಕವಾಗಿರುವ ಸಾಧ್ಯತೆ ಇದೆ. ಈ ಎಲ್ಲ ತಂಡಗಳು ಪ್ರತಿಷ್ಠಿತ ಕ್ರೀಡಾಕೂಟಕ್ಕೂ ಮುನ್ನ ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿಕೊಂಡು ಸಿದ್ಧತೆ ನಡೆಸಲು ಕೊನೆಯ ಅವಕಾಶವಾಗಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ ಅಧ್ಯಕ್ಷ ಲಿಯಾಂಡ್ರೋ ನೆಗ್ರೆ ತಿಳಿಸಿದ್ದಾರೆ.
Advertisement