ಫೇವರಿಟ್ ಯು ಮುಂಬಾಗೆ ಪ್ರಬಲ ಬುಲ್ಸ್ ಸವಾಲು

ಕಳೆದ ಬಾರಿ ಪ್ರಶಸ್ತಿಯಿಂದ ವಂಚಿತವಾಗಿ, ಈ ಋತುವಿನ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಯು ಮುಂಬಾ, ಭಾನುವಾರ...
ಪ್ರೊ ಕಬಡ್ಡಿ ಫೈನಲ್‍ನಲ್ಲಿ ಪ್ರಶಸ್ತಿಗಾಗಿ ಮುಂಬೈ, ಬೆಂಗಳೂರು ಕಾದಾಟ
ಪ್ರೊ ಕಬಡ್ಡಿ ಫೈನಲ್‍ನಲ್ಲಿ ಪ್ರಶಸ್ತಿಗಾಗಿ ಮುಂಬೈ, ಬೆಂಗಳೂರು ಕಾದಾಟ
Updated on

ಮುಂಬೈ: ಕಳೆದ ಬಾರಿ ಪ್ರಶಸ್ತಿಯಿಂದ ವಂಚಿತವಾಗಿ, ಈ ಋತುವಿನ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಯು ಮುಂಬಾ, ಭಾನುವಾರ ನಡೆಯಲಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿನಲ್ಲಿ ಬೆಂಗಳೂರು ಬುಲ್ಸ್ ತಂಡದ ಸವಾಲನ್ನು ಎದುರಿಸಲಿದೆ.

ಸತತ ಎರಡನೇ ಬಾರಿಗೆ ಪ್ರಶಸ್ತಿ ಸುತ್ತಿನ ಅಖಾಡಕ್ಕೆ ಕಾಲಿಟ್ಟಿರುವ ಅದು ಈ ಬಾರಿ ಪ್ರಶಸ್ತಿ ಗೆಲ್ಲುವುದೋ ಅಥವಾ ಇದೇ ಮೊದಲ ಬಾರಿಗೆ ಫೈನಲ್‍ಗೆ ಕಾಲಿಟ್ಟಿರುವ ಬೆಂಗಳೂರು ತಂಡದ ಬಿರುಸಿನ ತಿವಿತಕ್ಕೆ ಒಳಗಾಗುವುದೋ ಎಂಬುದಂತೂ ಕಬಡ್ಡಿ ಪ್ರಿಯರ ನಾಡಿಮಿಡಿತವನ್ನು ಹೆಚ್ಚಿಸಿದೆ. ಶುಕ್ರವಾರ ನಡೆದ ಪಂದ್ಯಾವಳಿಯ ಎರಡೂ ಸೆಮಿಫೈನಲ್ ಪಂದ್ಯಗಳು ಅತೀವ ರೋಚಕತೆಗೆ ಸಾಕ್ಷಿಯಾದವು.

ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡ, ತೆಲುಗು ಟೈಟಾನ್ಸ್ ವಿರುದ್ಧ ಕೇವಲ ಒಂದು ಅಂಕದಲ್ಲಿ ರೋಚಕವಾಗಿ ಗೆಲುವು ಸಾಧಿಸಿ ಫೈನಲ್‍ಗೆ ಪದಾರ್ಪಣೆ ಮಾಡಿದರೆ, ತದನಂತರದ ಎರಡನೇ ಸೆಮಿಫೈನಲ್‍ನಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿದ ಯು ಮುಂಬಾ ಫೈನಲ್‍ಗೆ ಕಾಲಿಟ್ಟಿತು. ಚೊಚ್ಚಲ ಪ್ರಶಸ್ತಿಗಾಗಿನ ಈ ಸೆಣಸಾಟ ಭಾರೀ ಕೌತುಕಕ್ಕೆ ಎಡೆಮಾಡಿಕೊಟ್ಟಿದೆ.

ಎರಡೂ ತಂಡಗಳು ಪ್ರತಿಭಾನ್ವಿತ ಹಾಗೂ ಸಶಕ್ತ ಆಟಗಾರರನ್ನು ಒಳಗೊಂಡಿದ್ದು, ಪಂದ್ಯ ರೋಚಕತೆಯ ಮುನ್ಸೂಚನೆಯನ್ನು ನೀಡಿದ್ದಾರೆ. ಅದೇ ಆತ್ಮವಿಶ್ವಾಸ ಹಾಗೂ ಎಚ್ಚರಿಕೆಯ ನಡೆಗಳು ಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ ಜಯ ತಂದು ಕೊಡಲಿ ಎಂಬುದು ಆ ತಂಡದ ಲಕ್ಷಾಂತರ ಅಭಿಮಾನಿಗಳು ನಿರೀಕ್ಷೆ.

ಆದರೆ, ಅಂಥದ್ದೊಂದು ಚತಿತ್ರಾರ್ಹ ಜಯ ದಾಖಲಿಸುವ ಮುನ್ನ ಆ ತಂಡ ತನ್ನನ್ನು ತಾನು ಆತ್ಮವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ. ಈ ಟೂರ್ನಿಯಲ್ಲಿ ಈವರೆಗೆ ಅದು ನಡೆದು ಬಂದಿರುವ ಹಾದಿ ಗಮನಿಸಿದರೆ, ಬುಲ್ಸ್ ತಂಡ ರೈಡಿಂಗ್ ವಿಭಾಗದಲ್ಲಿ ಕೊಂಚ ಲೋಪದೋಷಗಳನ್ನು ಹೊಂದಿದೆ. ಯು ಮುಂಬಾದಲ್ಲಿ ನಾಯಕ ಅನುಪ್ ಕುಮಾರ್, ಶಬೀರ್ ಬಾಪು ಹಾಗೂ ರಿಶಾಂಕ್ ಎಂಬ ಮೂವರು ನಿಷ್ಣಾತ ರೈಡರ್ ಗಳಿದ್ದಾರೆ.

ಇವರಲ್ಲದೆ, ಜೀವಾ ಕುಮಾರ್ ನೇತೃತ್ವದ ಬಲಿಷ್ಠವಾದ ರಕ್ಷಣಾತ್ಮಕ ಪಡೆಯೇ ಮುಂಬೈ ತಂಡದಲ್ಲಿದೆ. ಆದರೂ, ಈ ಎಲ್ಲಾ ಜಗಜ್ಜಟ್ಟಿಗಳು ಸ್ವಲ್ವ ಯಾಮಾರಿದರೂ ಜಯ ಬೆಂಗಳೂರು ತಂಡದ ಪಾಲಾಗುವುದು ಖಂಡಿತ. ಇನ್ನು ಬುಲ್ಸ್ ತಂಡ ತನ್ನಲ್ಲಿನ ಆಲ್ರೌಂಡ್ ಆಟಗಾರ ಮಂಜಿತ್ ಚಿಲ್ಲರ್ ಅವರ ಮೇಲೆ ತುಸು ಹೆಚ್ಚಾಗಿಯೇ ಅವಲಂಬಿತವಾಗಿದೆ ಎಂದರೆ ಅದನ್ನು ಆ ತಂಡದ ಆಟಗಾರರು ಟೀಕೆ ಅಂತ ಪರಿಗಣಿಸುವ ಹಾಗಿಲ್ಲ.

ಇದನ್ನು ಚೆನ್ನಾಗಿ ತಿಳಿಸಿರುವ ಯು ಮುಂಬಾ ತಂಡ, ಆರಂಭದಲ್ಲೇ ಅವರನ್ನು ಕಟ್ಟಿಹಾಕುವ ಪ್ರಯತ್ನವನ್ನು ಮಾಡುತ್ತದೆಂಬುದು ನಿಸ್ಸಂಶಯ. ಈ ವಿಚಾರವನ್ನು ಈಗಾಗಲೇ ಆ ತಂಡದ ನಾಯಕ ಅನುಪ್ ಕುಮಾರ್ ಸೇರಿದಂತೆ ಅನೇಕ ಆಟಗಾರರು ವ್ಯಕ್ತಪಡಿಸಿದ್ದಾರೆ. ಹಾಗಂತ, ಬುಲ್ಸ್ ತಂಡವನ್ನು ಹಗುರವಾಗಿ ಮುಂಬೈ ಪರಿಗಣಿಸಿಲ್ಲ. ಬುಲ್ಸ್ ತಂಡದ ಭದ್ರಕೋಟೆಯಂತಹ ರಕ್ಷಣಾ ವ್ಯೂಹದ ಬಗ್ಗೆ ಆ ಆಟಗಾರರಿಗೆ ಸ್ಪಷ್ಟ ಅರಿವಿದೆ.

ಹಾಗಾಗಿ, ಪ್ರಶಸ್ತಿಯತ್ತ ದಾಪುಗಾಲಿಡಬೇಕಾದರೆ ಬೆಂಗಳೂರು ತಂಡ, ಎದುರಾಳಿಗಳು ಭಿೀತಿ ಪಡುವ ವಿಚಾರದಲ್ಲಿ ಮತ್ತಷ್ಟು ಗಂಭಿೀರವಾಗಿ, ದೌರ್ಬಲ್ಯ ಎಂದು ಪರಿಗಣಿಸಿರುವ ಚಾರದಲ್ಲಿ ಅತ್ಯಂತ ಜಾಗರೂಕವಾದ ಹೆಜ್ಜೆಗಳನ್ನಿಡಬೇಕಿದೆ. ಟೂರ್ನಿಯಲ್ಲಿ ಈವರೆಗೆ ಆಡಿರುವ 15 ಪಂದ್ಯಗಳಲ್ಲಿ 10ರಲ್ಲಿ ಜಯ ಸಾಧಿಸಿರುವ ಬೆಂಗಳೂರು ತಂಡ, ಇನ್ನೊಂದು ಜಯ ಸಾಧಿಸಿದರೆ ಚಾಂಪಿಯನ್ ಪಟ್ಟ ಅಲಂಕರಿಸುತ್ತದೆ. ಈ ಆವೃತ್ತಿಯಲ್ಲಿ ಎರಡು ಬಾರಿ ಮುಂಬೈ ತಂಡದ ವಿರುದ್ಧ ಮುಖಾಮುಖಿಯಾಗಿದ್ದಾಗಲೂ ಸತತ ಸೋಲು ದಾಖಲಿಸಿರುವ ತಂಡಕ್ಕೆ ಈಗ ಆತ್ಮವಿಶ್ವಾಸ ಹಾಗೂ ಅತ್ಯುತ್ತಮ ರಣತಂತ್ರವೇ ದೊಡ್ಡ ಅಸ್ತ್ರಗಳಾಗಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com