ಜೊಹಾನ್ಸ್‍ಬರ್ಗ್: ಗೆಳತಿ ರೀವಾ ಸ್ಟೀನ್‍ಕಾಂಪ್ ಅವರನ್ನು 2013ರಲ್ಲಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ ಕೊಲೆಗಾರ ಎಂದು ದಕ್ಷಿಣ ಆಫ್ರಿಕಾ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ, ಗೃಹ ಬಂಧನದಲ್ಲಿದ್ದ ಆಸ್ಕರ್ ಅವರಿಗೆ ಬಂಧನದ ವಾರೆಂಟ್ ಹೊರಡಿಸಲಾಗಿದೆ ಎಂಬ ವರದಿಗಳು ನಿರಾಧಾರ ಎಂದು ಹೇಳಲಾಗಿದೆ. ಈ ವರದಿಗಳನ್ನು ದಕ್ಷಿಣ ಆಫ್ರಿಕಾ ಅಧಿಕಾರಿಗಳು ನಿರಾಕರಿಸಿದ್ದಾರೆ. ಕೆಳ ನ್ಯಾಯಾಲಯ ವಿಧಿಸಿದ್ದ 5 ವರ್ಷಗಳ ಸೆರೆವಾಸ ಶಿಕ್ಷೆಯಿಂದಾಗಿ ಒಂದು ವರ್ಷ ಜೈಲು ವಾಸ ಅನುಭವಿಸಿ ಅಕ್ಟೋಬರ್ ತಿಂಗಳಿನಲ್ಲಷ್ಟೇ ಪೆರೋಲ್ ಮೇಲೆ ಬಿಡುಗಡೆಯಾಗಿರುವ ಪಿಸ್ಟೋರಿಯಸ್ ಗೃಹ ಬಂಧನದಲ್ಲಿದಲ್ಲಿದ್ದಾರೆ. ಪೆರೋಲ್ ಅವಧಿ ಮುಗಿದಮೇಲೆ ಅವರು ಪುನಃ ಜೈಲು ಸೇರಬೇಕಾಗುತ್ತದೆ.