ಸೈನಾ ನೆಹ್ವಾಲ್, ಚಾಂಗ್ ದುಬಾರಿ ಆಟಗಾರರು

ಇಂಡಿಯನ್ ಬ್ಯಾಡ್ಮಿಂಟನ್ ಲೀಗ್‍ನ ಎರಡನೇ ಆವೃತ್ತಿಯಾದ `ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್' (ಪಿಬಿಎಲ್)ಗಾಗಿ ಸೋಮವಾರ ನಡೆದ...
ಸೈನಾ ನೆಹ್ವಾಲ್-ಲೀ ಚಾಂಗ್ ವೀ- ಪಿವಿ ಸಿಂಧು
ಸೈನಾ ನೆಹ್ವಾಲ್-ಲೀ ಚಾಂಗ್ ವೀ- ಪಿವಿ ಸಿಂಧು
ನವದೆಹಲಿ: ಇಂಡಿಯನ್ ಬ್ಯಾಡ್ಮಿಂಟನ್ ಲೀಗ್‍ನ ಎರಡನೇ ಆವೃತ್ತಿಯಾದ `ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್' (ಪಿಬಿಎಲ್)ಗಾಗಿ ಸೋಮವಾರ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಸೈನಾ ನೆಹ್ವಾಲ್ ಹಾಗೂ ಮಲೇಷ್ಯಾದ ಹಿರಿಯ ಆಟಗಾರ ಲೀ ಚಾಂಗ್ ವೀ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗಿದ್ದಾರೆ. 
ತಲಾ ರು. 66 ಲಕ್ಷ, 75 ಸಾವಿರ ಮೊತ್ತ ಪಡೆದ ಈ ಇಬ್ಬರನ್ನೂ ಕ್ರಮವಾಗಿ ಅವಧ್ ವಾರಿಯರ್ಸ್ ಹಾಗೂ ಹೈದರಾಬಾದ್ ಹಾಟ್ ಶಾಟ್ಸ್ ತಂಡಗಳು ಖರೀದಿಸಿವೆ. ಎರಡು ಬಾರಿ ವಿಶ್ವ ಚಾಂಪಿಯನ್‍ಶಿಪ್ ಕಂಚಿನ ಪದಕ ವಿಜೇತೆ ಪಿ.ವಿ. ಸಿಂಧು, ರು. 63 ಲಕ್ಷದ 41 ಸಾವಿರ ಮೊತ್ತಕ್ಕೆ ಚೆನ್ನೈ ಸ್ಮಾಷರ್ಸ್ ತಂಡಕ್ಕೆ ಸೇರ್ಪಡೆಗೊಳ್ಳುವ ಮೂಲಕ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ 3ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 
ಇವರನ್ನು ಕೊಳ್ಳಲು ಡೆಲ್ಲಿ ಏಸರ್ಸ್ ಹಾಗೂ ಮುಂಬೈ ರಾಕೆಟ್ಸ್ ತಂಡಗಳು ತೀವ್ರ ಪೈಪೊೀಟಿ ನಡೆಸಿದವಾದರೂ, ಅಂತಿಮವಾಗಿ, ಚೆನ್ನೈ ಫ್ರಾಂಚೈಸಿ  ಸಿಂಧು ಅವರನ್ನು ಸೇರ್ಪಡೆಗೊಳಿಸುವಲ್ಲಿ ಫಲಪ್ರದವಾಯಿತು. ಬೆಂಗಳೂರು ತಂಡಕ್ಕೆ ಶ್ರೀಕಾಂತ್: ವಿಶ್ವದ 9ನೇ ಶ್ರೇಯಾಂಕಿತ ಕಿಡಾಂಬಿ ಶ್ರೀಕಾಂತ್, ರು. 53 ಲಕ್ಷ ಪಡೆಯುವ ಮೂಲಕ ಬೆಂಗಳೂರು ಟಾಪ್‍ಗನ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. 
ಇನ್ನು, ವಿಶ್ವದ 14ನೇ ಶ್ರೇಯಾಂಕಿತ ಪರುಪಳ್ಳಿ ಕಶ್ಯಪ್ ರು. 23 ಲಕ್ಷ ಪಡೆಯುವ ಮೂಲಕ ಹೈದರಾಬಾದ್ ತಂಡದ ಪಾಲಾದರು. ಸೈನಾ, ಲೀ ವಿಚಾರದಲ್ಲಿ ಲಾಟರಿ!: ಪಿಬಿಎಲ್ ನಿಯಮಾವಳಿ ಅನುಸಾರ, ಭಾರೀ ಬೇಡಿಕೆಯ ಆಟಗಾರರಾದ ಸೈನಾ ನೆಹ್ವಾಲ್ ಹಾಗೂ ಲೀ ಚಾಂಗ್ ವೀ ಅವರನ್ನು ಲಾಟರಿ ಎತ್ತುವ ಮೂಲಕ ಲಖ್ನೋ ಮೂಲದ ಅವಧ್ ಹಾಗೂ ಹೈದರಾಬಾದ್ ಫ್ರಾಂಚೈಸಿಗಳಿಗೆ ಸೇರ್ಪಡೆಗೊಳಿಸಲಾಯಿತು. 
ಈ ಬಗ್ಗೆ ವಿವರಣೆ ನೀಡಿದ ಪಿಬಿಎಲ್‍ನ ಅಧ್ಯಕ್ಷ ಅಖಿಲೇಖ್ ದಾಸ್ ಗುಪ್ತಾ, ಸೈನಾ ಹಾಗೂ ಲೀ ಅವರ ಹರಾಜು ಪ್ರಕ್ರಿಯೆ ಭಾನುವಾರವೇ ಮುಗಿದಿತ್ತು. ಐದು ಫ್ರಾಂಚೈಸಿಗಳೂ ಅವರನ್ನು ಕೊಳ್ಳಲು ನಾ ಮುಂದು, ತಾ ಮುಂದು ಎಂದು ಸೆಣಸಿದ್ದರಿಂದ ಲಾಟರಿ ತಂತ್ರಕ್ಕೆ ಮೊರೆಹೋಗಲಾಯಿತು ಎಂದು ತಿಳಿಸಿದರು. 
ಜ್ವಾಲಾ, ಅಶ್ವಿನಿಗೆ ನಿರಾಸೆ: ಭಾರತದ ನಂಬರ್‍ಒನ್ ಡಬಲ್ಸ್ ಜೋಡಿಯಾದ ಆಂಧ್ರಪ್ರದೇಶದ ಜ್ವಾಲಾ ಗುಟ್ಟಾ ಹಾಗೂ ರಾಜ್ಯದ ಅಶ್ವಿನಿ ಪೊನ್ನಪ್ಪ ಅವರಿಗೆ ಯಾವುದೇ ಬಿಡ್ಡಿಂಗ್ ನಡೆಯಲಿಲ್ಲ. ಈ ಇಬ್ಬರೂ, ತಮಗೆ ನಿಗದಿಪಡಿಸಲಾಗಿದ್ದ ಮೂಲ ಬೆಲೆ ರು. 16 ಲಕ್ಷಕ್ಕೆ ತಮ್ಮ ತವರಿನ ಫ್ರಾಂಚೈಸಿಗಳಾದ ಹೈದರಾಬಾದ್ ಹಾಗೂ ಬೆಂಗಳೂರು ತಂಡಗಳಿಗೆ ಸೇರ್ಪಡೆಯಾದರು. ಯುವ ಆಟಗಾರ ಸುಮಿತ್ ರೆಡ್ಡಿಯವರನ್ನೂ ರು. 16 ಲಕ್ಷಕ್ಕೆ ಬೆಂಗಳೂರು ತಂಡವೇ ಖರೀದಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com