ನವದೆಹಲಿ: ಸ್ಟಾರ್ ಆಟಗಾರ ಯೋಗೇಶ್ವರ್ ದತ್ ಹಾಗೂ ಹಾಲಿ ವಿಶ್ವ ಚಾಂಪಿಯನ್ ಒಕಾಸಾನಾ ಹೆರ್ಹೆಲ್ ಅವರ ಭರ್ಜರಿ ಪ್ರದರ್ಶನದ ಸಹಾಯದಿಂದ, ಹರ್ಯಾಣ ಹ್ಯಾಮರ್ಸ್ ತಂಡ, ಶನಿವಾರ ನಡೆದ ಪ್ರೊ ರೆಸ್ಲಿಂಗ್‍ನ ಲೀಗ್ ಪಂದ್ಯದಲ್ಲಿ ದಿಲ್ಲಿ ವೀರ್ಸ್ ತಂಡದ ವಿರುದ್ಧ 5-2 ಅಂತರದ ಜಯ ಸಾಧಿಸಿತು. ಆದರೂ, ವಿನೇಶ್ ಫೋಗಟ್ ಗಳಿಸಿದ ಜಯ ಹಾಗೂ ಇತರ ಸ್ಪರ್ಧಾಳುಗಳು ತೋರಿದ ತೀವ್ರ ಹೋರಾಟದ ಪರಿಣಾಮ ದಿಲ್ಲಿ ತಂಡ ಕೃಪಾಂಕ ಪಡೆಯುವಲ್ಲಿ ಯಶಸ್ವಿಯಾಯಿತು. ಹರ್ಯಾಣದ ಪರ ಕಣಕ್ಕಿಳಿದಿದ್ದ ಲಿವಾನ್ ಲೋಪೆಜ್ ಅಜ್ಯುಸಿ , ದಿಲ್ಲಿ ತಂಡದ ದಿನೇಶ್ ಕುಮಾರ್ ಅವರನ್ನು 7-0 ಅಂತರದಲ್ಲಿ ಸೋಲಿಸಿದರು. ಮತ್ತೊಂದು ಪಂದ್ಯದಲ್ಲಿ, ದಿಲ್ಲಿ ತಂಡದ ಗುರ್ಬಾಲ್ ಸಿಂಗ್, ಹರ್ಯಾಣದ ಯೂರಿ ಮಿಯರ್ ವಿರುದ್ಧ ಗೆಲವು ಸಾಧಿಸಿದರು. ಆನಂತರ ನಡೆದ ಮಹಿಳೆಯರ ಸುತ್ತಿನ ಪಂದ್ಯದಲ್ಲಿ ಒಕ್ಸಾನಾ ಹೆರ್ಹೆಲ್ ಅವರು, ದಿಲ್ಲಿ ತಂಡದ ಯೆಸಿಲಿರ್ಮಾರ್ಕ್ ವಿರುದ್ಧ ಜಯ ಗಳಿಸಿದರು. ಅಲ್ಲಿಗೆ, ದಿಲ್ಲಿ ತಂಡ, ಹರ್ಯಾಣ ವಿರುದ್ಧ 2-1ರ ಮುನ್ನಡೆ ಸಾಧಿಸಿತು. ಆದರೆ ಇದಾದ ಮೇಲೆ, ಹರ್ಯಾಣ ಮತ್ತೆರಡು ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ದಿಲ್ಲಿಯ ವೇಗಕ್ಕೆ ಕಡಿವಾಣ ಹಾಕಿತು. ಮಹಿಳೆಯರ ಸುತ್ತಿನ ಪಂದ್ಯದ ಬಳಿಕ ನಡೆದ ಪುರುಷರ ಪಂದ್ಯದಲ್ಲಿ ಹರ್ಯಾಣದ ಹಿತೇಂದರ್, ದಿಲ್ಲಿಯ ಕ್ರಿಶನ್ ಕುಮಾರ್ ವಿರುದ್ಧ ಜಯ ಸಾಧಿಸಿದರೆ, ಗೀತಿಕಾ ಜಾಖರ್ ಅವರು, ದಿಲ್ಲಿಯ ನಿಕ್ಕಿ ವಿರುದ್ಧ 2-2ರ ಅಂಕಗಳಲ್ಲಿದ್ದಾಗ, ಎದುರಾಳಿ ಸ್ಪರ್ಧೆಯಿಂದ ಹಿಂದೆ ಸರಿದ ಪರಿಣಾಮ ತಾಂತ್ರಿಕ ವಿಧಾನದ ಅನುಸಾರ ಗೆಲವು ಸಾಧಿಸಿದರು.