
ಜಯದ ನಾಗಾಲೋಟದಲ್ಲಿರುವ ಇಂಡಿಯನ್ ಏಸಸ್ ತಂಡ, ದುಬೈನಲ್ಲಿ ಸೋಮವಾರದಿಂದ ಆರಂಭಗೊಳ್ಳುತ್ತಿರುವ ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್) ಪಂದ್ಯಾವಳಿಯ ಯುಎಇ ಸುತ್ತಿನ ಟೂರ್ನಿಯಲ್ಲಿ ತನ್ನ ಮೊದಲ ಹಣಾಹಣಿಯಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ. ಈವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಆರು ಜಯ ಗಳಿಸುವ ಮೂಲಕ ಟೂರ್ನಿಯ ಅಂಕಪಟ್ಟಿಯಲ್ಲಿ ಸದ್ಯಕ್ಕೆ ಅಗ್ರಸ್ಥಾನದಲ್ಲಿರುವ ಅದು, ಅದೇ ಲಯವನ್ನು ಮುಂದುವರಿಸುವ ನಿರೀಕ್ಷೆಯಲ್ಲಿದೆ.
ಈ ಬಾರಿಯ ಐಪಿಟಿಎಲ್‍ನ ತನ್ನ ಆರಂಭಿಕ ಪಂದ್ಯದಲ್ಲಿ ಜಪಾನ್ ವಾರಿಯರ್ಸ್ ವಿರುದ್ಧ ಚೊಚ್ಚಲ ಜಯ ದಾಖಲಿಸಿದ ಏಸಸ್, ಅಲ್ಲಿಂದ ಸತತವಾಗಿ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಆದರೆ, ಡಿ. 8ರಂದು ಮನಿಲಾ ಸುತ್ತಿನ ಟೂರ್ನಿಯ ಪಂದ್ಯದಲ್ಲಿ ಪಿಲಿಪ್ಪೀನ್ಸ್ ಮೇವರಿಕ್ಸ್ ವಿರುದ್ಧ ಸೋತಿತ್ತು. ಅದೊಂದು ಸೋಲನ್ನು ಹೊರತುಪಡಿಸಿ ದರೆ, ತಂಡವು ಈವರೆಗಿನ ತನ್ನೆಲ್ಲಾ ಪಂದ್ಯಗಳಲ್ಲೂ ಕೇವಲ ಉತ್ತಮ ಪ್ರದರ್ಶನ ನೀಡಿದೆ. ಗೆಲವಿನ ಲೆಕ್ಕಾಚಾರದಲ್ಲಿ ಶೇ. 57.7ರಷ್ಟು ಯಶಸ್ಸನ್ನು ಪಡೆದಿರುವ ಅದು ಸಹಜವಾಗಿ ಅಗ್ರಸ್ಥಾನದಲ್ಲಿದೆ. ಶೇಖಡಾವಾರು ಯಶಸ್ಸಿನ ಲೆಕ್ಕಾಚಾರದಲ್ಲಿ ಏಸಸ್ ಹತ್ತಿರ ಯಾವ ತಂಡಗಳೂ ಇಲ್ಲ. ಅದರಲ್ಲೂ, ಶನಿವಾರವಷ್ಟೇ ಮುಕ್ತಾಯಗೊಂಡ ಭಾರತ ಆವೃತ್ತಿಯ ಟೂರ್ನಿಯಲ್ಲಿನ ಎಲ್ಲಾ ಪಂದ್ಯಗಳಲ್ಲೂ ಪಾರಮ್ಯ ಮೆರೆದಿರುವ ಅದು, ತನ್ನೇ ಜೈತ್ರಯಾತ್ರೆಯನ್ನು ಮುಂದುವರಿಸಿದೆ. ಸೋಮವಾರ (ಡಿ. 14)ರಂದು ನಡೆಯಲಿರುವ ಯುಎಇ ಆವೃತ್ತಿಯ ಟೂರ್ನಿಯಲ್ಲಿ ತನ್ನ ಮೊದಲ ಎದುರಾಳಿಯಾಗಿರುವ ಜಪಾನ್ ವಿರುದ್ಧ ಏಸಸ್ ತಂಡ ಪುನಃ ಜಯಗಳಿಸುವ ವಿಶ್ವಾಸವಿದೆ. ಈ ಬಾರಿಯ ಐಪಿಟಿಎಲ್ ಟೂರ್ನಿಯಲ್ಲಿ, ಈವರೆಗೆ ಜಪಾನ್ ತಂಡವನ್ನು ಎರಡು ಬಾರಿ ಎದುರಿಸಿರುವ ಅದು, ಅವುಗಳಲ್ಲಿ ಜಯ ಸಾಧಿಸಿತ್ತು. ಇದೀಗ, ಆ ತಂಡದ ವಿರುದ್ಧ 3ನೇ ಜಯದತ್ತ ಅದು ಚಿತ್ತರಿಸಿದೆ.
ಏಸಸ್‍ನ ಈ ಯಶಸ್ಸಿಗೆ ಅದು ಹೊಂದಿರುವ ದೈತ್ಯ ಪ್ರತಿಭೆಗಳ ದಂಡು ಕಾರಣ ಎಂಬುದು ದಿಟ. ಟೆನಿಸ್ ಲೋಕದ ದಿಗ್ಗಜ ರಾಫೆಲ್ ನಡಾಲ್ ಸೇರಿದಂತೆ, ಭಾರತದ ಸಾನಿಯಾ ಮಿರ್ಜಾ, ಅಗ್ನಿಸ್ಕಾ ರಾಡ್ವಾಂಸ್ಕಾ, ಸಾನಿಯಾ, ರೋಹನ್ ಬೋಪಣ್ಣ, ಫ್ರಾಬ್ರಿಸ್ ಸ್ಯಾಂಟೊರೊ, ಸಮಂತಾ ಸ್ಟೋಸರ್ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಅದರಲ್ಲೂ ರಾಫೆಲ್ ನಡಾಲ್ ತಂಡದ ಬಹುನಿರೀಕ್ಷಿತ ಆಟಗಾರ.
Advertisement