
ಲಂಡನ್: ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ಮಂಗಳವಾರ ಭಾರತ ಮತ್ತು ಸ್ವಿಜರ್ಲೆಂಡ್‍ನ ಮಹಿಳಾ ಟೆನಿಸ್ ಜೋಡಿಯಾದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಅವರುಗಳನ್ನು ಈ ಋತುವಿನ (2015) ಐಟಿಎಫ್ ಮಹಿಳಾ ಡಬಲ್ಸ್ ಚಾಂಪಿಯನ್ನರೆಂದು ಘೋಷಿಸಿದೆ.
2000ದಲ್ಲಿ ಈ ಹಿರಿಮೆಗೆ ಭಾಜನವಾಗಿದ್ದ ಮಾರ್ಟಿನಾ ಹಿಂಗಿಸ್ ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೊಮ್ಮೆ ಪ್ರತಿಷ್ಠಿತ ಪ್ರಶಸ್ತಿ ಪಡೆದಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಜತೆಯಾದರೂ, ಮಾರ್ಟಿನಾ ಮತ್ತು ಸಾನಿಯಾ ಈ ಋತುವಿನಲ್ಲಿ ಎರಡು ಗ್ರಾಂಡ್‍ಸ್ಲಾಮ್(ವಿಂಬಲ್ಡನ್ ಮತ್ತು ಯುಎಸ್ ಓಪನ್) ಸೇರಿದಂತೆ ಏಳು ಟೂರ್ನಿಗಳಲ್ಲಿ ಚಾಂಪಿಯನ್ ಆಗಿದ್ದರು.
ಋತುವಿನಲ್ಲಿ ಎದುರಿಸಿದ ಪಂದ್ಯಗಳಲ್ಲಿ 55-7ರ ಅಂತರದಿಂದ ಮೇಲುಗೈ ಸಾಧಿಸಿದರು. 'ಐಟಿಎಫ್ ನಿಂದ ಈ ಪ್ರಶಸ್ತಿಯನ್ನು ಪಡೆಯುವಂತಾಗಿರುವುದು ಹೆಮ್ಮೆ ಮೂಡಿಸಿದೆ. ಅತ್ಯಲ್ಪಾವಧಿಯಲ್ಲಿ ನಾವಿಬ್ಬರು ತೋರಿದ ಸಾಧನೆ ಮಹತ್ವವೆನಿಸಿದೆ. ನನ್ನೆಲ್ಲಾ ವೃತ್ತಿಬದುಕಿನ ಸಾಧನೆಗೆ ಪ್ರೋತ್ಸಾಹ ನೀಡಿ ದ ಪ್ರತಿಯೊಬ್ಬರಿಗೂ ನಾನು ಕೃತಜ್ಞಳಾಗಿದ್ದೇನೆ'' ಎಂದು ಸಾನಿಯಾ ಹೇಳಿದ್ದಾರೆ.
ಜೊಕೊ, ಸೆರೆನಾ ನಂ.1
ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿಯನ್ನು ವಿಶ್ವ ಟೆನಿಸ್ ಮಹಿಳೆಯರ ಡಬಲ್ಸ್ ವಿಭಾಗದ ಚಾಂಪಿಯನ್‍ಗಳೆಂದು ಅಧಿಕೃತವಾಗಿ ಘೋಷಿಸಿರುವ ಐಟಿಎಫ್, ಪುರುಷರ ಸಿಂಗಲ್ಸ್‍ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಹಾಗೂ ಮಹಿಳೆಯರ ಸಿಂಗಲ್ಸ್‍ನಲ್ಲಿ ಸೆರೆನಾ ವಿಲಿಯಮ್ಸ್ ಅವರನ್ನು ವಿಶ್ವ ಚಾಂಪಿಯನ್‍ಗಳೆಂದು ಘೋಷಿಸಿದೆ. ಜೊಕೊ, ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್, ಯುಎಸ್ ಓಪನ್ ಗೆದ್ದಿದ್ದರೆ, ಸೆರನಾ ವಿಲಿಯಮ್ಸ್ ಅವರು, ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿದ್ದಾರೆ.
Advertisement