ಸಮತಾ, ಪೂಜಾಗೆ ಚಿನ್ನ

ರಾಜ್ಯದ ಭರವಸೆಯ ಜೂಡೊ ಪಟುಗಳಾದ ಸಮತಾ ರಾಣೆ ಮತ್ತು ಪೂಜಾ ಶಪೂರ್ಕರ್ ಅತ್ಯುತ್ತಮ ಪ್ರದರ್ಶನ...
ಸಮತಾ, ಪೂಜಾಗೆ ಚಿನ್ನ

ತಿರುವನಂತಪುರ: ರಾಜ್ಯದ ಭರವಸೆಯ ಜೂಡೊ ಪಟುಗಳಾದ ಸಮತಾ ರಾಣೆ ಮತ್ತು ಪೂಜಾ ಶಪೂರ್ಕರ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ, 35ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಸಂಪಾದಿಸಿದ್ದಾರೆ.

ಬುಧವಾರ ನಡೆದ ಮಹಿಳೆಯರ 52 ಕೆ.ಜಿ ಒಳಗಿನ ವಿಭಾಗದಲ್ಲಿ ರಾಜ್ಯದ ಸಮತಾ ಎದುರಾಳಿ ದೆಹಲಿಯ ಕಲ್ಪನಾ ದೇವಿ ವಿರುದ್ಧ ಪ್ರಾಬಲ್ಯ ಮೆರೆದರು. ಮಹಿಳೆಯರ 57 ಕೆಜಿಯೊಳಗಿನ ವಿಭಾಗದಲ್ಲಿ ಪೂಜಾ ಶಪೂರ್ಕರ್ ಚಿನ್ನ ಸಂಪಾದಿಸಿದರು. ಈ ಮೂಲಕ ರಾಜ್ಯಕ್ಕೆ ಬುಧವಾರ 2 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕ ಲಭಿಸಿದೆ.

ತ್ವಿಶಾಗೆ ಬೆಳ್ಳಿ:
ಕಯಾಕಿಂಗ್ ಪಟು ತ್ವಿಶಾ(02:11.00)ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ್ದು, 500 ಮೀ. ಮಹಿಳೆಯರ ಸಿಂಗಲ್ಸ್ ಕಯಾಕಿಂಗ್‍ನಲ್ಲಿ ದ್ವಿತೀಯ ಸ್ಥಾನ ಪೆಡಯುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಈ ವಿಭಾಗದಲ್ಲಿ ಅಂಡಾಮಾನ್ ಮತ್ತು ನಕೋಬಾರ್ನ ರಜಿನ ಕಿರೊ (02:09.00) ಅಗ್ರಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಸಂಪಾದಿಸಿದರು.
ಉಳಿದಂತೆ ಮಧ್ಯಪ್ರದೇಶದ ಸೋನಿಯಾ ದೇವಿ (02:18.00) ತೃತೀಯ ಸ್ಥಾನ ಪಡೆದು ಕಂಚಿಗೆ ತೃಪ್ತಿಪಟ್ಟರು. ಕೆಲ ದಿನಗಳ ಹಿಂದೆ 1000 ಮೀ. ಮಹಿಳೆಯರ ಸಿಂಗಲ್ಸ್ ಕಯಾಕಿಂಗ್‍ನಲ್ಲಿ ತ್ವಿಶಾ ಚಿನ್ನದ ಪದಕ ಸಂಪಾದಿಸಿದ್ದರು. ಈ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ತ್ವಿಶಾ ಅಂತಿಮವಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಇನ್ನು 500 ಮೀ. ಪುರುಷರ ಡಬಲ್ಸ್ ವಿಭಾಗದಲ್ಲಿ ಕನಾಟಕದ ರಾಜಮಣಿ ಕನಕರಾಜ್ ಮತ್ತು ವೆಂಕಟೇಶ್ ಜಿ (1:46.00) ತೃತೀಯ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ ಪಡೆದರು. ಈ ವಿಭಾಗದಲ್ಲಿ ತೆಲಂಗಾಣ ತಂಡ ಚಿನ್ನದ ಪದಕ ಪಡೆದರೆ, ಸರ್ವೀಸಸ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. 500 ಮೀ. ಪುರುಷರ ಸಿಂಗಲ್ಸ್ ಕೆನಾಯ್ ನಲ್ಲಿ ರಾಜ್ಯ 5ನೇ ಸ್ಥಾನ ಪಡೆದರೆ, 500 ಮೀ ಪುರುಷರ ಫೋರ್ ಕೆನಾಯ್ನಲ್ಲಿ 4ನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರು.

ವಾಲಿಬಾಲ್ ವನಿತೆಯರಿಗೆ ಜಯ: ಮಹಿಳೆಯರ ವಾಲಿಬಾಲ್‍ನ ಪ್ರಾಥಮಿಕ ಸುತ್ತಿನಲ್ಲಿ ಕರ್ನಾಟಕ ತಂಡ ತಮ್ಮ ಎದುರಾಳಿ ಚಂಡೀಗಡ ವಿರುದ್ಧ ಗೆಲವು ದಾಖಲಿಸಿತು. ಆರಂಭದಿಂದ ಅಂತ್ಯದವರೆಗೂ ಉತ್ತಮ ಪದರ್ಶನ ನೀಡಿದ ಕರ್ನಾಟಕ ವನಿತೆಯರು 3-0 (25-21, 25-15, 25-8) ಅಂಕಗಳ ಅಂತರದಿಂದ ಜಯ ಸಾಧಿಸಿತು.

ಬಾಸ್ಕೆಟ್‍ಬಾಲ್ ಪುರುಷರಿಗೆ ಗೆಲವು: ತೀವ್ರ ಕುತೂಹಲದಿಂದ ಕೂಡಿದ್ದ ಪುರುಷರ ಬಾಸ್ಕೆಟ್‍ಬಾಲ್ ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ತಂಡ 85-71 ಅಂಕಗಳ ಅಂತರದಲ್ಲಿ ಹರ್ಯಾಣ ವಿರುದ್ಧ ಗೆದ್ದು ಬೀಗಿತು.

ವಿಜಯಕುಮಾರಿಗೆ ನಿರಾಸೆ:
ಮಹಿಳೆಯರ 400 ಮೀ. ರಾಜ್ಯದ ರೀನಾ ವರ್ಗೀಸ್ (56.20) ಮತ್ತು ವಿಜಯಕುಮಾರಿ (56.63) ಕ್ರಮವಾಗಿ 5 ಮತ್ತು 6ನೇ ಸ್ಥಾನ ಪಡೆದರು. ಪುರುಷರ 1500 ಮೀ.ನಲ್ಲಿ ರಾಜ್ಯದ ರಂಜನ್ ಕರಿಯಪ್ಪ (4:00.02) 11ನೇ ಸ್ಥಾನ ಪಡೆದರು. ಮಹಿಳೆಯರ ಲಾಂಗ್ ಜಂಪ್‍ನಲ್ಲಿ ಐಶ್ವರ್ಯ ಜಿ.ವಿ (6.12 ಮೀಟರ್) ನಾಲ್ಕನೆ ಸ್ಥಾನ ಪಡೆದು ಪದಕ ವಂಚಿತರಾದರು.

ಬ್ಯಾಡ್ಮಿಂಟನ್‍ನಲ್ಲಿ ಸೋಲು: ಕರ್ನಾಟಕದ ಬ್ಯಾಡ್ಮಿಂಟನ್ ಆಟಗಾರ್ತಿ ರೇಷ್ಮಾ ಕಾರ್ತಿಕ್ ಮಹಾರಾಷ್ಟ್ರದ ರಸಿಕ ರಾಜೆ ವಿರುದ್ಧ ಮುಖಭಂಗ
ಅನುಭವಿಸಿದರು. ಎದುರಾಳಿ ಆಟಗಾರ್ತಿಯ ಆಕ್ರಮಣಕಾರಿ ಆಟದ ಮುಂದೆ ಮಂಕಾದ ರೇಷ್ಮಾ 11-21, 8-21 ಗೇಮ್ ಗಳ ಅಂತರದಲ್ಲಿ ಸೋಲನುಭವಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com