
ಮೆಲ್ಬರ್ನ್: ಪಾಕಿಸ್ತಾನ ಕ್ರಿಕೆಟ್ ತಂಡದ ಫಿಲ್ಡಿಂಗ್ ಕೋಚ್, ದಕ್ಷಿಣ ಆಫ್ರಿಕಾ ಮೂಲದ ಗ್ರಾಂಟ್ ಲ್ಯುಡನ್ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.
ಪಾಕಿಸ್ತಾನದ ಕೆಲ ಆಟಗಾರರು ತಮ್ಮ ಬಳಿ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ತಮ್ಮ ಕೆಲಸದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಲ್ಯುಡನ್‍ರವರು ರಾಜಿನಾಮೆ ನೀಡಲು ಕಾರಣ ಎಂದು ಹೇಳಲಾಗಿದೆ.
ಅಸಭ್ಯ ವರ್ತನೆ ಯಾರಿಂದ?
ಈ ಬಾರಿಯ ವಿಶ್ವಕಪ್‍ನ ತನ್ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ, ಭಾರತ ತಂಡದ ವಿರುದ್ಥ 76 ರನ್‍ಗಳ ಸೋಲನುಭವಿಸಿತ್ತು. ಇದರಿಂದ ತಂಡದ ಹಿರಿಯ ಆಟಗಾರ ಶಾಹಿದ್ ಅಫ್ರಿದಿ, ಉಮರ್ ಅಕ್ಮಲ್ ಹಾಗೂ ಅಹ್ಮದ್ ಶೆಹಜಾದ್ ಅವರು ಗ್ರಾಂಟ್ ಲ್ಯುಡನ್ ಅವರ ತರಬೇತಿ
ಕ್ರಮಗಳನ್ನು ಟೀಕಿಸಿದ್ದಾರೆಂದು ಮೂಲಗಳು ಹೇಳಿವೆ.
ಇದರಿಂದ ಬೇಸತ್ತ ಲ್ಯುಡನ್ ರಾಜಿನಾಮೆ ನೀಡಿದ್ದಾರೆನ್ನಲಾಗಿದೆ. ಘಟನೆ ನಡೆದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಲ್ಯುಡನ್ ಮನವೊಲಿಕೆಗೆ ಪ್ರಯತ್ನಿಸಿದ್ದು, ಅದು ಫಲ ನೀಡಿಲ್ಲ. ಪ್ರಮುಖವಾಗಿ ಅಭ್ಯಾಸದ ವೇಳೆ ಈ ಆಟಗಾರರ ಜೊತೆಗೆ ಇನ್ನೂ ಕೆಲವು ಆಟಗಾರರು ತಮ್ಮ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆಟಗಾರರ ದುರ್ವರ್ತನೆಯಿಂದಾಗಿ ರಾಜಿನಾಮೆ ನೀಡುವುದು ಅನಿವಾರ್ಯವಾಗಿದೆ ಎಂದು ಲ್ಯುಡನ್ ಹೇಳಿದ್ದಾಗಿ ತಿಳಿದುಬಂದಿದೆ.
ಹಿಂದೆಯೂ ಹೀಗಾಗಿತ್ತು...
ವಿಶ್ವಕಪ್‍ನಲ್ಲಿ ಪಾಕಿಸ್ತಾನ ವಿಫಲ ವಾದಾಗಲೆಲ್ಲಾ ಕೋಚ್ ಹಾಗೂ ಆಟಗಾರರ ಮಧ್ಯೆ ಇಂಥ ಕಿರಿಕಿರಿಗಳು ನಡೆಯುವುದು ಪಾಕಿಸ್ತಾನ ತಂಡಕ್ಕೆ ಹೊಸತೇನಲ್ಲ. 2007ರಲ್ಲಿ ವಿಶ್ವಕಪ್
ಟೂರ್ನಿಯಿಂದ ಪಾಕಿಸ್ತಾನ ಹೊರಬಿದ್ದ 24 ಗಂಟೆಯಲ್ಲಿ ಅಂದಿನ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಬಾಬ್ ವೂಲ್ಮರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.
Advertisement