
ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ನೀಡಿದ್ದ ಕಠಿಣ ಗುರಿಯನ್ನು ತನ್ನ ಅಬ್ಬರದ ಬ್ಯಾಟಿಂಗ್ ಮೂಲಕ ಅನಾಯಾಸವಾಗಿ ಬೆಂಬತ್ತುವ ಮೂಲಕ ಪ್ರವಾಸಿ ವೆಸ್ಟ್ ಇಂಡಿಯಾ ತಂಡ ದಾಖಲೆಯ ಗೆಲವು ಪಡೆದಿದೆ.
ಭಾನುವಾರ ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡಿಸ್ ತಂಡ 4 ವಿಕೆಟ್‌ಗಳ ಗೆಲವು ದಾಖಲಿಸಿತ್ತು. ಅಲ್ಲದೆ ಮೂರು ಟಿ20 ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಾಗಲೇ ಗೆದ್ದುಕೊಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ ನಾಯಕ ಫಫ್ ಡುಪ್ಲೆಸಿಸ್(119 ರನ್, 56 ಎಸೆತ, 11 ಬೌಂಡರಿ, 5 ಸಿಕ್ಸರ್) ಅವರ ಆಕರ್ಷಕ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 231 ರನ್ ದಾಖಲಿಸಿತ್ತು.
ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಸಾಧನೆಯನ್ನು ವಿಂಡೀಸ್ ಪಡೆ ಮಾಡಿದೆ. ಅಲ್ಲದೆ ಎರಡನೇ ಬಾರಿ ಬ್ಯಾಟಿಂಗ್ ಮಾಡಿ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತ ಇದಾಗಿದೆ.
ಕಠಿಣ ಸವಾಲನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ 19.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 236 ರನ್ ಪೇರಿಸಿ ದಾಖಲೆಯ ಜಯ ಸಾಧಿಸಿತು. ವೆಸ್ಟ್ ಇಂಡೀಸ್ ತಂಡದ ಪರ ಕ್ರಿಸ್ ಗೇಯ್ಲ್(90 ರನ್, 41 ಎಸೆತ, 9 ಬೌಂಡರಿ, 7 ಸಿಕ್ಸರ್) ಹಾಗೂ ಮರ್ಲಾನ್ ಸ್ಯಾಮುಯೆಲ್ಸ್(60 ರನ್, 39 ಎಸೆತ, 7 ಬೌಂಡರಿ, 2 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನಡೆಸಿದರು.
ಈ ಜೋಡಿ ಎರಡನೇ ವಿಕೆಟ್‌ಗೆ ಬರೋಬ್ಬರಿ 152 ರನ್ ಜತೆಯಾಟ ನೀಡುವ ಮೂಲಕ ತಂಡವನ್ನು ಗೆಲವಿನತ್ತ ಕರೆದೊಯ್ದರು. ಅಂತಿಮ ಕ್ಷಣದಲ್ಲಿ ಡಾರೆನ್ ಸಾಮಿ(ಅಜೇಯ 20 ರನ್, 7 ಎಸೆತ, 2 ಬೌಂಡರಿ, 1 ಸಿಕ್ಸರ್) ಅಬ್ಬರದ ಸಿಕ್ಸರ್‌ನೊಂದಿಗೆ ತಂಡಕ್ಕೆ ರೋಚಕ ಗೆಲವು ತಂದಕೊಟ್ಟರು. ವಿಂಡೀಸ್ ಕ್ರಿಸ್ ಗೇಯ್ಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
Advertisement