ಇಂದಿನಿಂದ ಐ-ಲೀಗ್: ಬೆಂಗಳೂರಿಗೆ ಡೆಂಪೊ ಸವಾಲು

ದೇಶದ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಯಾಗಿರುವ ಐ-ಲೀಗ್ ಪಂದ್ಯಾವಳಿಗೆ ವೇದಿಕೆ ಸಜ್ಜಾಗಿದೆ...
ಬೆಂಗಳೂರಿನಲ್ಲಿ ಐ-ಲೀಗ್ ಟ್ರೋಫಿಅನಾವರಣಗೊಳಿಸಿದ ಸುನೀಲ್ ಛೆಟ್ರಿ ಹಾಗೂ ನಾಯಕ ಮಿರಾಂಡ.
ಬೆಂಗಳೂರಿನಲ್ಲಿ ಐ-ಲೀಗ್ ಟ್ರೋಫಿಅನಾವರಣಗೊಳಿಸಿದ ಸುನೀಲ್ ಛೆಟ್ರಿ ಹಾಗೂ ನಾಯಕ ಮಿರಾಂಡ.

ಬೆಂಗಳೂರು: ದೇಶದ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಯಾಗಿರುವ ಐ-ಲೀಗ್ ಪಂದ್ಯಾವಳಿಗೆ ವೇದಿಕೆ ಸಜ್ಜಾಗಿದೆ. ಸುಮಾರು 5 ತಿಂಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಈ ಬಾರಿ ಒಟ್ಟು 11 ಕ್ಲಬ್ ತಂಡಗಳು ಭಾಗವಹಿಸಲಿದ್ದು, ದೇಶೀಯ ಫುಟ್ಬಾಲ್‌ನ ಅಧಿಪತಿಯಾಗಲು ಕಾದಾಟ ನಡೆಸಲಿವೆ. ಪ್ರತಿ ತಂಡಗಳು ಫುಟ್ಬಾಲ್ ವೃತ್ತಿ ಪರತೆಯಿಂದ ಕೂಡಿದ್ದು, ಅಭಿಮಾನಿಗಳನ್ನು ರಂಜಿಸಲು ಸಕಲ ಸಿದ್ಧತೆ ನಡೆಸಿವೆ.

ಕಳೆದ ಬಾರಿಯ ಟೂರ್ನಿಯಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದವು. ಈ ಬಾರಿ 11 ತಂಡಗಳು ಮಾತ್ರ ಭಾಗವಹಿಸಲಿದ್ದು, ಅದರಲ್ಲಿ ಭಾರತ್ ಎಫ್‌ಸಿ ಹಾಗೂ ರಾಯಲ್ ವಾಹಿಂಗ್‌ಡೊ ತಂಡಗಳು ಹೊಸ ಸೇರ್ಪಡೆಯಾಗಿವೆ. ಕಳೆದ ಬಾರಿ ಭಾಗವಹಿಸಿದ್ದ ಚರ್ಚಿಲ್ ಬ್ರದರ್ಸ್, ಮೊಹಮಡನ್ ಸ್ಪೋರ್ಟಿಂಗ್, ರಂಗದಾಜಿದ್ ಮತ್ತು ಯುನೈಟೆಡ್ ಎಸ್‌ಸಿ ತಂಡಗಳು 2014-15ರ ಆವೃತ್ತಿಯಲ್ಲಿ ಭಾಗವಹಿಸುತ್ತಿಲ್ಲ.

ಟೂರ್ನಿಯ ಆರಂಭಿಕ ಕದನದಲ್ಲಿ ಹಾಲಿ ಚಾಂಪಿಯನ್ ಹಾಗೂ ಫೆಡರೇಷನ್ ಕಪ್ ಪ್ರಶಸ್ತಿ ವಿಜೇತ ಬೆಂಗಳೂರು ಎಫ್‌ಸಿ ತಂಡಕ್ಕೆ ಮಾಡಿ ಚಾಂಪಿಯನ್ ಡೆಂಪೊ ಎಫ್‌ಸಿ ಸವಾಲು ನೀಡಲು ಸಜ್ಜಾಗಿದೆ. ಜನವರಿ 17ರಂದು ಶನಿವಾರ ಈ ಟೂರ್ನಿಗೆ ಚಾಲನೆ ದೊರೆಯಲಿದೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಡೆಂಪೊ ಎಫ್‌ಸಿ ತಂಡಗಳ ನಡುವಣ ಕಾಳಗ ಕುತೂಹಲ ಮೂಡಿಸಿದೆ. ಕಳೆದ ವಾರವಷ್ಟೇ ಮುಕ್ತಾಯಗೊಂಡ ಫೆಡರೇಶನ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿನಲ್ಲಿ ಬೆಂಗಳೂರು ಎಫ್‌ಸಿ ತಂಡ, ಡೆಂಪೊ ವಿರುದ್ಧ ಗೆಲವು ದಾಖಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈಗ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಡೆಂಪೊ ಎಫ್‌ಸಿಗೆ ಉತ್ತಮ ಅವಕಾಶ ಲಭಿಸಿದೆ.

ಆತ್ಮ ವಿಶ್ವಾಸದಲ್ಲಿ ಚಾಂಪಿಯನ್ನರು
ಸತತ ಎರಡು ಪ್ರಶಸ್ತಿಗಳನ್ನು ಗೆದ್ದು ದೇಶದ ಬಲಿಷ್ಠ ಫುಟ್ಬಾಲ್ ತಂಡವಾಗಿ ಹೊರಹೊಮ್ಮಿರುವ ಬೆಂಗಳೂರು ಎಫ್‌ಸಿ, ಈ ಬಾರಿ ತವರಿನ ಅಂಗಣದಲ್ಲಿ ತನ್ನ ಅಭಿಯಾನ ಆರಂಭಿಸುತ್ತಿದೆ. ಫೆಡರೇಷನ್ ಕಪ್‌ನಲ್ಲಿ ಸೋಲರಿಯದ ತಂಡವಾಗಿ ಉಳಿದ ಬಿಎಫ್‌ಸಿ ಆತ್ಮ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಹಾಗಾಗಿ ಸಹಜವಾಗಿಯೇ ಪಂದ್ಯದ ಗೆಲುವಿನ ಫೇವರಿಟ್ ಆಗಿದೆ.

ಅಲ್ಲದೆ ಈ ವರೆಗೆ ಆಡಿರುವ ಮೂರೂ ಪಂದ್ಯಗಳಲ್ಲಿ ಡೆಂಪೊ ವಿರುದ್ಧ ಗೆದ್ದಿರುವ ಬಿಎಫ್‌ಸಿ ಪೂರ್ಣ ಪ್ರಾಬಲ್ಯ ಸಾಧಿಸಿರುವುದು ತಂಡದ ಆಟಗಾರರಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿಸಿದೆ. ಇನ್ನು ತಂಡದಲ್ಲಿ ಕೋಟ್ ಆ್ಯಶ್ಲೆ ವೆಸ್ಟ್‌ವುಡ್ ತಂತ್ರಗಾರಿಕೆಯಲ್ಲಿ, ನಾಯಕ ಸುನೀಲ್ ಛೆಟ್ರಿ, ರಾಬಿನ್‌ಸಿಂಗ್, ಜಾನ್ ಜಾನ್ಸನ್, ಸೀನ್‌ರೂನಿಯಂತಹ ಪ್ರತಿಭಾವಂತ ಆಟಗಾರರ ಪ್ರದರ್ಶನ ತಂಡಕ್ಕೆ ವರವಾಗಿ ಪರಿಣಮಿಸಿದೆ.

ಗಾಯದ ಸಮಸ್ಯೆ

ಡೆಂಪೊ ಎಫ್‌ಸಿ ತಂಡ ಅತ್ಯುತ್ತಮ ತಂಡವಾಗಿದೆಯಾದರೂ ಸದ್ಯ ತಂಡದಲ್ಲಿ ಗಾಯದ ಸಮಸ್ಯೆ ಕಾಡುತ್ತಿದೆ. ತಂಡದ ಪ್ರಮುಖ ಆಟಗರ ಟೋಲ್ಗೆ, ನಾಯಕ ಕ್ಲಿಫರ್ಡ್ ಮಿರಾಂಡ ಸೇರಿದಂತೆ ಪ್ರಮುಖ ಆಟಗಾರರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com