
ಸಿಡ್ನಿ: ಮೆಲ್ಬರ್ನ್ ಪಂದ್ಯದ ವೇಳೆ ಭಾರತ ರೋಹಿತ್ ಶರ್ಮಾ ಅವರೊಂದಿಗೆ ಜಟಾಪಟಿ ನಡೆಸಿದ್ದ ಆಸಿಸ್ ತಂಡದ ಡೇವಿಡ್ ವಾರ್ನರ್ ಗೆ ಐಸಿಸಿ ದಂಡ ವಿಧಿಸಿದ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ವಾರ್ನರ್ ಸ್ಪಷ್ಟನೆ ನೀಡಿದ್ದಾರೆ.
ನೀನು ಹೇಳಿದ್ದು ನನಗೆ ಅರ್ಥವಾಗಬೇಕಾದರೆ ಇಂಗ್ಲೀಷ್ ನಲ್ಲಿ ಹೇಳು ಎಂದಷ್ಟೇ ಹೇಳಿದ್ದೆ ಇದರ ಹಿಂದೆ ಯಾವುದೇ ಕುಚೇಷ್ಟೆ ಇರಲಿಲ್ಲ. ಪಂದ್ಯದ ವೇಳೆ ರೋಹಿತ್ ಗೆ ಏನೋ ಹೇಳಲು ಹೋದೆ ಈ ವೇಳೆ ರೋಹಿತ್ ಹಿಂದಿಯಲ್ಲಿ ಮಾತನಾಡಿದ. ಆಗ ಹಿಂದಿಯಲ್ಲಿ ಹೇಳಿದರೆ ಅದಕ್ಕೆ ಹಿಂದಿಯಲ್ಲಿ ಉತ್ತರಿಸಲು ನನಗೆ ಆಗುವುದಿಲ್ಲ. ನೀನು ನನಗೆ ಏನಾದರೂ ಹೇಳಬೇಕಿದ್ದರೆ, ಅದು ನನಗೆ ಅರ್ಥವಾಗಬೇಕಿದ್ದರೆ ಇಂಗ್ಲೀಷ್ನಲ್ಲಿ ಹೇಳು ಎಂದು ಹೇಳಿದೆ ಅಷ್ಟೆ.
ನಾನು ಹೇಳಿದ ಮಾತು ತಪ್ಪೆಂದು ನನಗೆ ಅನಿಸುತ್ತಿಲ್ಲ. ಅವರು ಹೀಗೆಯೇ ಹಿಂದಿಯಲ್ಲಿ ಮಾತನಾಡುತ್ತಿದ್ದರೆ ಇಂಗ್ಲೀಷ್ನಲ್ಲಿಯೇ ಮಾತನಾಡಿ ಎಂದು ಮುಂದೆಯೂ ಹೇಳುತ್ತೇನೆ ಎಂದು ವಾರ್ನರ್ ಹೇಳಿದರು.
ಮೆಲ್ಬರ್ನ್ ನಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯ 2ನೇ ಪಂದ್ಯದ ವೇಳೆ ಭಾರತದ ಪರ ಬ್ಯಾಟಿಂಗ್ ಮಾಡುತ್ತಿದ್ದ ರೋಹಿತ್ ಶರ್ಮಾ ಅವರೊಂದಿಗೆ ಡೇವಿಡ್ ವಾರ್ನರ್ ಮಾತಿನ ಚಕಮಕಿ ನಡೆಸಿದ್ದರು. ಇನ್ನಿಂಗ್ಸ್ನ 23ನೇ ಓವರ್ನ ವೇಳೆ ರೋಹಿತ್ ಅವರು ಜೇಮ್ಸ್ ಫಾಕ್ನರ್ ಅವರ ಎಸೆತವನ್ನು ಮಿಡ್ ಆಫ್ಗೆ ತಳ್ಳಿದರು. ಈ ವೇಳೆ ಬಾಲನ್ನು ಹಿಡಿತಕ್ಕೆ ಪಡೆದ ವಾರ್ನರ್ ನೇರವಾಗಿ ರೋಹಿತ್ನತ್ತ ಎಸೆದರು. ಇದರಿಂದ ಕುಪಿತಗೊಂಡ ರೋಹಿತ್, ವಾರ್ನರ್ ಜೊತೆ ಮಾತಿನ ಚಕಮಕಿ ನಡೆಸಿದರು.
ಈ ಪ್ರಕರಣ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ವಾರ್ನರ್ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ ಅವರಿಗೆ ಪಂದ್ಯದ ಸಂಭಾವನೆಯ ಶೇ.50 ರಷ್ಟನ್ನು ದಂಡ ವಿಧಿಸಿತ್ತು.
Advertisement