
ಮತ್ತೆ ಭಾರತದಲ್ಲಿ ವಿಶ್ವಕಪ್ ಕ್ರಿಕೆಟ್ ಜ್ವರ ಶುರುವಾಗಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯಲಿರುವ ಈ ಪ್ರತಿಷ್ಠಿತ ಪಂದ್ಯಾವಳಿ ಫೆಬ್ರವರಿ 14ರಿಂದ ಮಾರ್ಚ್ 29ರ ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಭಾರತದಲ್ಲಿ ಕ್ರಿಕೆಟ್ ಎಂದರೆ ಒಂದು ಧರ್ಮವೇ ಆಗಿದೆ. ಹಾಗಾಗಿ, ಇಲ್ಲಿ ವಿಶ್ವಕಪ್ ಆರಂಭದ ಕುತೂಹಲ ಜೋರಾಗಿದೆ. ಮೇಲಾಗಿ, ಟೀಂ ಇಂಡಿಯಾ ಕಳೆದ 2011ರ ವಿಶ್ವಕಪ್ ಎತ್ತಿಹಿಡಿದಿದೆ.
ಹಾಲಿ ಚಾಂಪಿಯನ್ ಎಂಬ ಹೆಗ್ಗಳಿಕೆಯೊಂದಿಗೆ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಮತ್ತೊಮ್ಮೆ ನಿರೀಕ್ಷೆ ಹೆಚ್ಚಾಗಿದೆ. ಮತ್ತೆ ಈ ಪಟ್ಟ ಉಳಿಸಿಕೊಳ್ಳುವುದೇ ಎಂಬ ಕುತೂಹಲ ಮೂಡಿದೆ. ಈ ಬಾರಿ ನಡೆಯುತ್ತಿರುವ ಒಟ್ಟಾರೆ 11ನೇ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲಬೇಕೆಂದು ಅನೇಕ ದೇಶಗಳು ತುದಿಗಾಲಲ್ಲಿ ನಿಂತಿವೆ. ಇಡೀ ವಿಶ್ವವನ್ನೇ ತನ್ನತ್ತ ಸೆಳೆದಿರುವ ವಿಶ್ವಕಪ್ ಆರಂಭಕ್ಕೆ ಇನ್ನು 25 ದಿನಗಳಷ್ಟೇ ಉಳಿದಿವೆ. ಆ ಹಿನ್ನೆಲೆಯಲ್ಲಿ ವಿಶ್ವಕಪ್ ಇತಿಹಾಸದ ಮೇಲೆ ಸ್ವಲ್ಪ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.
ಇತಿಹಾಸ
ಐಸಿಸಿ ಏಕದಿನ ವಿಶ್ವಕಪ್‌ಗೆ ಮೊದಲು ಮುಹೂರ್ತ ಸಿಕ್ಕಿದ್ದು 1975ರಲ್ಲಿ. ಆದರೆ, ಪುರುಷರು ವಿಶ್ವಕಪ್ ಆರಂಭವಾಗುವ ಎರಡು ವರ್ಷ ಮುನ್ನವೇ ಮಹಿಳೆಯರು ವಿಶ್ವಕಪ್ ನಡೆದಿರುವುದು ಅಚ್ಚರಿಯ ಸಂಗತಿ. ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಈವರೆಗೆ 10 ಬಾರಿ ನಡೆದಿದ್ದು, ವಿಶ್ವದ ಅತ್ಯಂತ ಜನಪ್ರಿಯ ಪಂದ್ಯಾವಳಿಗಳಲ್ಲಿ ಒಂದಾಗಿದೆ.
ಕ್ರಿಕೆಟ್ ಆರಂಭದಲ್ಲಿ ಟೆಸ್ಟ್ ಮಾದರಿಯಲ್ಲಿತ್ತು. ಆದರೆ 1971ರ ಜನವರಿ 5ರಂದು ಮೊಟ್ಟ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಸಲಾಯಿತು. ಇದಾದ ನಾಲ್ಕೇ ವರ್ಷದಲ್ಲಿ ಐಸಿಸಿ ವಿಶ್ವಕಪ್ ಪಂದ್ಯಾವಳಿಯನ್ನು 1975ರ ಜೂನ್‌ನಲ್ಲಿ ನಡೆಸಿತು. ಅಲ್ಲದೆ ನಾಲ್ಕು ವರ್ಷಕ್ಕೊಮ್ಮೆ ಈ ಟೂರ್ನಿಯನ್ನು ನಡೆಸಲು ನಿರ್ಧರಿಸಿತು.
ಆರಂಭಿಕ ಮೂರು ವಿಶ್ವಕಪ್‌ಗಳನ್ನು ಇಂಗ್ಲೆಂಡ್‌ನಲ್ಲಿ ನಡೆಸಲಾಯಿತು. 1987ರಿಂದ ವಿಶ್ವಕಪ್ ಪಂದ್ಯಾವಳಿಯನ್ನು ಇಂಗ್ಲೆಂಡ್‌ನ ಹೊರತಾಗಿ ಇತರೆ ದೇಶಗಳಲ್ಲಿ, ಅನಧಿಕೃತವಾದ ರೊಟೇಷನ್ ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಯಿತು.
ಈವರೆಗೆ ನಡೆದಿರುವ 10 ಆವೃತ್ತಿಗಳ ಪೈಕಿ ಆಸ್ಟ್ರೇಲಿಯಾ 4 ಬಾರಿ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರೆ, ವೆಸ್ಟ್ ಇಂಡೀಸ್ ಹಾಗೂ ಭಾರತ ತಲಾ 2 ಬಾರಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಉಳಿದಂತೆ, ಶ್ರೀಲಂಕಾ ಹಾಗೂ ಪಾಕಿಸ್ತಾನ ತಲಾ 1 ಬಾರಿ ಗೆದ್ದಿವೆ. ಆರಂಭಿಕ ಆವೃತ್ತಿಗಳಲ್ಲಿ ಪ್ರಾಯೋಜಕತ್ವದ ಆಧಾರದ ಮೇಲೆ ವಿಸ್ವಕಪ್ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ವಿಶ್ವಕಪ್ ಅನ್ನು ಪ್ರಾಯೋಜಕತ್ವ ವಹಿಸಿದ್ದ ಕಂಪನಿಯ ಹೆಸರಿನ ಟೂರ್ನಿಯನ್ನಾಗಿ ಕರೆಯಲಾಗುತ್ತಿದ್ದು. ಹಾಗಾಗಿ ಮೊದಲ ವಿಶ್ವಕಪ್ ಪ್ರಾಯೋಜಕತ್ವವನ್ನು ಪ್ರುಡೆನ್ಸಿಯಲ್ (ಬ್ರಿಟನ್‌ನ ಜೀವ ವಿಮಾ ಕಂಪನಿ) ವಹಿಸಿದ್ದ ಹಿನ್ನೆಲೆಯಲ್ಲಿ ಫ್ರುಡೆಂನ್ಷಿಯಲ್ ಕಪ್ ಎಂದೇ ಕರೆಯಲಾಗುತಿತ್ತು.
Advertisement