
ದುಬೈ: ಮುಂಬರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೈದಾನದಲ್ಲಿ ಆಟಗಾರರ ಅನುಚಿತ ವರ್ತನೆ ಹಾಗೂ ಸ್ಲೆಡ್ಜಿಂಗ್ ಪ್ರಮಾಣವನ್ನು ನಿಯಂತ್ರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಚಿಂತನೆ ನಡೆಸಿದೆ.
ಕಳೆದ ಆರು ತಿಂಗಳು ಅಥವಾ ಆ್ಯಶಸ್ ಸರಣಿಯ ಸಮಯದಿಂದ ಮೈದಾನದಲ್ಲಿ ಆಟಗಾರರು ಅನುಚಿತ ವರ್ತನೆ ಪ್ರದರ್ಶಿಸಿರುವ ಉದಾಹರಣೆಗಳು ಸಾಕಷ್ಟು ಕಂಡು ಬಂದಿದೆ. ಅಲ್ಲೆದ ಆಟಗಾರನೊಬ್ಬ ಮತ್ತೊಬ್ಬ ಆಟಗಾರನೊಂದಿಗೆ ಮಾತಿನ ಚಕಮಕಿ ನಡೆಸಿ ಸ್ಲೆಡ್ಜಿಂಗ್ ಮಾಡುವುದು ಉತ್ತಮ ಬೆಳವಣಿಗೆಯಲ್ಲ. ಈ ಹಿನ್ನೆಲೆಯಲ್ಲಿ ಅಂಪೈರ್ ಹಾಗೂ ಪಂದ್ಯಗಳ ರೆಫರಿ ಜತೆಗೆ ಸಾಕಷ್ಟು ಮಾತುಕತೆ ನಡೆಸಿದ್ದೇವೆ. ಮೈದಾನದಲ್ಲಿ ಆಟಗಾರರ ವರ್ತನೆ ನಿಯಂತ್ರಿಸಲು ನಿಯಮ ರೂಪಿಸಲು ಸಜ್ಜಾಗಿದ್ದೇವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ರಿಚರ್ಡ್‌ಸನ್ ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಐಸಿಸಿ ನಿಯಮಾವಳಿಯನ್ನು ಆಟಗಾರರು ಉಲ್ಲಂಘಿಸಿರುವ 12 ಪ್ರಕರಣಗಳು ದಾಖಲಾಗಿದೆ. ಹಾಗಾಗಿ ವಿಶ್ವಕಪ್‌ನಲ್ಲಿ ಇಂತಹ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ತಂಡಗಳಿಗೂ ಪಂದ್ಯಾವಳಿಗೂ ಮುನ್ನ ಪಂದ್ಯದ ರೆಫರಿಗಳು ಈ ಬಗ್ಗೆ ಸ್ಪಷ್ಟ ಎಚ್ಚರಿಕೆ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಮೂಲಕ ವಿಶ್ವಕಪ್‌ನಲ್ಲಿ, ಕಟ್ಟುನಿಟ್ಟಿನ ನಿಯಮಗಳ ಮೂಲಕ ಆಟಗಾರರ ದುರ್ವರ್ತನೆ ನಿಯಂತ್ರಿಸಿ, ವಿಶ್ವಕಪ್ ಪಂದ್ಯಾವಳಿಯನ್ನು ಯಶಸ್ವಿಯಾಗಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
Advertisement