ಮಲ್ಯ ಕೈ ತಪ್ಪಲಿದೆ ಆರ್‍ಸಿಬಿ ಒಡೆತನ?

ಐಪಿಎಲ್‍ನ ಸ್ಟಾರ್ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‍ಸಿಬಿ) ಫ್ರಾಂಚೈಸಿಯನ್ನು ಖರೀದಿಸಲು ಜೆಎಸ್‍ಡಬ್ಲ್ಯೂ ಸಮೂಹ...
ವಿಜಯ್ ಮಲ್ಯ
ವಿಜಯ್ ಮಲ್ಯ

ಬೆಂಗಳೂರು: ಐಪಿಎಲ್‍ನ ಸ್ಟಾರ್ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‍ಸಿಬಿ) ಫ್ರಾಂಚೈಸಿಯನ್ನು ಖರೀದಿಸಲು ಜೆಎಸ್‍ಡಬ್ಲ್ಯೂ ಸಮೂಹ ಮುಂದಾಗಿದೆ ಎಂಬ ಸಂಗತಿಯನ್ನು ಪಿಟಿಐ ವರದಿ ಮಾಡಿದೆ.

'ಹೌದು, ಸರಿಸುಮಾರು 300 ಕೋಟಿ ರೂ. ಮೌಲ್ಯದ ಆರ್‍ಸಿಬಿ ಫ್ರಾಂಚೈಸಿಯನ್ನು ಖರೀದಿಸಲು ಜಾಗತಿಕ ಮಟ್ಟದ ಪ್ರಮುಖ ಮದ್ಯ ಕಂಪೆನಿಯಾದ ಡಿಯಾಜಿಯೋ ಜತೆಗೂಡಿ ಚರ್ಚೆ ನಡೆಸಿದ್ದೇವೆ'' ಎಂದು ಸಜ್ಜನ್ ಜಿಂದಾಲ್ ಮಾಲೀಕತ್ವದ ಜೆಎಸ್‍ಡಬ್ಲ್ಯೂ ಕಂಪನಿ ಮೂಲಗಳು ಪಿಟಿಐಗೆ ತಿಳಿಸಿವೆ.

ಕಳೆದ ಎಂಟೂ ಆವೃತ್ತಿ ಗಳಲ್ಲಿ ಸಕ್ರಿಯವಾಗಿರುವ ಆರ್‍ಸಿಬಿ ಸದ್ಯ ಯುನೈಟೆಡ್ ಸ್ಪಿರಿಟ್ಸ್ ಲಿ. (ಯುಎಸ್‍ಎಲ್)ನ ಒಡೆತನದಲ್ಲಿದ್ದು, ಈ ಯುಎಸ್‍ಎಲ್‍ನಲ್ಲಿ ಡಿಯಾಜಿಯೋ ಪಾಲುದಾರಿಕೆ ಕೂಡ ದೊಡ್ಡದಾಗಿದೆ. 2008ರಲ್ಲಿ ಆರ್‍ಸಿಬಿ ತಂಡವನ್ನು ಯುಬಿ ದೊರೆ ಮಲ್ಯ 111.6 ಮಿಲಿಯನ್ ಡಾಲರ್ ತೆತ್ತು ಖರೀದಿಸಿದ್ದರು. ಇದು ಮುಖೇಶ್ ಅಂಬಾನಿ ಅವರ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನಂತರದ ಐಪಿಎಲ್‍ನ ಅತಿ ಶ್ರೀಮಂತ ಫ್ರಾಂಚೈಸಿ ಎಂದೆನಿಸಿತ್ತು.

ಇಲ್ಲೀವರೆಗೂ ಪ್ರಶಸ್ತಿ ಗೆಲ್ಲಲು ಆರ್‍ಸಿಬಿ ವಿಫಲವಾಗಿದ್ದರೂ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರಿಂದ ಅದರ ಮೌಲ್ಯ ಹೆಚ್ಚಿದೆ. ಕಿಂಗ್ ಫಿಶರ್ ಹಾಗೂ ಯುಬಿ ಸಮೂಹದ ನಡುವೆ ಹಣಕಾಸು ಹಂಚಿಕೆಯಾಗುತ್ತಿರುವುದರಲ್ಲಿ ಮಲ್ಯ ಅವರ ಪಾತ್ರವಿದೆ ಎಂಬುದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದುಬಂದಿರುವ ಹಿನ್ನೆಲೆಯಲ್ಲಿ ಯುಎಸ್‍ಎಲ್‍ನ ನಂಬಿಕೆಗೆ ಮಲ್ಯ ಚ್ಯುತಿ ತಂದಿರುವ ಕಾರಣ ಆರ್‍ಸಿಬಿ ವಿಕ್ರಯದ ಸುದ್ದಿ ಕೇಳಿಬಂದಿದೆ ಎನ್ನಲಾಗಿದೆ. ಇವರಿಬ್ಬರ ನಡುವಣ ಮನಸ್ಥಾಪದಿಂದ ಈ ವ್ಯವಹಾರ ಇನ್ನು ಸಾಧ್ಯವಾಗಿಲ್ಲ ಎಂಬ ಮಾತುಗಳು ಸಹ ಕೇಳಿ ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com