ವಿಶ್ವ ಹಾಕಿ: ವನಿತೆಯರ ಆಸೆ ಇನ್ನೂ ಜೀವಂತ

ತನಗಿಂತ ಕೆಳ ಶ್ರೇಯಾಂಕದ ಇಟಲಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ವನಿತಾ ಹಾಕಿ ತಂಡ, ಆ ಮೂಲಕ ಮುಂದಿನ ವರ್ಷ ರಿಯೋದಲ್ಲಿ...
ಭಾರತೀಯ ವನಿತೆಯರ ಹಾಕಿ ತಂಡ
ಭಾರತೀಯ ವನಿತೆಯರ ಹಾಕಿ ತಂಡ
ಆ್ಯಂಟ್ವೆರ್ಪ್(ಬೆಲ್ಜಿಯಂ): ತನಗಿಂತ ಕೆಳ ಶ್ರೇಯಾಂಕದ ಇಟಲಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ವನಿತಾ ಹಾಕಿ ತಂಡ, ಆ ಮೂಲಕ ಮುಂದಿನ ವರ್ಷ ರಿಯೋದಲ್ಲಿ ನಡೆಯಲಿರುವ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದ ಆಸೆಯನ್ನು ಜೀವಂತ ವಾಗಿಟ್ಟುಕೊಂಡಿದೆ.
ಗುರುವಾರ ಕೆಎಚ್‍ಸಿ ಡ್ರ್ಯಾಗನ್ಸ್ ಕ್ರೀಡಾಂಗಣದಲ್ಲಿ ನಡೆದ 5-8ನೇ ಸ್ಥಾನಕ್ಕಾಗಿನ ಕಾದಾಟದಲ್ಲಿ 13ನೇ ಶ್ರೇಯಾಂಕಿತ ಭಾರತ ವನಿತೆಯರು 16ನೇ ಶ್ರೇಯಾಂಕಿತ ಇಟಲಿ ವಿರುದ್ಧ 5-4ರ ಪೆನಾಲ್ಟಿ ಶೂಟೌಟ್‍ನ ರೋಚಕ ಗೆಲುವಿನೊಂದಿಗೆ ಸಂಭ್ರಮಿಸಿತು. ಇದೀಗ ಶನಿವಾರ ನಡೆಯಲಿರುವ ಐದು ಹಾಗೂ ಆರನೇ ಸ್ಥಾನಕ್ಕಾಗಿನ ಸ್ಪರ್ಧಾವಳಿಯಲ್ಲಿ ರಿತು ರಾಣಿ ಸಾರಥ್ಯದ ಭಾರತ ತಂಡ ಮತ್ತೊಂದು ಅಗ್ನಿಪರೀಕ್ಷೆ ಎದುರಿಸಬೇಕಿದೆ. ವರ್ಗೀಕರಣದ ಮತ್ತೊಂದು ಪ್ಲೇ-ಆಫ್ ಪಂದ್ಯದಲ್ಲಿ ಬೆಲ್ಜಿಯಂ ಹಾಗೂ ಜಪಾನ್ ಪರಸ್ಪರ ಸೆಣಸಲಿದ್ದು, ಇಲ್ಲಿ ಗೆದ್ದ ತಂಡದೊಟ್ಟಿಗೆ ಭಾರತ ವನಿತಾ ತಂಡ ಕಾದಾಡಲಿದೆ.
ಈ ಪಂದ್ಯಾವಳಿಯಲ್ಲಿ ಮೂರು ತಂಡಗಳು ಒಲಿಂಪಿಕ್ಸ್‍ಗೆ ಅರ್ಹತೆ ಗಳಿಸುವ ಅವಕಾಶವಿದೆ. ಆದಾಗ್ಯೂ ಕೆಲ ತಂಡಗಳು ಸೆಮಿಫೈನಲ್‍ಗೆ ಅರ್ಹತೆ ಗಿಟ್ಟಿಸದೆ ಹೋದರೂ, ಬಹುತೇಕ ರಿಯೋಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಇನ್ನು 60 ನಿಮಿಷಗಳ ಪೂರ್ಣಾವಧಿಯ ಪಂದ್ಯವು 1-1 ಗೋಲುಗಳಿಂದ ಸಮಬಲ ಸಾಧಿಸಿದಾಗ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಗೆ ಮೊರೆ ಹೋಗಲಾಯಿತು. ಪಂದ್ಯದಾದ್ಯಂತ ಸಿಕ್ಕ ಕೆಲವೊಂದು ಅಪೂರ್ವ ಅವಕಾಶಗಳನ್ನು ಕೈಚೆಲ್ಲಿದ ಭಾರತ ವನಿತೆಯರು, ಪೆನಾಲ್ಟಿ ಶೂಟೌಟ್ ನಲ್ಲಿ ಮಾತ್ರ ಎಚ್ಚರಿಕೆ ವಹಿಸಿತು. ಭಾರತದ ಪರ ಅನುಭವಿ ಆಟಗಾರ್ತಿ ವಂದನಾ ಕಟಾರಿಯಾ, ನವಜೋತ್ ಕೌರ್, ಅನುರಾಧ ಥೊಕ್‍ಚೊಮ್, ರಾಣಿ ರಾಂಪಾಲ್ ಹಾಗೂ ದೀಪಿಕಾ ಗೋಲು ಬಾರಿಸಿದರು.
ಇಟಲಿ ಪರ ವಾಲೆಂಟಿನಾ ಬ್ರಕೋನಿ, ಮಾರ್ಸೆಲಾ ಕ್ಯಾಸಲಿ, ಗುಲಿಯಾನ ರುಗ್ಗೇರಿ ಮತ್ತು ಚಿಯಾರ ಟಿಡ್ಡಿ ಗೋಲು ದಾಖಲಿಸುವಲ್ಲಿ ಯಶ ಕಂಡರು. ಆದರೆ ಡಲಿಲಾ ಮಿರಾಬೆಲ್ಲಾ ಬಾರಿಸಿದ ಗೋಲನ್ನು ಭಾರತದ ಗೋಲಿ ಹುಸಿಯಾಗಿಸಿದ್ದರಿಂದ ರಿತು ರಾಣಿ ಪಡೆ ವಿಜಯೀಭವವಾಯಿತು. ಭಾರತ ವನಿತಾ ತಂಡ 1980ರ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದು ಬಿಟ್ಟರೆ ಇಲ್ಲೀವರೆಗೂ ಒಲಿಂಪಿಕ್ಸ್ ಕೂಟದಲ್ಲಿ ಭಾಗವಹಿಸಲು ಅವಿರತವಾಗಿ ಶ್ರಮಿಸುತ್ತಲೇ ಬಂದಿದೆಯಾದರೂ, ಅದೇನೂ ಕೈಗೂಡಿಲ್ಲ. ಈ ದಿಸೆಯಲ್ಲಿ ಶನಿವಾರ ನಡೆಯಲಿರುವ ಪಂದ್ಯವು ಅತ್ಯಂತ ಮಹತ್ವಪೂರ್ಣವೆನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com