
ನವದೆಹಲಿ: ದೇಶದಲ್ಲೆಲ್ಲಾ ಮತ್ತೆ ರಂಗು ಪಸರಿಸುತ್ತಿದೆ... ಉದ್ದಗಲಕ್ಕೂ ಆಟಗಾರರ ಏದುಸಿರು ಜೋರಾಗಿದೆ... ಎಲ್ಲೆಲ್ಲೂ ಅದೇ ಗುನುಗುವಿಕೆ... ಕಬಡ್ಡಿ... ಕಬಡ್ಡಿ.... ಕಬಡ್ಡಿ..... ಕಬಡ್ಡಿ.... ಇದರೊಂದಿಗೆ ಸಮ್ಮಿಳಿತವಾಗಿದೆ ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ಹಾಡಿರುವ ಲೇ ಪಂಗಾ... ಹಾಡು!
ಹೌದು. ದೇಸಿ ಕ್ರೀಡೆಗಳ ಸರದಾರ ಕಬಡ್ಡಿ ತಿಯನ್ನು ವಿಶ್ವದ ಮೂಲೆಮೂಲೆಗಳಿಗೆ ಮುಟ್ಟಿಸಿದ ಪ್ರೊ. ಕಬಡ್ಡಿ 2ನೇ ಆವೃತ್ತಿಗೆ ಶನಿವಾರ ಚಾಲನೆ ದೊರೆಯಲಿದೆ. 2014ರಲ್ಲಿ ನಡೆದ ಮೊದಲ ಆವೃತ್ತಿ ಅದ್ಭುತ ಯಶಸ್ಸು ಗಳಿಸಿತ್ತು. ಪಂಗಾ ಗುಂಗು!
ಇದೀಗ, ಮತ್ತೊಮ್ಮೆ ಅದೇ ಯಶಸ್ಸು, ಅದೇ ರಂಗು, ಅದೇ ಗುಂಗಿನಲ್ಲಿ ಬರುತ್ತಿದೆ 2015ರ ಆವೃತ್ತಿ. ಕಳೆದ ಬಾರಿಯಂತೆಂಯೇ ಎಂಟು ತಂಡಗಳು ಈ ಬಾರಿಯೂ ತಮ್ಮ ಅದೃಷ್ಟ ಪರೀಕ್ಷೆಗಿಳಿಯಲಿವೆ. ಮೊದಲ ಆವೃತ್ತಿಯಲ್ಲಿ ಜೈಪುರ್ ಪಿಂಕ್ಪ್ಯಾಂಥರ್ಸ್ ತಂಡ ಚಾಂಪಿಯನ್ ಗಿ ಹೊರಹೊಮ್ಮಿತ್ತು. ಫೈನಲ್ ಪಂದ್ಯದಲ್ಲಿ ಅದು, ಯು ಮುಂಬೈ ತಂಡವನ್ನು 35-24 ಅಂಕಗಳ ಅಂತರದಲ್ಲಿ ಮಣಿಸಿ ಪ್ರಶಸ್ತಿ ಬಾಚಿಕೊಂಡಿತ್ತು. ಈ ಬಾರಿ ಯಾರು ಗೆಲ್ಲುತ್ತಾರೆ, ಯಾರು ರನ್ನರ್ ಅಪ್ ಆಗುತ್ತಾರೆ, ಯಾರು ಲೀಗ್ ಹಂತದಲ್ಲೇ ನಿರ್ಗಮಿಸುತ್ತಾರೆ, ಯಾರು ಕನಿಷ್ಟ 3-4ನೇ ಸ್ಥಾನಕ್ಕಾದರೂ ಪೈಪೋಟಿ ಮಾಡಬಹುದು ಎಂಬ ಕುತೂಹಲಗಳನ್ನು ಕೆದಕುತ್ತಾ ಹೋದರೆ ರೋಮಾಂಚನವಾಗುತ್ತದೆ. ಕಬಡ್ಡಿ ಪ್ರಿಯರಿಗಂತೂ ಜು. 18ರಿಂದ ಆ. 19ರವರೆಗೆ ಸುಗ್ಗಿಯೋ ಸುಗ್ಗಿ. ಒಟ್ಟು 37 ದಿನಗಳು ನಡೆಯಲಿರುವ ಈ ಪಂದ್ಯಾವಳಿಯಲ್ಲಿ 60 ಪಂದ್ಯಗಳು ನಡೆಯಲಿವೆ. ಎಂಟು ನಗರಗಳಲ್ಲಿ ಕಬಡ್ಡಿ ರಂಗು ಪಸರಿಸಲಿದೆ
ಬಿಗ್ ಬಿ ರಾಷ್ಟ್ರಗೀತೆ
ಶನಿವಾರ ಸಂಜೆ ನಡೆಯಲಿರುವ ಪ್ರೊ ಕಬಡ್ಡಿ 2ನೇ ಆವೃತ್ತಿಯ ಉದ್ಘಾಟನ ಸಮಾರಂಭದಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ರಾಷ್ಟ್ರಗೀತೆ ಹಾಡಲಿದ್ದಾರೆ. ಇದನ್ನು ಅವರು ತಮ್ಮ ಬ್ಲಾಗ್‍ನಲ್ಲಿ ಹೇಳಿಕೊಂಡಿದ್ದಾರೆ. 72 ವರ್ಷದ ಅಮಿತಾಭ್ ಬಚ್ಚನ್, ಈಗಾಗಲೇ ಪ್ರೊ ಕಬಡ್ಡಿಗಾಗಿ `ಲೇ ಪಂಗಾ' ಎಂಬ ಹಾಡನ್ನು ಹಾಡಿದ್ದು, ಅದೀಗಾಗಲೇ ಮಾಧ್ಯಮಗಳಲ್ಲಿ ಜನಪ್ರಿಯವಾಗಿದೆ. ಇದೀಗ, ಮುಂಬೈನ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ (ಎನ್ ಎಸ್‍ಸಿಐ) ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರೊ ಕಬಡ್ಡಿ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಮತ್ತೊಮ್ಮೆ ಮಿಂಚು ಹರಿಸಲಿದ್ದಾರೆ.
Advertisement