ಖೇಲ್ ರತ್ನಕ್ಕೆ ಸಾನಿಯಾ ಹೆಸರು ಶಿಫಾರಸು?

ಇತ್ತೀಚೆಗಷ್ಟೇ ಮುಕ್ತಾಯ ಕಂಡ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಎನಿಸಿ ಚರಿತ್ರಾರ್ಹ ಸಾಧನೆ ಮಾಡಿದ ಭಾರತದ ನಂ.1 ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ರಾಷ್ಟ್ರದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಎನಿಸಿರುವ ರಾಜೀವ್ ಗಾಂಧಿ ಖೇಲ್‍ರತ್ನ ನೀಡಿ ಗೌರವಿಸುವ ಸಾಧ್ಯತೆಗಳಿವೆ...
ಟೆನಿಸ್ ತಾರೆ ಸಾನಿಯಾ ಮಿರ್ಜಾ
ಟೆನಿಸ್ ತಾರೆ ಸಾನಿಯಾ ಮಿರ್ಜಾ

ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯ ಕಂಡ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಎನಿಸಿ ಚರಿತ್ರಾರ್ಹ ಸಾಧನೆ ಮಾಡಿದ ಭಾರತದ ನಂ.1 ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ರಾಷ್ಟ್ರದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಎನಿಸಿರುವ ರಾಜೀವ್ ಗಾಂಧಿ ಖೇಲ್‍ರತ್ನ ನೀಡಿ ಗೌರವಿಸುವ ಸಾಧ್ಯತೆಗಳಿವೆ.

ವಾಸ್ತವವಾಗಿ ಪ್ರಶಸ್ತಿಗಾಗಿ ಸಾನಿಯಾ ಅರ್ಜಿ ಸಲ್ಲಿಸದೆ ಹೋಗಿದ್ದಾಗ್ಯೂ ಇದೇ ಮಾರ್ಚ್ ಮಾಸಾಂತ್ಯದಲ್ಲಿ ಡಬ್ಲ್ಯೂಟಿಎ ರ್ಯಾಂಕಿಂಗ್‍ನಲ್ಲಿ ನಂ.1 ಸ್ಥಾನಕ್ಕೇರಿದ್ದೂ ಅಲ್ಲದೆ, ಈ ಋತುವಿನಾರ್ಧದಲ್ಲಿ ಆಕೆ ತೋರಿದ ಗಣನೀಯ ಪ್ರದರ್ಶನದಿಂದ ಸಂಪ್ರೀತವಾಗಿರುವ ಕ್ರೀಡಾ ಸಚಿವಾಲಯ ಸ್ವಯಂಪ್ರೇರಣೆಯಿಂದ ಈ ಪ್ರಶಸ್ತಿಗೆ ಅವರ ಹೆಸರನ್ನು ಶಿಫಾರಸು ಮಾಡುವ ಸಂಭವನೀಯತೆ ಇದೆ ಎಂದು `ದ ಟೈಮ್ಸ್ ಆಫ್ ಇಂಡಿಯಾ' ಜಾಲತಾಣ ವರದಿ ಮಾಡಿದೆ.

ಆದಾಗ್ಯೂ ಈ ಕುರಿತು ಪ್ರತಿಕ್ರಿಯಿಸುವುದು ಅವಸರದ ಕ್ರಮವಾದೀತು ಎಂದು ಕ್ರೀಡಾ ಕಾರ್ಯದರ್ಶಿ ಅಜಿತ್ ಶರಣ್ ಪ್ರತಿಕ್ರಿಯಿಸಿದ್ದಾರೆ. 2004ರಲ್ಲಿ ಅರ್ಜುನ ಹಾಗೂ 2006ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಸಾನಿಯಾ, ಕಳೆದ ವರ್ಷ ಇಂಚಾನ್‍ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಡಬಲ್ ಸಾಧನೆ ಮಾಡಿದ್ದರು. ಮಿಶ್ರ ಡಬಲ್ಸ್‍ನಲ್ಲಿ ಸಾಕೇತ್ ಮೈನೇನಿ ಹಾಗೂ ಮಹಿಳಾ ಡಬಲ್ಸ್‍ನಲ್ಲಿ ಪ್ರಾರ್ಥನಾ ತೊಂಬಾರಿ ಜತೆಗೂಡಿ ಬಂಗಾರದ ಪದಕ ಗೆದ್ದಿದ್ದರು. ಮಾತ್ರವಲ್ಲದೆ ಯುಎಸ್ ಓಪನ್ ಮಿಶ್ರ ಡಬಲ್ಸ್‍ನಲ್ಲಿಯೂ ಬ್ರೆಜಿಲ್‍ನ ಬ್ರುನೋ ಸೊರೆಸ್ ಜತೆಗೂಡಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ನಂಬಲರ್ಹ ಮೂಲಗಳ ಪ್ರಕಾರ ಈ ಪ್ರಶಸ್ತಿಗಾಗಿ ಒಟ್ಟು ಒಂಭತ್ತು ಅಥ್ಲೀಟ್‍ಗಳು ಅರ್ಜಿ ಗುಜರಾಯಿಸಿದ್ದಾರೆ ಎಂದು ಹೇಳಲಾಗಿದೆ.

ಕರ್ನಾಟಕದ ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ, ಪ್ಯಾರಾಲಿಂಪಿಯನ್ ಎಚ್.ಎನ್. ಗಿರೀಶ್ ಸೇರಿದಂತೆ ದೀಪಿಕಾ ಪಳ್ಳೀಕಲ್ (ಸ್ಕ್ಯಾಶ್), ಸೀಮಾ ಅಂಟಿಲ್ (ಡಿಸ್ಕಸ್ ಥ್ರೋ), ಸರ್ದಾರ್ ಸಿಂಗ್ (ಹಾಕಿ), ಟಿಂಟು ಲೂಕಾ (ಅಥ್ಲೆಟಿಕ್ಸ್) ಅಭಿಷೇಕ್ ವರ್ಮಾ ಆರ್ಚರಿ), ಪಿವಿ ಸಿಂಧು (ಬ್ಯಾಡಿಂಟನ್) ಮತ್ತು ಜೀವ್ ಮಿಲ್ಕಾ ಸಿಂಗ್ (ಗಾಲ್ಫ್) ಪ್ರತಿಷ್ಠಿತ ಪ್ರಶಸ್ತಿಯ ಕನಸು ಕಾಣುತ್ತಿದ್ದಾರೆ.

ಅಂದ್ಹಾಗೆ ಪ್ರತೀ ಬಾರಿ ಒಬ್ಬ ಅಥ್ಲೀಟ್ ಅನ್ನು ಮಾತ್ರ ರಾಜೀವ್ ಗಾಂಧಿ ಖೇಲ್‍ರತ್ನಕ್ಕೆ ಆರಿಸುವ ಪರಿಪಾಠವಿತ್ತಾದರೂ, ಅದೀಗ ಬದಲಾಗಿದೆ. 2008ರಲ್ಲಿ ಮೇರಿ ಕೋಮ್, ವಿಜೇಂದರ್ ಸಿಂಗ್ ಹಾಗೂ ಸುಶೀಲ್ ಕುಮಾರ್ ಪ್ರಶಸ್ತಿ ಪಡೆದರೆ, 2012ರಲ್ಲಿ ಯೋಗೇಶ್ವರ್ ದತ್ ಮತ್ತು ವಿಜಯ್ ಕುಮಾರ್ ಖೇಲ್‍ರತ್ನಕ್ಕೆ ಭಾಜನರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com