ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದ ತನಿಖೆಗೆ ಐಸಿಸಿ ಸಜ್ಜು
ನವದೆಹಲಿ: ಇತ್ತೀಚೆಗೆ ನಡೆದ ಐಸಿಸಿ ಟಿ 20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಅಪ್ಘಾನಿಸ್ತಾನ ಮತ್ತು ಹಾಂಕಾಂಗ್ ನಡುವಣ ನಡೆದ ಪಂದ್ಯದ ಮೇಲೆ ಮ್ಯಾಚ್ ಫಿಕ್ಸಿಂಗ್ ಅನುಮಾನ ಮೂಡಿದ್ದು, ಐಸಿಸಿಯ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಸಂಸ್ಥೆ ವಿಚಾರಣೆ ನಡೆಸಲು ಮುಂದಾಗಿದೆ.
ಕಳೆದ ಮಂಗಳವಾರವಷ್ಟೇ ನಡೆದ ರೋಚಕ ಪಂದ್ಯದಲ್ಲಿ ಫೇವರಿಟ್ ತಂಡವಾಗಿದ್ದ ಅಪ್ಘಾನಿಸ್ತಾನ ವಿರುದ್ಧ ಹಾಂಕಾಂಗ್ ತಂಡ ಕೊನೆಯ ಎಸೆತದಲ್ಲಿ ರೋಚಕ ಗೆಲುವು ದಾಖಲಿಸಿತ್ತು.
ಪಂದ್ಯದ ವೇಳೆ ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ನಡೆದ ಬೆಳವಣಿಗೆ ಹಾಗೂ ಮಾದರಿಗಳು ವಿಭಿನ್ನವಾಗಿರುವುದನ್ನು ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಸಂಸ್ಥೆ ಗಮನಿಸಿದೆ. ಅಲ್ಲದೇ ಬೆಟ್ ಫೇರ್ ಸೇರಿದಂತೆ ಇತರೆ ಪ್ರಮುಖ ಬೆಟ್ಟಿಂಗ್ ವೆಬ್ ಸೈಟ್ ಗಳ ಜತೆ ಸಂಪರ್ಕ ಸಾಧಿಸಿದೆ ಎಂದು ಕ್ರಿಕ್ ಇನ್ಫೋ ವರದಿಯೊಂದರಲ್ಲಿ ತಿಳಿಸಿದೆ.
ಈ ಪಂದ್ಯದಲ್ಲಿ ಹಾಂಕಾಂಗ್ ತಂಡ, ಅಪ್ಘಾನಿಸ್ತಾನ ತಂದ ನೀಡಿದ್ದ 161 ರನ್ ಗಳ ಗುರಿಯನ್ನು ಯಶಸ್ವಿಯ್ಯಾಗಿ ಬೆನ್ನಟ್ಟಿತ್ತು. ಕಡೆಯ ಓವರ್ ನಲ್ಲಿ ಅಪ್ಘಾನ್ ಬೌಲರ್ ಮೊಹಮದ್ ನಬಿ 16 ರನ್ ಬಿಟ್ಟುಕೊಟ್ಟಿದ್ದು ಸೋಲಿಗೆ ಕಾರಣವಾಗಿತ್ತು. ಹಾಂಕಾಂಗ್ ಈ ಮೂಲಕ ಗೆಲುವು ದಾಖಲಿಸಿ ಮುಂದಿನ ವರ್ಷ ಭಾರತದಲ್ಲಿ ಮಾ.11 ರಿಂದ ಏ.3 ವರೆಗೆ ನಡೆಯಲಿರುವ ವಿಶ್ವಕಪ್ ಟೂರ್ನಿಯ ಪ್ರಾಥಮಿಕ ಸುತ್ತಿಗೆ ಅರ್ಹತೆ ಪಡೆದುಕೊಂಡಿತ್ತು. ಈ ಪಂದ್ಯ ಮುಕ್ತಾಯಗೊಂಡ ನಂತರವೇ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಸಂಸ್ಥೆ ಪಂದ್ಯದ ಕುರಿತು ತನಿಖೆ ಆರಂಭಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ