ನವದಹೆಲಿ: ಲಾಸ್ ವೇಗಾಸ್ ನಲ್ಲಿ ಗುರುವಾರ ನಡೆದ ಐಜೆಜಿಎ ವರ್ಲ್ಡ್ ಸ್ಟಾರ್ಸ್ ಆಫ್ ಜೂನಿಯರ್ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಅಪ್ರತಿಮ ಬಾಲ ಪ್ರತಿಭೆ ಶುಭಂ ಜಗ್ಲಾನ್ ಗಾಲ್ಫ್ ಪ್ರಶಸ್ತಿ ಗೆದ್ದುಕೊಂಡಿದ್ದಾನೆ.
10 ವರ್ಷದ ಹರೆಯ ಶುಭಂ ಜಗ್ಲಾನ್ ಹರಿಯಾಣದ ಗ್ರಾಮೀಣ ಪ್ರತಿಭೆಯಾಗಿದ್ದು, ಕಳೆದ ಭಾನುವಾರವಷ್ಟೇ ಕ್ಯಾಲಿಫೋರ್ನಿಯದ ವೆಲ್ಕ್ ರಿಸಾರ್ಟ್ ಫೌಂಟೇನ್ ಕೋರ್ಸ್ ನಲ್ಲಿ ನಡೆದಿದ್ದ ಜೂನಿಯರ್ ವಿಶ್ವ ಗಾಲ್ಫ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದ. ಇದೀಗ ಮತ್ತೆ ಐಜೆಜಿಎ ವಿಶ್ವ ತಾರೆಯರ ಜೂನಿಯರ್ ಗಾಲ್ಫ್ ಸ್ಪರ್ಧೆಯಲ್ಲಿ ಮತ್ತೊಂದು ಪ್ರಶಸ್ತಿ ಗಳಿಸುವ ಮೂಲಕ ಇತಿಹಾಸ ಪುಸ್ತಕದಲ್ಲಿ ತನ್ನ ಹೆಸರನ್ನು ದಾಖಲಿಸ ಹೊರಟಿದ್ದಾನೆ.
ಗುರುವಾರ ಲಾಸ್ ವೇಗಾಸ್ ನಲ್ಲಿ ನಡೆದ ಐಜೆಜಿಎ ವಿಶ್ವ ತಾರೆಯರ ಜೂನಿಯರ್ ಗಾಲ್ಫ್ ಸ್ಪರ್ಧೆಯಲ್ಲಿ ಶುಭಂ ಜಗ್ಲಾನ್ 3 ಸುತ್ತುಗಳ ಹೋರಾಟದಲ್ಲಿ 106 ಅಂಕಗಳನ್ನು ಗಳಿಸಿದ್ದ. ಈ ಮೂಲಕ ಜಸ್ಟಿನ ಡ್ಯಾಂಗ್, ಸಿಹಾನ್ ಸಂಧು ಹಾಗೂ ಥಯ್ಲಾಂಡ್ ನ ಪಾಂಗ್ಸಪಕ್ ಲೋಪಾಕ್ ದೀ ವಿರುದ್ಧ 5 ಸ್ಟ್ರೋಕ್ ಗಳ ವಿಜಯ ದಾಖಲಿಸಿ 9-10 ವರ್ಷ ಹುಡುಗರ ವರ್ಗದಲ್ಲಿ ಪ್ರಶಸ್ತಿ ಗೆದ್ದಿದ್ದಾನೆ.
ತನ್ನ ಪ್ರಶಸ್ತಿ ಹಾಗೂ ಸಾಧನೆ ಕುರಿತಂತೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಸಂತಸ ವ್ಯಕ್ತಪಡಿಸಿರುವ ಶುಭಂ ಜಗ್ಲಾನ್, ನನ್ನ ಗೆಲವು ಬಹುವರ್ಷಗಳ ಕನಸಾಗಿದ್ದು, ಎಲ್ಲವೂ ಒಂದು ಕನಸು ಎಂಬಂತಿದೆ. ಪ್ರಶಸ್ತಿ ಗೆದ್ದಿದ್ದು ಬಹಳ ಸಂತೋಷವಾಗುತ್ತಿದ್ದು, ನನ್ನ ಎಲ್ಲಾ ಗೆಳೆಯರು ತಮ್ಮ ಶುಭಹಾರೈಕೆಗಳನ್ನು ತಿಳಿಸುತ್ತಿದ್ದಾರೆ ಎಂದು ಹೇಳಿದ್ದಾನೆ.
ಇದೀಗ ನಾನು ಏನೇ ಮಾಡಿದ್ದರೂ ಅದು ನನ್ನ ಕುಟುಂಬ ಬೆಂಬಲದಿಂದ ಹಾಗೂ ನನ್ನ ಕೋಚ್ ನೀಡಿದ ತರಬೇತಿಯಿಂದಷ್ಟೇ. ನನ್ನ ಶಾಲೆ ನನ್ನ ಸಾಧನೆಗೆ ಸಾಕಷ್ಟು ಸಹಾಯ ಮಾಡಿತ್ತು. ಅಮೆರಿಕಗೆ ಹೋಗಲು, ಆಟವಾಡಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಶಾಲೆ ನೀಡಿತ್ತು. ಪ್ರಾಮಾಣಿಕವಾಗಿ ನಾನು ಆಟವಾಡುತ್ತೇನೆ. ಅದಕ್ಕಾಗಿ ಶ್ರಮ ಪಡುತ್ತೇನೆ. ಗೆಲ್ಲುವ ಪ್ರಯತ್ನದಲ್ಲಿ ಯಾವುದೇ ಕಾರಣಕ್ಕೂ ಅಡ್ಡ ದಾರಿ ಹಿಡಿಯುವ ಪ್ರಯತ್ನ ಮಾಡಿಲ್ಲ ಎಂದು ಹೇಳಿಕೊಂಡಿದ್ದಾನೆ.
Advertisement