ಸರಳ, ಸಜ್ಜನ ಕಲಾಂಗೆ ಕ್ರೀಡಾಲೋಕ ನಮನ

ಸರಳ ಹಾಗೂ ಸೌಜನ್ಯದ ಮೂರ್ತಿಯಂತಿದ್ದ, ದೇಶದ 11ನೇ ಮಾಜಿ ರಾಷ್ಟ್ರಪತಿ ಡಾ. ಎಪಿಜೆ. ಅಬ್ದುಲ್ ಕಲಾಂ ಅವರ ನಿಧನಕ್ಕೆ ಇಡೀ ದೇಶವೇ ಶೋಕಿಸುತ್ತಿ...
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್
Updated on

ಸರಳ ಹಾಗೂ ಸೌಜನ್ಯದ ಮೂರ್ತಿಯಂತಿದ್ದ, ದೇಶದ 11ನೇ ಮಾಜಿ ರಾಷ್ಟ್ರಪತಿ ಡಾ. ಎಪಿಜೆ. ಅಬ್ದುಲ್ ಕಲಾಂ ಅವರ ನಿಧನಕ್ಕೆ ಇಡೀ ದೇಶವೇ ಶೋಕಿಸುತ್ತಿದ್ದು, ಕ್ರೀಡಾವಲಯವೂ ಅವರ ನಿಧನಕ್ಕೆ ಮಿಡಿದಿದೆ. ಭಾರತದ ಪ್ರಮುಖ ಕ್ರೀಡಾಪಟುಗಳು ಮಾಜಿ ರಾಷ್ಟ್ರಪತಿಗೆ ಟ್ವಿಟರ್‍ನಲ್ಲಿ ತಮ್ಮದೇ ಮಾತುಗಳಲ್ಲಿ ನಮಿಸಿದ್ದಾರೆ.

ಇಡೀ ದೇಶವೇ ಇಂದು ಶೋಕಸಾಗರದಲ್ಲಿ ಮುಳುಗಿದೆ. ಒಬ್ಬ ಮಾಜಿ ರಾಷ್ಟ್ರಪತಿಯನ್ನಷ್ಟೇ ಅಲ್ಲ, ಎಲ್ಲರಲ್ಲೂ ಸ್ಫೂರ್ತಿಯ ಸೆಲೆ ತುಂಬಿಸಬಲ್ಲವರಾಗಿದ್ದ ಒಬ್ಬ ಹೆಸರಾಂತ ವಿಜ್ಞಾನಿಯನ್ನು ಹಾಗೂ ಮಾನವೀಯ ಮೌಲ್ಯಗಳ ಆಗರವೇ ಆಗಿದ್ದ ಅದ್ಬುತ ವ್ಯಕ್ತಿಯೊಬ್ಬನನ್ನು ಈ ದೇಶ ಇಂದು ಕಳೆದುಕೊಂಡಿದೆ. ಕಲಾಂ ಅವರೇ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ .
-ಸಚಿನ್ ತೆಂಡೂಲ್ಕರ್ ಮಾಜಿ ಕ್ರಿಕೆಟಿಗ

ಪ್ರೀತಿಯ ಅಬ್ದುಲ್ ಕಲಾಂ ಸರ್, ಕೋಟ್ಯಾನುಕೋಟಿ ಭಾರತೀಯರ ಸ್ಫೂರ್ತಿಯ ಚಿಲುಮೆ ನೀವು. ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ ಉತ್ಲಾಹದ ಝರಿ ತುಂಬಿದಿರಿ. ನಿಮ್ಮ ನಿಧನ ದೇಶಕ್ಕಾದ ಅತಿ ದೊಡ್ಡ ನಷ್ಟ. ರೆಸ್ಟ್ ಇನ್ ಪೀಸ್.
-ಅನಿಲ್ ಕುಂಬ್ಳೆ ಮಾಜಿ ಕ್ರಿಕೆಟಿಗ

ದೇಶದ ಹಲವಾರು ನಾಗರಿಕರಿಗೆ ರೋಲ್ ಮಾಡೆಲ್ ಆಗಿದ್ದವರು. ಅಗಾಧವಾದ ದೂರದೃಷ್ಟಿತ್ವವುಳ್ಳ ನಾಯಕ ಹಾಗೂ ವ್ಯಕ್ತಿ. ಅವರ ಉತ್ಸಾಹಭರಿತ ಜೀವನಕ್ಕೆ ಸರಿಸಾಟಿಯಾದದ್ದು ಏನೂ ಇಲ್ಲ. ಅಬ್ದುಲ್ ಕಲಾಂ ಸರ್... ನಿಮಗಿದೋ ನಮ್ಮ ನಮನ.
-ವಿರಾಟ್ ಕೊಹ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ

ಒಬ್ಬ ಆಶಾವಾದಿ, ಸ್ಫೂರ್ತಿದಾಯಕ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಭಾರತೀಯ ಇತಿಹಾಸದಲ್ಲಿ ಅವರು ಹಾಗೂ ಅವರ ಸೇವೆ ಎಂದೆಂದಿಗೂ ಚಿರಸ್ಥಾಯಿ. ಮುಂದಿನ ವರ್ಷಗಳಲ್ಲಿ ನಿಮ್ಮನ್ನು ಸದಾ ಮಿಸ್ ಮಾಡಿಕೊಳ್ಳುತ್ತೇವೆ ಕಲಾಂ ಸರ್.
-ಸೈನಾ ನೆಹ್ವಾಲ್ ವಿಶ್ವದ 2ನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿ

ಅಬ್ದುಲ್ ಕಲಾಂ ಜೀ, ಭಾರತೀಯ ಚರಿತ್ರೆಯಲ್ಲಿ ನೀವೆಂದಿಗೂ ಚಿರಸ್ಥಾಯಿ. ನಿಮ್ಮಂಥ ಅತ್ಯುತ್ತಮ ವ್ಯಕ್ತಿತ್ವವುಳ್ಳ, ದೇಶದ ಅಭಿವೃದ್ಧಿಗಾಗಿ ತುಡಿತವುಳ್ಳ, ಪ್ರತಿಯೊಬ್ಬ ಪ್ರಜೆಯಿಂದಲೂ ದೊಡ್ಡ ಪ್ರಮಾಣದಲ್ಲಿ ಗೌರವಾದರ ಪಡೆದ ರಾಷ್ಟ್ರಪತಿಯನ್ನು ನಾವೆಂದೂ ನೋಡಲಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.
-ಹರ್ಭಜನ್ ಸಿಂಗ್, ಕ್ರಿಕೆಟಿಗ

ಕೆಲವೊಂದು ಸಂದರ್ಭಗಳಲ್ಲಿ ನಾನು ಕಲಾಂ ಅವರನ್ನು ಭೇಟಿಯಾಗಿದ್ದೆ. ಅಲ್ಲದೆ, ವೈಯಕ್ತಿಕವಾಗಿಯೂ ನಾನವರನ್ನು ಬಲ್ಲೆ. ಯಾರೇ ಆಗಲಿ ಅವರನ್ನೊಮ್ಮೆ ಭೇಟಿಯಾದರೆ ಸಾಕು, ಅವರ ಸರಳತೆಗೆ ಮಾರು ಹೋಗುತ್ತಿದ್ದರು. ವ್ಯಕ್ತಿತ್ವದಿಂದಲೇ ಕಲಾಂ ಅಯಸ್ಕಾಂತದಂತೆ ಎಲ್ಲರನ್ನೂ ಸೆಳೆಯಬಲ್ಲವರಾಗಿದ್ದರು.  
-ಸೌರವ್ ಗಂಗೂಲಿ, ಕ್ರಿಕೆಟಿಗ

ನಿಮ್ಮ ಕೊನೆಯ ಉಸಿರಿನವರೆಗೂ ಇತರರಲ್ಲಿ ಸ್ಫೂರ್ತಿ ತುಂಬುತ್ತಾ ಸಾಗಿದಿರಿ. ಮೇಧಾವಿ ವ್ಯಕ್ತಿಯಾಗಿ, ಸಜ್ಜನನಾಗಿ, ದೇಶಭಕ್ತ ವಿಜ್ಞಾನಿಯಾಗಿ ಎಲ್ಲಕ್ಕಿಂತ ಹೆಚ್ಚಾಗಿ ಸಹೃದಯತೆಯ ಮಹಾಸಾಗರವಾಗಿದ್ದ ನೀವು ಎಂದೆಂದಿಗೂ ಚಿರಸ್ಮರಣೀಯ.
-ವಿಶ್ವನಾಥನ್ ಆನಂದ್ ಚೆಸ್ ಕ್ರೀಡಾಳು.

ತಮ್ಮ ಜೀವನದಲ್ಲಿ ಅತಿ ಹೆಚ್ಚು ಪ್ರೀತಿಸಿದ ಬೋಧನೆಯ ಸೇವೆಯಲ್ಲಿದ್ದಾಗಲೇ ಅಬ್ದುಲ್ ಕಲಾಂ ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ. ಕೊನೇ ಘಳಿಗೆಯಲ್ಲೂ ಅವರು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಹೊನಲು ಹರಿಸುವಲ್ಲಿ ನಿರತರಾಗಿದ್ದು ಶ್ಲಾಘನೀಯ.
-ವಿವಿಎಸ್ ಲಕ್ಷ್ಮಣ್ ಮಾಜಿ ಕ್ರಿಕೆಟಿಗ

ಇದೊಂದು ಮಹಾನ್ ದುರ್ದಿನ, ನಮ್ಮೆಲ್ಲರ ಪ್ರೀತಿಯ, ಅಚ್ಚುಮೆಚ್ಚಿನ ವ್ಯಕ್ತಿ ಅಬ್ದುಲ್ ಕಲಾಂ ಅವರು ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ರೋಹಿಣಿಯಂಥ ಉತ್ಕೃಷ್ಟ ತಂತ್ರಜ್ಞಾನದ ಕ್ಷಿಪಣಿ ತಯಾರಿಸಿದ್ದನ್ನು ಭಾರತೀಯರು ಎಂದಿಗೂ ಮರೆಯಲಾರರು.
-ಅಶ್ವಿನ್ ರವಿಚಂದ್ರನ್, ಕ್ರಿಕೆಟಿಗ

ಅಬ್ದುಲ್ ಕಲಾಂ ಅವರು ಇಹಲೋಕ ತ್ಯಜಿಸಿದರು ಎಂಬ ಸುದ್ದಿಯೇ ಆಘಾತಕಾರಿಯಾಗಿದೆ. ಅವರು ಹೀಗೆ  ಏಕಾಏಕಿಯಾಗಿ ನಮ್ಮನ್ನು ಅಗಲುತ್ತಾರೆಂದು ಕನಸಿನಲ್ಲೂ ಎಣಿಸಿರಲಿಲ್ಲ.
-ಕೆ.ಎಲ್. ರಾಹುಲ್, ಕರ್ನಾಟಕದ ಕ್ರಿಕೆಟಿಗ

ನಿಜಕ್ಕೂ ಬೇಸರದ ಸಂಗತಿ. ಅಬ್ದುಲ್ ಕಲಾಂ ಇಂದಿನಿಂದ ನಮ್ಮೊಂದಿಗಿರುವುದಿಲ್ಲ ಎಂಬುದೇ ದುಃಖದಾಯಕ ವಿಚಾರ. ಸುಂದರ ವ್ಯಕ್ತಿತ್ವವುಳ್ಳ ಒಬ್ಬ ವ್ಯಕ್ತಿಯನ್ನು ನಾವಿಂದು
ಕಳೆದುಕೊಂಡಿದ್ದೇವೆ. ರೆಸ್ಟ್ ಇನ್ ಪೀಸ್.
-ರೋಹನ್ ಬೋಪಣ್ಣ, ಟೆನಿಸ್ ಆಟಗಾರ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com