
ಜೈಪುರ: ಬೆಂಗಾಲ್ ವಾರಿಯರ್ಸ್ ತಂಡದ ದೌರ್ಬಲ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದ ಪುನೇರಿ ಪಲ್ಟಾನ್ಸ್ ತಂಡ ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಲೀಗ್‍ನಲ್ಲಿ
ಮೊದಲ ಗೆಲುವು ದಾಖಲಿಸಿದೆ.
ಬುಧವಾರ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪುನೇರಿ ಪಲ್ಟಾನ್ಸ್ ತಂಡ 33-29 ಅಂಕಗಳ ಅಂತರದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ
ಜಯ ದಾಖಲಿಸಿದೆ. ಪಂದ್ಯದ ಆರಂಭದಿಂದ ಅಂತಿಮ ಹಂತದವರೆಗೂ ಆಕರ್ಷಕ ಪ್ರದರ್ಶನ ನೀಡಿದ ಪುನೇರಿ ಪಲ್ಟಾನ್ಸ್ ತಂಡ ಪಂದ್ಯದ ಮೊದಲ ಅವಧಿಯ ಮುಕ್ತಾಯಕ್ಕೆ 17-10ರಿಂದ 7 ಅಂಕಗಳ ಅತ್ಯುತ್ತಮ ಮುನ್ನಡೆ ಸಂಪಾದಿಸಿತ್ತು.
ಬೆಂಗಾಲ್ ವಾರಿಯರ್ಸ್ ತಂಡದ ರಕ್ಷಣಾತ್ಮಕ ವಿಭಾಗವನ್ನು ಸಂಪೂರ್ಣವಾಗಿ ಮೆಟ್ಟಿನಿಂತ ಪಲ್ಟಾನ್ಸ್ ಆಟಗಾರರು. ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. ರೈಡರ್ ಪ್ರವೀಣ್ ನಿವಾಲೆ 7 ಅಂಕಗಳನ್ನು ತಂದುಕೊಟ್ಟರೆ, ಸುರೇಂದರ್ ಸಿಂಗ್ 6, ರವಿ ಕುಮಾರ್ 5 ಹಾಗೂ ನಾಯಕ ವಜೀರ್ 4 ಅಂಕಗಳನ್ನು ಕಲೆ ಹಾಕಿದರು.
ಮತ್ತೆ ಸೋತ ಪ್ಯಾಂಥರ್ಸ್: ಕಳೆದ ಪಂದ್ಯ ದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಗೆಲುವು ಸಂಪಾದಿಸಿ, ಟೂರ್ನಿಯಲ್ಲಿ ಮೊದಲ ಜಯ ಪಡೆದಿದ್ದ ಹಾಲಿ ಚಾಂಪಿಯನ್ ಜೈಪುರ ಪಿಂಕ್
ಪ್ಯಾಂಥರ್ಸ್ ತಂಡ ಮತ್ತೊಮ್ಮೆ ಸೋಲಿನ ಸುಳಿಗೆ ಸಿಲುಕಿದೆ. ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ 22-33 ಅಂತರದಿಂದ ಡೆಲ್ಲಿ ದಬಾಂಗ್ ವಿರುದ್ಧ ಸೋಲನುಭವಿಸಿತ್ತು.
11 ಅಂಕಗಳ ಅಂತರದ ಪರಾಭವದೊಂದಿಗೆ ತವರಿನಲ್ಲಿ ಜೈಪುರ ಪಡೆ ನಾಲ್ಕು ಪಂದ್ಯಗಳ ಪೈಕಿ ಕೇವಲ 1ರಲ್ಲಿ ಮಾತ್ರ ಜಯಿಸಿದಂತಾಗಿದೆ. ಪಂದ್ಯದಲ್ಲಿ ಡೆಲ್ಲಿ ತಂಡದ ನಾಯಕ ರವೀಂದರ್ ಪಾಹಲ್ 8 ಅಂಕಗಳನ್ನು ಸಂಪಾದಿಸಿ ಅತ್ಯುತ್ತಮ ಪ್ರದರ್ಶನ ನೀಡಿದರೆ, ಇವರಿಗೆ ತಕ್ಕ ಸಾಥ್ ನೀಡಿದ ಕಾಶಿಲಿಂಗ್ ಅಡಾಕೆ ಮತ್ತು ರೋಹಿತ್ ಕುಮಾರ್ ಚೌಧರಿ ತಲಾ 7 ಅಂಕಗಳನ್ನು ಪಡೆದರು.
ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಪರ ನಾಯಕ ಜಸ್ವೀರ್ ಸಿಂಗ್ ಸಂಪೂರ್ಣ ವೈಫಲ್ಯ ಅನುಭವಿಸಿದ್ದು, ನುಂಗಲಾರದ ತುತ್ತಾಗಿ ಪರಿಣಮಿಸಿತು.
ಇಂದಿನ ಪಂದ್ಯ ಪಾಟ್ನಾ ಪೈರೆಟ್ಸ್ v/s ತೆಲುಗು ಟೈಟಾನ್ಸ್ ರಾತ್ರಿ 8ಕ್ಕೆ
Advertisement